HomeArt and Literatureಭಾವೈಕ್ಯತೆಯ ಬೆಳಕು ಡಾ.ತೋಂಟದ ಸಿದ್ಧಲಿಂಗ ಶ್ರೀಗಳು

ಭಾವೈಕ್ಯತೆಯ ಬೆಳಕು ಡಾ.ತೋಂಟದ ಸಿದ್ಧಲಿಂಗ ಶ್ರೀಗಳು

For Dai;y Updates Join Our whatsapp Group

Spread the love

ಮಾನವ ಕೇವಲ ಮಾನವನಾಗಿ ಉಳಿದಿದ್ದ ದಿನಗಳು ಮುಗಿದುಹೋಗಿವೆ. ಈಗ ಮಾನವ ನಿರ್ದಿಷ್ಟ ಪಂಥದವನಾಗಿ, ಜಾತಿ-ಧರ್ಮದವನಾಗಿ, ವರ್ಗ-ವರ್ಣದವನಾಗಿ ಗುರುತಿಸಿಕೊಳ್ಳುವ ಸಂಕ್ರಮಣ ಕಾಲ. ಮಾನವನನ್ನು ಸಂಕುಚಿತ ಗುಂಪುಗಳಲ್ಲಿ ಬಂಧಿಸುವ ವಿಚ್ಛಿದ್ರಕಾರಿ ಶಕ್ತಿಗಳು ದಿನಗಳು ಉರುಳಿದಂತೆ ಹುಲುಸಾಗಿ ಬೆಳೆಯುತ್ತಿರುವ ವಿಷಮ ಸ್ಥಿತಿಯಲ್ಲಿ ಮಾನವರ ನಡುವಿನ ಬಾಂಧವ್ಯ ಬೆಸೆಯುವ ಮಹತ್ವದ ಕೊಂಡಿಯಾಗಿ ಭಾವೈಕ್ಯತೆಯು ನಮ್ಮನ್ನು ಈಗಲೂ ಆಶಾದಾಯಕರನ್ನಾಗಿಸಿದೆ.

ಭಾವೈಕ್ಯತೆಯ ಕೃಷಿಯಿಂದ ಸಮಾಜದಲ್ಲಿ ಐಕ್ಯತಾ ಮನೋಭಾವವನ್ನು ವೃದ್ಧಿಸಬೇಕಿದೆ. ಈ ನಿಟ್ಟಿನಲ್ಲಿ ಗದುಗಿನ ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಕ್ರಮಿಸಿದ ಹಾದಿ ಇಂದು-ಮುಂದೆಂದು ಸಮಾಜಕ್ಕೆ ಮಾರ್ಗದರ್ಶಿ ಮೈಲುಗಲ್ಲಾಗಿರಲಿದೆ ಎನ್ನುವುದು ಸಂದೇಹರಹಿತ ಸತ್ಯ. ಮಠಗಳು ಧರ್ಮಗಳ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತವೆ. ಒಂದು ವರ್ಗದ ಜನರಿಗೆ ಮಾತ್ರ ಅವುಗಳ ಕಾರ್ಯವ್ಯಾಪ್ತಿ ಸೀಮಿತ ಎನ್ನುವ ಸಿದ್ಧಸೂತ್ರ ಹಿಂದೆ ಜಾರಿಯಲ್ಲಿತ್ತು. ಆದರೆ ಶ್ರೀಗಳು ಪೀಠಾರೋಹಣಗೈದನಂತರ ಅವರ ಸಮಾಜಮುಖಿ ಕಾರ್ಯಚಟುವಟಿಕೆಗಳಿಂದ ಅಂಥ ಸೀಮಿತ ಧಾರ್ಮಿಕ ಸೂತ್ರಗಳನ್ನು ಕಿತ್ತೆಸೆದು ಸರ್ವ ಜನಾಂಗದ ಶಾಂತಿಯ ತೋಟವನ್ನು ಪೋಷಿಸಲು ಪ್ರಾರಂಭಿಸಿದರು.

