ವಿಜಯಸಾಕ್ಷಿ ಸುದ್ದಿ, ಗದಗ: ನಗರದಲ್ಲಿ ನಡೆದ ಅತಿರುದ್ರ ಮಹಾಯಾಗ ಮತ್ತು ಕಿರಿಯ ಕುಂಭಮೇಳವನ್ನು ಗದುಗಿನ ಜನತೆ ಅತ್ಯಂತ ಭಕ್ತಿಪೂರ್ವಕವಾಗಿ ಯಶಸ್ವಿಗೊಳಿಸಿದ್ದಾರೆ. ಈ ಸೇವಾಕಾರ್ಯದ ಫಲದಿಂದ ಲೋಕಲ್ಯಾಣವಾಗಲಿದೆ ಎಂದು ನಾಗಾಸಾಧು ಮಹಾಂತ ಸಹದೇವಾನಂದ ಗಿರಿಜಿ ಮಹಾರಾಜರು ಹೇಳಿದರು.
ನಗರದಲ್ಲಿ ಅತಿರುದ್ರಯಾಗವನ್ನು ಯಶಸ್ವಿಗೊಳಿಸಿದ ಗುರೂಜಿ ಅವರನ್ನು ಬೀಳ್ಕೊಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ನಗರದಲ್ಲಿ ಅತಿರುದ್ರಯಾಗ ಯಶಸ್ವಿಯಾಗಲು ಇಲ್ಲಿನ ಜನತೆ ಹಾಗೂ ಸೇವಾಕಾರ್ಯಕರ್ತರು ತನು-ಮನ-ಧನದಿಂದ ಸೇವೆ ಸಲ್ಲಿಸಿದ್ದಾರೆ. ಅವರ ಸೇವೆ ವ್ಯರ್ಥವಾಗುವದಿಲ್ಲ. ಈ ಮಹಾಯಜ್ಞದಲ್ಲಿ ಕಳೆದ ಎಂಟು ದಿನಗಳವರೆಗೆ ನಡೆದ ಮಹಾಯಾಗದ ಭಸ್ಮವನ್ನು 60 ದಿನಗಳ ನಂತರ ಪ್ರಯಾಗರಾಜದಲ್ಲಿ, ತುಂಗಭದ್ರ ನದಿಯಲ್ಲಿ ವಿಸರ್ಜನೆ ಮಾಡಲಾಗುವುದು ಮತ್ತು ಗದುಗಿನ ಜನತೆಗೂ ಸಹ ನೀಡಲಾಗುವುದು ಎಂದು ಹೇಳಿದರು.
ಇಲ್ಲಿ ಜರುಗಿದ ಮಹಾಯಾಗ ಮತ್ತು ಭಕ್ತರು ತೋರಿದ ಪ್ರೀತಿಯು ನನ್ನನ್ನು ಕಟ್ಟಿ ಹಾಕಿರುವದರಿಂದ ಗದಗ ನಗರವನ್ನು ಬಿಟ್ಟು ಹೋಗಲು ಮನಸ್ಸಿಲ್ಲ. ಆದರೂ ದೈವೀ ಇಚ್ಛೆಯಂತೆ ಮುಂದಿನ ಸೇವಾಕಾರ್ಯಗಳನ್ನು ನಡೆಸಬೇಕಾಗಿರುವುದರಿಂದ ನಾನು ಹೋಗುವದು ಅನಿವಾರ್ಯವಾಗಿದೆ. ಕಳೆದ 10 ವರ್ಷಗಳಿಂದ ನಾನು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನಲ್ಲಿ ಮಠವನ್ನು ನಿರ್ಮಿಸಿ ನೆಲೆಸಿದ್ದೇನೆ. ಭಕ್ತರು ನಮ್ಮನ್ನು ಭೇಟಿಯಾಗಲು ಅಲ್ಲಿಗೆ ಬರಬಹುದು ಎಂದು ಹೇಳಿದರು.


