ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಶಾಸಕ ಡಾ. ಚಂದ್ರು ಲಮಾಣಿಯವರೊಂದಿಗೆ ರೈತರು ಮತ್ತು ಕೆಡಿಪಿ ಸಭೆಯ ನಾಮನಿರ್ದೇಶಿತ ಸದಸ್ಯರ ಮಾತಿನ ಚಕಮಕಿ ನಡೆಸಿದ್ದರಿಂದ ಸಭೆ ಗೊಂದಲದ ಗೂಡಾಯಿತು.
ಸಭೆ ಆರಂಭವಾಗುತ್ತಿದ್ದಂತೆಯೇ ಹಳ್ಳದಕೇರಿ ಓಣಿಯ ರೈತರು ಯಳವತ್ತಿ-ಅಣ್ಣಿಗೇರಿ ರೈತ ಸಂಪರ್ಕ ರಸ್ತೆ ಸಂಪೂರ್ಣ ಹಾಳಾಗಿದ್ದು, 2 ವರ್ಷದಿಂದ ಜಮೀನುಗಳಿಗೆ ಹೋಗಲಾಗುತ್ತಿಲ್ಲ. ರಸ್ತೆಯುದ್ದಕ್ಕೂ ಆಳವಾದ ಗುಂಡಿಗಳು ಬಿದ್ದು ಸಂಚಾರ ಸ್ಥಗಿತಗೊಂಡಿದೆ. ಕನಿಷ್ಠ ಮಣ್ಣು ಹಾಕಿಯಾದರೂ ಸಂಚಾರಕ್ಕೆ ಅನಕೂಲ ಮಾಡಿಕೊಡಬೇಕು ಎಂದು ಗಂಗಾಧರ ಅಂಕಲಿ ನೇತೃತ್ವದಲ್ಲಿ ರೈತರು ಸಭೆಯಲ್ಲಿದ್ದ ಶಾಸಕರು, ತಹಸೀಲ್ದಾರರಲ್ಲಿ ಒಕ್ಕೊರಲಿನಿಂದ ಆಗ್ರಹಿಸಿದರು.
ಈ ವೇಳೆ ಶಾಸಕ ರೈತರೊಂದಿಗೆ ಮಾತನಾಡುತ್ತಾ, ಕ್ಷೇತ್ರದಲ್ಲಿ ರಸ್ತೆಗಳ ಸ್ಥಿತಿ ಬಹಳಷ್ಟು ಹದಗೆಟ್ಟಿದೆ. ದೊಡ್ಡೂರು-ಬಾಲೆಹೊಸೂರು ಮಧ್ಯದ 4 ಕಿಮೀ ರೈತ ಸಂಪರ್ಕ ರಸ್ತೆಯನ್ನು ದುರಸ್ಥಿ ಮಾಡಿಸಲಾಗಿದೆ. ಹಾಗೆಯೇ ಅಣ್ಣಿಗೇರಿ ರಸ್ತೆಯನ್ನು ದುರಸ್ತಿ ಮಾಡಿಸಲಾಗುವುದು ಎಂದು ಹೇಳುತ್ತಿದ್ದಂತೆ ಅಲ್ಲಿಯೇ ಇದ್ದ ಬಾಲೆಹೊಸೂರಿನ ರೈತರು, ನೀವು ರಸ್ತೆ ದುರಸ್ತಿ ಮಾಡಿಸಿಯೇ ಇಲ್ಲ. ಸುಳ್ಳು ಹೇಳಬೇಡಿ. ಈಗಲೂ ರಸ್ತೆಯಲ್ಲಿ ದೊಡ್ಡ ಗುಂಡಿಗಳು ಹಾಗೇಯೇ ಇವೆ ಎಂದು ಆರೋಪಿಸಿದರು. ಇದೇ ವಿಚಾರವಾಗಿ ಶಾಸಕರು ಮತ್ತು ರೈತರ ನಡುವೆ ಅರ್ಧ ಗಂಟೆಗೂ ಹೆಚ್ಚು ಸಮಯ ವಾಗ್ವಾದ ನಡೆಯಿತು.
