ಬೆಂಗಳೂರು: ನವರಾತ್ರಿಯ ಮೊದಲ ದಿನ, ಸೆ. 22ರಂದು ದೇಶವು ಸರಳೀಕೃತ ಜಿಎಸ್‍ಟಿ ವ್ಯವಸ್ಥೆಯನ್ನು ಹೊಂದಲಿದೆ. ಇದರ ಮೂಲಕ ಪ್ರಧಾನಿ ನರೇಂದ್ರ ಮೋದಿಜೀ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೀಪಾವಳಿ ಬರುವ ಮೊದಲೇ ದೀಪಾವಳಿ ಉಡುಗೊರೆ ಕೊಟ್ಟಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶಹಜಾದ್ ಪೂನಾವಾಲ ಅವರು ವಿಶ್ಲೇಷಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಜಿಎಸ್‍ಟಿ ವ್ಯವಸ್ಥೆಯಿಂದ ಮಧ್ಯಮ ವರ್ಗಕ್ಕೆ ಹೆಚ್ಚಿನ ಲಾಭ ಸಿಗಲಿದೆ. ತೆರಿಗೆ ಸ್ಲ್ಯಾಬ್ ಸರಳವಾಗಲಿದೆ ಎಂದು ವಿವರಿಸಿದರು. ಇದು ಕೆಲವರ ಆಕ್ಷೇಪದಂತೆ ಗಬ್ಬರ್ ಸಿಂಗ್ ಟ್ಯಾಕ್ಸ್ ಅಲ್ಲ; ಇದು ಗುಡ್ (ಉತ್ತಮ) ಮತ್ತು ಸಿಂಪಲ್ (ಸರಳ) ತೆರಿಗೆ ಎಂದು ತಿಳಿಸಿದರು. ಉಳಿತಾಯ ಹೆಚ್ಚಳ ಮತ್ತು ಕನಿಷ್ಠ ತೆರಿಗೆಯ ಲಾಭವನ್ನು ಜನರಿಗೆ ಕೊಡುತ್ತದೆ ಎಂದು ಹೇಳಿದರು.
ಹಿಂದೆ ರಾಜ್ಯಗಳಲ್ಲಿ ಬಹು ತೆರಿಗೆ ಪದ್ಧತಿ ಜಾರಿಯಲ್ಲಿತ್ತು. 8 ವರ್ಷಗಳ ಹಿಂದೆ ಜಿಎಸ್‍ಟಿ ಅನುಷ್ಠಾನಕ್ಕೆ ಬಂತು. ಆಗ 4 ಸ್ಲ್ಯಾಬ್ ಇತ್ತು. ಸೆ. 22ರಿಂದ ಅದು 2 ತೆರಿಗೆಗಳ ಸ್ಲ್ಯಾಬ್ ಆಗಿ (ಶೇ 5, 18) ಬದಲಾವಣೆ ಕಾಣಲಿದೆ. ಶೇ 12ರಡಿ ಇದ್ದ 99 ಸರಕುಗಳು ಶೇ 5ರ ತೆರಿಗೆಯಡಿ ಬರಲಿವೆ. ಶೇ 28 ತೆರಿಗೆ ವ್ಯಾಪ್ತಿಗೆ ಬರುತ್ತಿದ್ದ ಬಹುತೇಕ ಸರಕುಗಳು ಶೇ 18ರಡಿ ಬರಲಿವೆ.
ಇವೆಲ್ಲವುಗಳ ಬೆಲೆ ಕಡಿಮೆ ಆಗುತ್ತಿದೆ ಎಂದು ತಿಳಿಸಿದರು. ಮೆಟ್ರೋ ರೈಲು ಸಂಪರ್ಕ ವಿಸ್ತರಣೆ, ಸಾರ್ವಜನಿಕ ಸಾರಿಗೆಗೆ ಒತ್ತು, 12 ಲಕ್ಷದ ವರೆಗೆ ಆದಾಯ ತೆರಿಗೆ ಮಿತಿಯ ಹೆಚ್ಚಳ, ಮನೆ ಸಾಲ, ಶಿಕ್ಷಣ ಸಾಲದ ಬಡ್ಡಿ ಕಡಿಮೆ ಮಾಡಲಾಗಿದೆ. ಕನಿಷ್ಠ ಹಣದುಬ್ಬರದ ಕೊಡುಗೆ ಕೊಡಲಾಗಿದೆ ಎಂದರು.