ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಕೋಮು-ಸೌಹಾರ್ದತೆಯ ಹರಿಕಾರ, `ದ್ವೇಷ ಬಿಡು-ಪ್ರೀತಿ ಮಾಡು’ ಎಂಬ ದಿವ್ಯ ಸಂದೇಶ ಸಾರಿ ಶಿರಹಟ್ಟಿಯಲ್ಲಿ ಸರ್ಪರೂಪಿಯಾಗಿ ನೆಲೆನಿಂತಿರುವ ಕರ್ತೃ ಶ್ರೀ ಜ. ಫಕೀರೇಶ್ವರರ ಮಹಾರಥೋತ್ಸವವು ಆಗಿ ಹುಣ್ಣಿಮೆಯ ದಿನವಾದ ಮೇ.12ರ ಸಂಜೆ 5.30ರ ಸುಮಾರಿಗೆ ಸಹಸ್ರಾರು ಭಕ್ತರ ಉಪಸ್ಥಿತಿಯಲ್ಲಿ ನೆರವೇರಿತು.
ಸೋಮವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಶ್ರೀಮಠದ 13ನೇ ಪೀಠಾಧ್ಯಕ್ಷ ಜ.ಫ. ಸಿದ್ದರಾಮ ಸ್ವಾಮೀಜಿ ಸಂಪ್ರದಾಯದಂತೆ ಹರಿಪೂರ ಗ್ರಾಮದಿಂದ ಶಿರಹಟ್ಟಿ ಪಟ್ಟಣದ ಪುರಪ್ರವೇಶ ಕಾರ್ಯಕ್ರಮವು ಪಲ್ಲಕ್ಕಿ ಮಹೋತ್ಸವದೊಂದಿಗೆ ಜರುಗಿತು. ನಂತರ 11 ಗಂಟೆಗೆ ಕರ್ತೃ ಶ್ರೀ ಜ.ಫಕೀರೇಶ್ವರರ ಗದ್ದುಗೆಯ ಕಟ್ಟಡಕ್ಕೆ ಕಳಸಾರೋಹಣವು ಹುಬ್ಬಳ್ಳಿಯ ಮೂರುಸಾವಿರಮಠದ ಜ.ಡಾ. ಗುರುಸಿದ್ದರಾಜಯೋಗಿಂದ್ರ ಸ್ವಾಮೀಜಿ, ಧಾರವಾಡದ ಮುರುಘಾಮಠದ ಶ್ರೀಗಳು ಮತ್ತು ಶ್ರೀಪೀಠದ 13ನೇ ಪಟ್ಟಾಧ್ಯಕ್ಷರಾದ ಜ.ಫ. ಸಿದ್ದರಾಮ ಸ್ವಾಮೀಜಿ, ಉತ್ತರಾಧಿಕಾರಿ ಜ.ಫ. ದಿಂಗಾಲೇಶ್ವರ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರುಗಳ ಉಪಸ್ಥಿತಿಯಲ್ಲಿ ನೆರವೇರಿತು.
ರಥವು ನಮ್ಮ ರಾಷ್ಟ್ರಧ್ವಜದ ಬಣ್ಣಗಳಾದ ಕೇಸರಿ-ಬಿಳಿ-ಹಸಿರು ಬಣ್ಣದಿಂದ ಕಂಗೊಳಿಸುತ್ತ ನಾವೆಲ್ಲರೂ ಒಂದೇ ಎಂಬ ಸಂದೇಶ ಸಾರುತ್ತಿರುವುದು ವಿಶೇಷವಾಗಿತ್ತು. ಬೆಳಿಗ್ಗೆಯಿಂದಲೇ ರಾಜ್ಯ ಹಾಗೂ ಹೊರರಾಜ್ಯಗಳಿಂದ ಸಹಸ್ರಾರು ಭಕ್ತರು ಆಗಮಿಸುತ್ತಲೇ ಇದ್ದರು. ಶ್ರೀಮಠದ ವಿಶಾಲವಾದ ಜಾಗೆಯಲ್ಲಿ ಬೀಡುಬಿಟ್ಟು ರಥೋತ್ಸವವನ್ನು ವೀಕ್ಷಿಸಿದರು. ಮಕ್ಕಳ ಮನರಂಜನೆಗಾಘಿ ನಿರ್ಮಿಸಲಾಗಿದ್ದ ಬೃಹತ್ ಗಾತ್ರದ ಜೋಕಾಲಿಗಳು ಸೇರಿದಂತೆ ವಿವಿಧ ಆಟಗಳು ಕಣ್ಮನ ಸೆಳೆಯುತ್ತಿದ್ದವು. ಜಾತ್ರೆ ಮುಗಿಸಿ ಇಲ್ಲಿಯ ವಿಶೇಷ ಕರಿದ ಚುರಮರಿ, ಮಿರ್ಚಿ, ಭಜಿಯನ್ನು ಸವಿದು ತಮ್ಮ ಮನೆಗೂ ಸಹ ಕೊಂಡೊಯ್ದರು.
ಸಂಜೆ 5.30ರ ಸುಮಾರಿಗೆ ಶ್ರೀಮಠದ ಸಂಪ್ರದಾಯದಂತೆ ಜ.ಫ. ಸಿದ್ದರಾಮ ಸ್ವಾಮೀಜಿ ರಾಜಪೋಷಾಕಿನೊಂದಿಗೆ, ವಜ್ರವೈಢೂರ್ಯಗಳನ್ನು ಧರಿಸಿ ಕರ್ತೃ ಗದ್ದುಗೆಗೆ ನಮಸ್ಕಾರ ಸಲ್ಲಿಸಿ ಉತ್ತರಾಧಿಕಾರಿ ಜ.ಫ.ದಿಂಗಾಲೇಶ್ವರ ಸ್ವಾಮೀಜಿ ಸಹಿತರಾಗಿ ರಥದ ಗಾಲಿಗೆ ಕಾಯಿ ಒಡೆಯುವುದರ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಸುಮಾರು 1 ಕಿಮೀ ದೂರದಲ್ಲಿರುವ ಪಾದಗಟ್ಟಿಯವರೆಗೂ ಸಹಸ್ರಾರು ಭಕ್ತರು ರಥವನ್ನು ಮುನ್ನಡೆಸಿಕೊಂಡು ಪುನಃ ಮೂಲಸ್ಥಳಕ್ಕೆ ರಥವನ್ನು ಎಳೆದು ತಮ್ಮ ಭಕ್ತಿಯನ್ನು ಸಮರ್ಪಿಸಿದರು.