ಮದ್ಯ ಪ್ರವೇಶಿಸಿದ ಪಿಎಸ್‌ಐ ನಾಗರಾಜ ಗಡಾದ ಮತ್ತು ಸಿಬ್ಬಂದಿಗಳು ರೈತರನ್ನು ಸಮಾಧಾನಪಡಿಸಿದರು. ನಂತರ ಲಕ್ಷ್ಮೇಶ್ವರ ರೈತರಿಂದ ಮನವಿ ಸ್ವೀಕರಿಸಿ ಸಭೆಯಿಂದ ಹೊರ ಕಳುಹಿಸಲಾಯಿತು.
ಈ ವೇಳೆ ಡಿಜಿಎಂ ಜಿ.ಎಲ್. ನಾಗಭೂಷಣ ಕಂದಾಯ ಜಮೀನಿನಲ್ಲಿ ಮಣ್ಣು ಎತ್ತುವಳಿ ಮಾಡಲು ಇರುವ ಕಾನೂನು ತೊಡಕುಗಳ ಬಗ್ಗೆ ವಿವರಿಸಿದರು. ಕೆಡಿಪಿ ತ್ರೈಮಾಸಿಕ ಸಭೆಯ ನಾಮನಿರ್ದೇಶಿತ ಸದಸ್ಯ ಶಿವರಾಜಗೌಡ ಪಾಟೀಲ ಮಾತನಾಡಿ, ಗೊಜನೂರ ಗ್ರಾಮದ ಗುಡ್ಡದಲ್ಲಿ ಅನಧಿಕೃತವಾಗಿ ಮಣ್ಣು ಸಾಗಾಟ ಮಾಡುತ್ತಿರುವುದರಿಂದ ಸುತ್ತಲಿನ ಭಾಗದ ರೈತರು, ಈ ಪ್ರದೇಶಗಳ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಒಂದು ನಿರ್ದಿಷ್ಟ ಪ್ರದೇಶ ಗುರುತಿಸಿ ಕಾನೂನು ಬದ್ಧವಾಗಿ ಮಣ್ಣು ತೆಗೆಯುವ ಮೂಲಕ ರಸ್ತೆ ಅಭಿವೃದ್ಧಿಗೆ ಅನುದಾನವೂ ಆಯಿತು ಮತ್ತು ಮಣ್ಣು ತೆಗೆದ ಪ್ರದೇಶದಲ್ಲಿ ಒಂದು ಬೃಹತ್ ಕೆರೆ ನಿರ್ಮಾಣವೂ ಆಗುತ್ತದೆ. ಈ ಬಗ್ಗೆ ಕೆಡಿಪಿ ಸಭೆಯ ನಿರ್ಣಯದ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅವಕಾಶ ಕಲ್ಪಿಸಿಕೊಡಿ ಎಂದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರೇವಣಪ್ಪ ಮನಗೂಳಿ ಮಾತನಾಡಿ, ಈ ವರ್ಷದ ಮುಂಗಾರು ಬಿತ್ತನೆ ಬೀಜ, ಗೊಬ್ಬರ ಸಂಗ್ರಹದ ಬಗ್ಗೆ ಮಾಹಿತಿ ನೀಡಿದರು. ತಾಲೂಕಾ ಆರೋಗ್ಯಾಧಿಕಾರಿ ಡಾ. ಸುಭಾಸ ದಾಯೊಂಡ ಸಭೆಗೆ ಮಾಹಿತಿ ನೀಡಿದ ಸಂದರ್ಭದಲ್ಲಿ ಲಕ್ಷ್ಮೇಶ್ವರ ಸೇರಿ ಬಾಲೆಹೊಸೂರ, ಶಿಗ್ಲಿ, ಸೂರಣಗಿ ಆರೋಗ್ಯ ಕೇಂದ್ರಗಳಲ್ಲಿನ ವೈದ್ಯರ ಕೊರತೆ ನೀಗಿಸಿ ಮತ್ತು ಅಂಬ್ಯುಲೆನ್ಸ್ ಸೇವೆ ಸಮರ್ಪಕವಾಗಿಸಬೇಕು. ಅಲ್ಲದೇ ತಾಲೂಕಿನಲ್ಲಿ ಶಿಶುಗಳ ಮರಣ ಸಂಖ್ಯೆ ಹೆಚ್ಚುತ್ತಿದ್ದರೂ ಪ್ರಕರಣ ಮರೆಮಾಚಿ ಇಲಾಖೆಗೆ ತಪ್ಪು ಮಾಹಿತಿ ನೀಡುತ್ತಿರುವ ಬಗ್ಗೆ ಬಲವಾದ ಬಲವಾದ ಆರೋಪಗಳು ಕೇಳಿ ಬರುತ್ತಿವೆ ಎಂದು ಕೆಡಿಪಿ ನಾಮನಿರ್ದೇಶಿತ ಸದಸ್ಯರಾದ ಮಹಮ್ಮದ್‌ರಫಿ ಕಲಬುರ್ಗಿ, ರಾಮಣ್ಣ ಲಮಾಣಿ ಅಸಮಾಧಾನ ವ್ಯಕ್ತಪಡಿಸಿದರು.
ಪಿಡಬ್ಲೂಡಿ ಇಲಾಖೆಯ ಅಧಿಕಾರಿ ಫಕ್ಕಿರೇಶ ತಿಮ್ಮಾಪುರ ತಾಲೂಕಿನಲ್ಲಿನ ರಸ್ತೆಗಳ ಸ್ಥಿತಿಗತಿಯ ಬಗ್ಗೆ ಮಾಹಿತಿ ನೀಡಿದ ಸಂದರ್ಭದಲ್ಲಿ ತಾಲೂಕಿನಲ್ಲಿ ಲಕ್ಷಾಂತರ ರೂ ವೆಚ್ಚದಲ್ಲಿ ರಸ್ತೆಗಳ ಗುಂಡಿ ಮುಚ್ಚಿದ ಮಾಹಿತಿಯ ಬಗ್ಗೆ ಸಾಕಷ್ಟು ಅನುಮಾನಗಳು ಮೂಡಿವೆ. ಕಾಮಗಾರಿ ಮಾಡದೇ ಬೋಗಸ್ ಬಿಲ್ ತೆಗೆಯಲಾಗಿದೆ. ಈ ಬಗ್ಗೆ ನಿಖರವಾದ ಮಾಹಿತಿ ನೀಡಬೇಕು ಎಂದು ವಿಜಯ ಹಳ್ಳಿ ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಅರಣ್ಯ, ಕಂದಾಯ, ಗ್ರಾಮ ಪಂಚಾಯಿತಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ತಹಸೀಲ್ದಾರ ವಾಸುದೇವ ಸ್ವಾಮಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕೆ.ನಾಗಭೂಷಣ, ಕೆಡಿಪಿ ನಾಮನಿರ್ದೇಶಿತ ಸದಸ್ಯರಾದ ಮಹಮ್ಮದ್‌ರಫಿ ಕಲಬುರ್ಗಿ, ರಾಮಣ್ಣ ಲಮಾಣಿ, ಪ್ರಕಾಶ ಹುಲಕೋಟಿ, ಉಮಾ ಕುರಿ ಮುಂತಾದವರು ಇದ್ದರು. ಸಭೆ ಆರಂಭಕ್ಕೂ ಮುನ್ನ ಭಾರತ-ಪಾಕ್ ಯುದ್ಧದಲ್ಲಿ ಮಡಿದ ಯೋಧರು ಹಾಗೂ ನಾಗರಿಕರ ಆತ್ಮಕ್ಕೆ ಮೌನಾಚರಣೆ ಸಲ್ಲಿಸಲಾಯಿತು.