ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಹೂವಿನ ಅಲಂಕಾರದ ಮಂಟಪದಲ್ಲಿ ನಾಡಿನ ಶಿವಶರಣರ ಭಾವಚಿತ್ರ, ಮೂರ್ತಿಗಳ ಮೆರವಣಿಗೆ, ಶರಣರ ವಚನಗಳ, ತತ್ವ ಪದಗಳ ಭಜನಾ ಕಲಾವಿದರ ಹಾಡುಗಾರಿಕೆ, ಒಂದೇ ಬಣ್ಣದ ಬಟ್ಟೆಯನ್ನು ಧರಿಸಿ ಪಾಲ್ಗೊಂಡ ಭಜನಾ ಕಾರ್ಯಕರ್ತರು ಐತಿಹಾಸಿಕ ಲಕ್ಕುಂಡಿ ಗ್ರಾಮದ ಹಾಲಗೊಂಡ ಬಸವೇಶ್ವರ ರಥೋತ್ಸವದ ಶ್ರಾವಣದ ಕೊನೆಯ ಸೋಮವಾರದ ಸಂಭ್ರಮ ಹೆಚ್ಚಿಸಿದರು.
ಸುಮಾರು 121 ವಸಂತಗಳನ್ನು ಪೊರೈಸಿರುವ ಹಾಲಗೊಂಡ ಬಸವೇಶ್ವರ ಜಾತ್ರೆಯಲ್ಲಿ ಗ್ರಾಮದ 14 ಭಜನಾ ಸಂಘಗಳು ನಾಡಿನ ಶಿವ ಶರಣರ ತತ್ವಪದಗಳ ಹಾಡಿನೊಂದಿಗೆ ಭಾವಚಿತ್ರ ಮೆರವಣಿಗೆಯು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ನೂರಾರು ಭಕ್ತರ ಕಣ್ಮನ ಸೆಳೆಯಿತು.
ಗ್ರಾಮದ 14 ಭಜನಾ ತಂಡಗಳಿಗೆ ಪ್ರೋತ್ಸಾಹದಾಯಕವಾಗಿ ಪ್ರತಿ ವರ್ಷ ಕೊಡುವ ದೇಣಿಗೆ ಈ ಸಲ ತಾಳ ವಾದ್ಯ, ಡೊಳ್ಳು ಕಲಾ ತಂಡಕ್ಕೆ ಡೊಳ್ಳು ವಾದ್ಯವನ್ನು ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ, ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಸರ್ವ ಸದಸ್ಯರು ನೀಡಿ ಕಲಾವಿದರ ತತ್ವ ಪದಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲಮಪ್ರಭುದೇವರ, ವಿರುಪಾಕ್ಷೇಶ್ವರ, ಮಾರುತಿ, ಜ. ಪಂಚಾಚಾರ್ಯ, ರಾಮಲಿಂಗೇಶ್ವರ, ನಾಗನಾಥ, ಬಿನ್ನಾಳ ಬಸವೇಶ್ವರ, ಲೆಕ್ಕದ ವೀರೇಶ್ವರ, ಮಲ್ಲಿಕಾರ್ಜುನ, ಅನ್ನದಾನೀಶ್ವರ, ಮರುಳ ಸಿದ್ದೇಶ್ವರ ಹಾಗೂ ಆಂಜನೇಯ ಭಜನಾ ಸಂಘಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಇದಕ್ಕೂ ಪೂರ್ವ ವಿವಿಧ ಹೂವುಗಳಿಂದ ಅಲಂಕರಿಸಿದ ಬಸವಣ್ಣ ಮೂರ್ತಿಗೆ ಶರಣಯ್ಯ ಪತ್ರಿಮಠ ಅವರು ವಿಧಿ-ವಿದಾನಗಳೊಂದಿಗೆ ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ನಂತರ ಸಿದ್ಧ ಸಮಾಧಿ ಯೋಗ ಸಾಧಕರ ಆಶ್ರಯದಲ್ಲಿ ಆಚಾರ್ಯ ರಾಘವೇಂದ್ರ ಕೊಪ್ಪಳ ಅವರ ನೇತೃತ್ವದಲ್ಲಿ ಮೃತ್ಯುಂಜಯ ಹೋಮ ನೆರವೇರಿತು. ನಂತರ ಅನ್ನ ಅನ್ನಸಂತರ್ಪಣೆ ಜರುಗಿತು.
ಕಳೆದ 120 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಐತಿಹಾಸಿಕ ಲಕ್ಕುಂಡಿ ಗ್ರಾಮದ ಹಾಲಗೊಂಡ ಬಸವೇಶ್ವರ ರಥೋತ್ಸವವು ರಾಜ್ಯದಲ್ಲಿಯೇ ವಿಶೇಷವಾಗಿದೆ. ಗ್ರಾಮದ 14 ಭಜನಾ ಸಂಘಗಳು ಶ್ರಾವಣ ಮಾಸದಲ್ಲಿ ದಿನ ನಿತ್ಯ ಬೆಳಿಗ್ಗೆ ತಮಗೆ ಹತ್ತಿರವಿರುವ ದೇಗುಲಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸುವುದು ಸಂಪ್ರದಾಯವಾಗಿದೆ. ಇದರಲ್ಲಿ ಪ್ರತಿ ಶ್ರಾವಣ ಸೋಮವಾರ ಬಸವಣ್ಣನ ದೇಗುಲಕ್ಕೆ ತೆರಳಿ ಶೃದ್ಧಾ-ಭಕ್ತಿಯಿಂದ ಪೂಜೆ ಅರ್ಪಿಸುತ್ತಾರೆ. ಕೊನೆಯ ಸೋಮವಾರ ಗ್ರಾಮದ ಪ್ರಮುಖ ಬೀದಿಯಲ್ಲಿ ವಿವಿಧ ಶರಣರ ಭಾವಚಿತ್ರ ಮೆರವಣಿಗೆಯೊಂದಿಗೆ ಗ್ರಾಮವನ್ನು ಸುತ್ತುವುದೇ ನೋಡುಗರಿಗೆ ಹಬ್ಬ. ಆದರೆ ಮೆರವಣಿಗೆ ಸಾಗುವ ರಸ್ತೆ ಒತ್ತುವರಿಯಿಂದಾಗಿ ಇಕ್ಕಟ್ಟಾಗಿದ್ದು, ಕಿರಿಕಿರಿಯಾಗುತ್ತಿದೆ ಎಂಬ ಮಾತುಗಳು ಭಜನಾ ಸಂಘದ ಸದಸ್ಯರಲ್ಲಿ ಕೇಳಿ ಬರುತ್ತಿದೆ.
ನಮ್ಮ ಮನೆಯ ಆರಾಧ್ಯ ದೈವವಾಗಿರುವ ಹಾಲಗೊಂಡ ಬಸವಣ್ಣ ದೇವರ ಜಾತ್ರೆ ವಿಶೇಷವಾಗಿದೆ. ಎರಡು ದಿನ ಮುಂಚಿತವಾಗಿ ಬಂದು ಸೇವೆ ಸಲ್ಲಿಸುತ್ತೇನೆ.
– ಕೆ. ಬಸವರಾಜ ಬಳ್ಳಾರಿ.