1974ರಲ್ಲಿ ಎಡೆಯೂರು, ಡಂಬಳ-ಗದಗ ಮಠದ ಪೀಠಾಧಿಪತಿಗಳಾಗಿ ಬಂದಾಗ ಡಂಬಳಮಠ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಹಂತಕ್ಕೆ ತಲುಪಿತ್ತು. ಸುಮಾರು 60 ವರ್ಷಗಳ ಕಾಲದಿಂದ ಶ್ರೀಮಠದ ಸ್ಥಿತಿ ಹಾಳು ಹಂಪಿಯಂತೆ ಒಂದು ಕಾಲಕ್ಕೆ ಮೈಸೂರು ಮಹಾರಾಜರ ಸಂಸ್ಥಾನಕ್ಕೆ ಸಮವಾಗಿದ್ದ, ಲಿಂಗಾಯತರ ತಿರುಪತಿ ಎಂದು ಕರೆಸಿಕೊಳ್ಳುತ್ತಿದ್ದ ಈ ಮಠಕ್ಕೆ ಶ್ರೀಗಳು ಬಂದಾಗ ಒಬ್ಬ ವ್ಯಕ್ತಿಗೆ ಒಂದು ಹೊತ್ತಿನ ಊಟ ಕೊಡದಂತಹ ದಯನೀಯ ಸ್ಥಿತಿಗೆ ಬಂದು ತಲುಪಿತ್ತು. ಕರ್ತೃ ಗದ್ದುಗೆಯಲ್ಲಿ ಒಂದು ಲೈಟ್ ಬಿಟ್ಟರೆ ಎರಡನೆಯ ಲೈಟ್ ಸಹ ಇರಲಿಲ್ಲ. ಅಂತಹ ಸಂದರ್ಭದಲ್ಲಿ ಶ್ರೀಗಳು ಕಾರ್ತಿಕದ ಕತ್ತಲಲ್ಲಿ ಆಕಾಶದೀಪದಂತೆ ಈ ಮಠಕ್ಕೆ ಬಂದರು.

ಬಸವಣ್ಣನವರ ಕಾಯಕ, ದಾಸೋಹ, ಸಮಾನತೆ ತತ್ವವನ್ನು ಅಕ್ಷರಶಃ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದ ಶ್ರೀಗಳು ತಮ್ಮನ್ನು ಶ್ರೀಗಂಧದಂತೆ ಸಮಾಜಕ್ಕೆ ಸವಿಸಿಕೊಂಡು ಸುಗಂಧ ಬೀರಿದರು. ಅವರು ಡಂಬಳದಲ್ಲಿ ದ್ರಾಕ್ಷಿ ದಾಳಂಬಿ, ಬಾಳೆ, ತೆಂಗಿ ಇವುಗಳನ್ನು ಮೊದಲ ಬಾರಿಗೆ ಈ ಭಾಗದಲ್ಲಿ ಬೆಳೆದರು. ಬಡ ವಿದ್ಯಾರ್ಥಿಗಳಿಗೆ ಬೋರ್ಡಿಂಗ್ ಪ್ರಾರಂಭಿಸಿದರು. ಶ್ರೀಗಳು ಎಂದೂ ತಮ್ಮ ತುಲಾಭಾರ ಮಾಡಿಸಿಕೊಳ್ಳಲಿಲ್ಲ, ಹುಟ್ಟುಹಬ್ಬ ಆಚರಿಸಿಕೊಳ್ಳಲಿಲ್ಲ. ಆ ಜಾತಿ-ಈ ಜಾತಿ ಅನ್ನಲಿಲ್ಲ. ಬರೀ ಪೂಜೆ, ಮಂತ್ರ, ಪ್ರಸಾದ ಮಾಡಿ ಕೈಕಟ್ಟಿ ಕೂಡಲಿಲ್ಲ. ತಳಹಂತದಿಂದ ಕೃಷಿಕಾಯಕ ಮಾಡಿ ಶ್ರೀಮಠವನ್ನು ಕಟ್ಟಿ ಬೆಳೆಸಿದರು.

