ಹುಬ್ಬಳ್ಳಿ: ಮಗುವಿನೊಳಗೆ ಮತ್ತೊಂದು ಭ್ರೂಣ ಕಂಡುಬಂದ ಅಪರೂಪದ ಘಟನೆಗೆ ಹುಬ್ಬಳ್ಳಿಯ ಕಿಮ್ಸ್ ಸಾಕ್ಷಿಯಾಗಿದೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗರ್ಭಿಣಿಯೊಬ್ಬರು ಎರಡನೇ ಹೆರಿಗೆಗೆಂದು ಕಿಮ್ಸ್ ನ ತಾಯಿ ಮತ್ತು ಮಕ್ಕಳ ವಿಭಾಗದಲ್ಲಿ ದಾಖಲಾಗಿದ್ದರು. ಕಳೆದ ಸೆಪ್ಟಂಬರ್ 23ರಂದು ಗಂಡು ಮಗುವಿಗೆ ಈಕೆ ಜನ್ಮ ನೀಡಿದ್ದಾಳೆ.
ಮಗುವಿನ ದೇಹದಲ್ಲಿ ಕೆಲ ಬದಲಾವಣೆಗಳು ಕಂಡು ಬಂದ ಹಿನ್ನಲೆಯಲ್ಲಿ ನವಜಾತ ಶಿಶುವಿಗೆ ಆಲ್ಟ್ರಾಸೌಂಡ್ ಮಾಡಿಸಲಾಗಿದೆ. ಈ ವೇಳೆ ಮಗುವಿನ ಹೊಟ್ಟೆಯಲ್ಲಿ ಬೆನ್ನುಹುರಿ ಇರುವ ಭ್ರೂಣ ಪತ್ತೆಯಾಗಿದೆ. ಆದರೂ ಎಂಆರ್‌ಐ ಸ್ಕ್ಯಾನ್ ಮಾಡಲು ವೈದ್ಯರು ನಿರ್ಧರಿಸಿದ್ದಾರೆ.
ಪ್ರಮುಖವಾಗಿ ಇದು ನವಜಾತ ಶಿಶುವಿನ ದೇಹದೊಳಗೆ ಅಸಹಜ ದ್ರವ್ಯರಾಶಿ ಬೆಳೆಯುವ ಅಪರೂಪದ ಸ್ಥಿತಿಯಾಗಿದೆ. ಈ ಭಾಗಶಃ ರೂಪುಗೊಂಡ ದ್ರವ್ಯರಾಶಿ ತಲೆಬುರುಡೆ, ಸ್ಯಾಕ್ರಮ್(ಬೆನ್ನುಮೂಳೆಯ ಬುಡದಲ್ಲಿರುವ ತ್ರಿಕೋನ ಮೂಳೆ) ಅಥವಾ ಬಾಯಿಯ ಒಳಭಾಗದಂತಹ ಅಸಾಮಾನ್ಯ ಸ್ಥಳಗಳಲ್ಲಿ ಕಾಣಿಸಿಕೊಳ್ಳಬಹುದು.
ಕೆಲ ಸಂದರ್ಭಗಳಲ್ಲಿಇದು ಬೆನ್ನುಮೂಳೆಯ ಕಾಲಂ, ಅಂಗ ಮೊಗ್ಗುಗಳು ಅಥವಾ ಮೂಲ ಅಂಗಗಳಂತಹ ಲಕ್ಷಣಗಳನ್ನು ತೋರಿಸಬಹುದು. ಆದರೆ ಇವು ಎಂದಿಗೂ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿರುವುದಿಲ್ಲ ಹಾಗೂ ಕಾರ್ಯ ನಿರ್ವಹಿಸುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.