ಅಡಿಗೆ ಮಾಡಿ ಭಕ್ತರಿಗೆ, ವಿದ್ಯಾರ್ಥಿಗಳಿಗೆ ಉಣಬಡಿಸಿದ ತಾಯಿಯಾದರು. ಭಕ್ತರು, ವಿದ್ಯಾರ್ಥಿಗಳು ಉಂಡು ಉಳಿದರೆ ತಾವು ಉಂಡರು. ಅವರು ವಿರಳರಲ್ಲಿ ವಿರಳರು, ಡಂಬಳ, ಗದಗ, ಎಡೆಯೂರು, ಹಾವೇರಿ, ಕಗ್ಗೆರೆಗಳಲ್ಲಿ ಶ್ರೀಗಳು ದಾಸೋಹದ ಮಹಾಮನೆಗಳನ್ನು ಪ್ರಾರಂಭಿಸಿ ಮುನ್ನಡೆಸಿದರು. ದಾಸೋಹ ದಲ್ಲಿ ಭಕ್ತರು ಹೆಚ್ಚು ಊಟ ಮಾಡಿದಷ್ಟು ಅವರಿಗೆ ಬಹಳ ಸಂತೋಷವಾಗುತಿತ್ತು. ಅದಕ್ಕೆ ಸಾಕ್ಷಿಯೆಂಬAತೆ ಇಂದು ಎಡೆಯೂರು ದಾಸೋಹದಲ್ಲಿ ಒಂದೊಂದು ದಿನ ಐವತ್ತು ಸಾವಿರಕ್ಕೂ ಅಧಿಕ ಜನ ಪ್ರಸಾದ ಸ್ವೀಕರಿಸುತ್ತಾರೆ.

ಸಮಾನತೆಗೆ ಹೆಸರಾಗಿದ್ದ ಶ್ರೀಗಳು ಮಠದ ಬಾಗಿಲನ್ನು ಎಲ್ಲರಿಗೂ ಮುಕ್ತಗೊಳಿಸಿ ಮಠವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸಿದರು. ಮೊದಲು ಜಾತ್ರೆಗಳು ಮೂಢನಂಬಿಕೆಗಳ, ಕಂದಾಚಾರಗಳ ಪ್ರದರ್ಶನಕ್ಕೆ ಹೆಸರಾಗಿದ್ದವು. ಇವುಗಳಿಗೆ ತಿಲಾಂಜಲಿ ನೀಡಿ 1976ರಲ್ಲಿ ನಾಡಿನಲ್ಲಿ ಭಾವೈಕ್ಯತೆಗಾಗಿ ಮೊಟ್ಟಮೊದಲು ರೊಟ್ಟಿ ಜಾತ್ರೆಯನ್ನು ಡಂಬಳದಲ್ಲಿ ಪ್ರಾರಂಭಿಸಿದರು. ಈ ರೊಟ್ಟಿ ಜಾತ್ರೆಯಲ್ಲಿ ಎಲ್ಲ ಜನಾಂಗದ ಭಕ್ತರು ಪಾಲ್ಗೊಂಡು ಮಠದ ಆವರಣದಲ್ಲಿ ಸಾಮೂಹಿಕವಾಗಿ ಪಂಕ್ತಿ ಭೇದವಿಲ್ಲದೆ ಪ್ರಸಾದ ಸ್ವೀಕರಿಸುವ ವಿನೂತನ ಪದ್ಧತಿ ಜಾರಿಗೆ ತಂದು ಜಾತಿ ವ್ಯವಸ್ಥೆಯ ನಿರ್ಮೂಲನೆಗೆ ಪಣತೊಟ್ಟರು. ಆ ಮೂಲಕ ಬಸವಣ್ಣನವರ ದಾಸೋಹ, ಮತ್ತು ಸಮಾನತೆ ತತ್ವವನ್ನು ಎತ್ತಿಹಿಡಿದು ಬದುಕಿನುದ್ದಕ್ಕೂ ಭಾವೈಕ್ಯತೆಯ ಬೆತ್ತವನ್ನು ಹಿಡಿದು ನಡೆದರು. ಅವರ ಹಾದಿಯಲ್ಲಿ ನಡೆದು ಬರುತ್ತಿರುವ ಪೂಜ್ಯ ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಲಿಂಗೈಕ್ಯ ಶ್ರೀಗಳ ವಿಚಾರಧಾರೆಗಳನ್ನು ಮುನ್ನಡೆಸಿಕೊಂಡು ಹೊರಟಿರುವುದು ಭಕ್ತರಿಗೆ ಸಂತಸದ ವಿಷಯ.

ಶ್ರೀಮಠದಿಂದ ರಾಷ್ಟ್ರದಲ್ಲೇ ಮೊದಲ ಬಾರಿಗೆ ಅಂಬೇಡ್ಕರ ಪುರಾಣ ಮುದ್ರಿಸಿ, ಪ್ರವಚನದ ಮೂಲಕ ಪುರಾಣದ ಸಾರವನ್ನು ಪ್ರಸರಣಗೊಳಿಸಿದರು. ಇದಲ್ಲದೇ ಬುದ್ಧ, ಸೇವಾಲಾಲ ಪುರಾಣಗಳನ್ನು ಮುದ್ರಿಸಿದರು. ಜಾತ್ರಾ ಸಮಿತಿಯಲ್ಲಿ ಪ್ರಥಮ ಬಾರಿಗೆ ಲಿಂಗಾಯತೇತರರನ್ನು ಸಮೀಕರಿಸಿಕೊಂಡ ಶ್ರೀಗಳು, ವರ್ಗ-ವರ್ಣ ಸೀಮೋಲ್ಲಂಘನೆಯ ಮೂಲಕ ಹೊಸ ಮನ್ವಂತರಕ್ಕೆ ನಾಂದಿ ಹಾಡಿದರು. ಭಾವೈಕ್ಯತೆಯನ್ನು ಬಿತ್ತಿ ಬೆಳೆದ ಶ್ರೀಗಳ ಸತ್ಕಾರ್ಯವನ್ನು ಗುರುತಿಸಿದ ಅಂದಿನ ಕೇಂದ್ರ ಸರ್ಕಾರ ರಾಷ್ಟ್ರೀಯ ಕೋಮು ಸೌಹಾರ್ದತಾ ಹಾಗೂ ಭಾವೈಕ್ಯತಾ ಪುರಸ್ಕಾರವನ್ನು ನೀಡಿ ಗೌರವಿಸಿತು. ತನ್ಮೂಲಕ ಶ್ರೀಗಳು ಇಡೀ ದಕ್ಷಿಣ ಭಾರತದಲ್ಲೇ ಈ ಪ್ರಶಸ್ತಿ ಸ್ವೀಕರಿಸಿದ ಮೊದಲಿಗರಾದರು.

ತೋಂಟದ ಶ್ರೀಗಳ ಜನ್ಮದಿನವನ್ನು ಭಾವೈಕ್ಯತಾ ದಿನವನ್ನಾಗಿ ಆಚರಿಸಬೇಕೆಂಬುದು ನಾಡಿನ ಲಕ್ಷಾಂತರ ಭಕ್ತಗಣದ ಭಿನ್ನಹವಾಗಿದೆ. ಕೆಲವು ವರ್ಷಗಳ ಹಿಂದೆ ರಾಜ್ಯ ಸರ್ಕಾರ ಸಿದ್ಧಗಂಗಾ ಮಠದ ಲಿಂ. ಶಿವಕುಮಾರ ಶ್ರೀಗಳ ಜನ್ಮದಿನವನ್ನು ‘ದಾಸೋಹ ದಿನ’ವನ್ನಾಗಿ ಆಚರಿಸಲು ನಿರ್ಣಯ ಕೈಕೊಂಡಿದ್ದು, ಸ್ವಾಗತಾರ್ಹವಾಗಿದೆ. ಅಂತೆಯೇ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಜನ್ಮದಿನವನ್ನೂ ಕೂಡ ಭಕ್ತರ ಒತ್ತಾಸೆಯಂತೆ ‘ಭಾವೈಕ್ಯತಾ ದಿನ’ವನ್ನಾಗಿ ಆಚರಿಸಿದರೆ ಈಗ ಕರ್ನಾಟಕದಲ್ಲಿ ಜಾತಿ ಮತ್ತು ಧರ್ಮಗಳ ಹೆಸರಿನಲ್ಲಿ ಉಂಟಾಗಿರುವ ಕಲುಷಿತ ವಾತಾವರಣವನ್ನು ತಿಳಿಗೊಳಿಸಿ ಐಕ್ಯತೆಯ ಸಮ ಸಮಾಜವನ್ನು ನಿರ್ಮಾಣ ಮಾಡಿ ಎಲ್ಲರೂ ಭಾವೈಕ್ಯತೆಯಿಂದ ಬದುಕಲು ಸಾಧ್ಯವಾಗುತ್ತದೆ. ಸರ್ಕಾರ ಶೀಘ್ರ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಜಯಂತಿಯನ್ನು ಭಾವೈಕ್ಯತಾ ದಿನವನ್ನಾಗಿ ಆಚರಿಸಲು ನಿರ್ಧರಿಸಬೇಕಿದೆ.

– ಕೊಟ್ರೇಶ ಮೆಣಸಿನಕಾಯಿ.

ಅಡವಿಸೋಮಾಪೂರ.

ಮಠಕ್ಕೆ ಪಾದವಿರಿಸಿದ ಮರುಕ್ಷಣವೇ ಮಠದ ಮುಂಬಾಗಿಲಿನಲ್ಲಿದ್ದ ‘ಲಿಂಗವAತರಿಗೆ ಮಾತ್ರ ಪ್ರವೇಶ’ ಎನ್ನುವ ಫಲಕವನ್ನು ಸಿದ್ಧಲಿಂಗ ಶ್ರೀಗಳು ತೆರವುಗೊಳಿಸಿದರು, ಅಲ್ಲಿಂದ ನಾಡಿನ ಧಾರ್ಮಿಕ-ಸಾಂಸ್ಕೃತಿಕ ಇತಿಹಾಸದಲ್ಲಿ ಹೊಸದೊಂದು ಕ್ರಾಂತಿಕಾರಿ ಶಕೆ ಆರಂಭವಾಯಿತು. ‘ಇವನಾರವ ಇವನಾರವ ಎಂದೆನಿಸದಿರಯ್ಯಾ’ ಎಂಬ ಬಸವ ವಾಣಿಯನ್ನೇ ತಮ್ಮ ನಡೆ-ನುಡಿಗಳ ಮೂಲಕ ಜೀವನದುದ್ದಕ್ಕೂ ಪುನರುಚ್ಛರಿಸಿದ ಶ್ರೀಗಳು ಮಠವನ್ನು ವರ್ಗ-ವರ್ಣ ರಹಿತ ಸಾಮಾಜಿಕ ಕೇಂದ್ರವನ್ನಾಗಿಸಿದರು. ಶ್ರೀಮಠದ ಮುಖವಾಣಿ ಶಿವಾನುಭವ ಕಾರ್ಯಕ್ರಮವನ್ನು ನಾಡಗೀತೆಯ ಆಶಯದಂತೆ ಹಿಂದೂ-ಕ್ರೈಸ್ತ ಮುಸಲ್ಮಾನ, ಸಿಖ್-ಪಾರಸೀ ಜೈನರುದ್ಯಾನವನ್ನಾಗಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!