HomeChikkamagaluruಬಾಳ ಉನ್ನತಿ-ಅವನತಿಗೆ ಮನಸ್ಸೇ ಮೂಲ: ರಂಭಾಪುರಿ ಶ್ರೀ

ಬಾಳ ಉನ್ನತಿ-ಅವನತಿಗೆ ಮನಸ್ಸೇ ಮೂಲ: ರಂಭಾಪುರಿ ಶ್ರೀ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು: ಸುಖ ಬಯಸುವುದು ಮನುಷ್ಯನ ಸಹಜ ಗುಣ. ದುರ್ನಡತೆಯಿಂದಾಗಿ ಮನುಷ್ಯನ ಬದುಕು ಛಿದ್ರಗೊಂಡಿದೆ. ಬಾಳಿನ ಉನ್ನತಿ-ಅವನತಿಗಳಿಗೆ ಮನುಷ್ಯನ ಮನಸ್ಸೇ ಕಾರಣವೆಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಬುಧವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಹುಣ್ಣಿಮೆ ಕಾರ್ತಿಕ ದೀಪೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಜೀವನ ಜೋಕಾಲಿ ಸುಖದಿಂದ ದುಃಖದತ್ತ, ದುಃಖದಿಂದ ಸುಖದತ್ತ ಸದಾ ತೂಗುತ್ತಿರುತ್ತದೆ. ಪ್ರಪಂಚದಲ್ಲಿ ಭಯ, ಭೀತಿ, ಉದ್ವೇಗ, ಚಿಂತೆ, ಒತ್ತಡ ಎಲ್ಲರಿಗೂ ಇರುತ್ತದೆ. ಮನುಷ್ಯ ತನ್ನ ಬಾಳಿನಲ್ಲಿ ನೀತಿ ಸಂಹಿತೆ, ಸದಾಚಾರ ಸಂಪನ್ನತೆ, ಧ್ಯಾನ, ಜ್ಞಾನ ಇವುಗಳನ್ನು ಅಳವಡಿಸಿಕೊಂಡು ಬಾಳಿದರೆ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಪ್ರಾಪ್ತವಾಗುವುದು ಸಂದೇಹವಿಲ್ಲ. ಮನುಷ್ಯ ಆಸೆ ಕಳೆದುಕೊಂಡು ಬದುಕಬಹುದು, ಆದರೆ ಆಸಕ್ತಿ ಕಳೆದುಕೊಂಡು ಬಾಳಲಾಗದು. ಕಷ್ಟ ಕಾಲದಲ್ಲಿ ಸಹಾಯ ಮಾಡಿದವರನ್ನು, ಕಷ್ಟದಲ್ಲಿ ಕೈಬಿಡದೇ ಕಾಪಾಡುವವರನ್ನು, ಕಷ್ಟಕ್ಕೆ ದೂಡಿದವರನ್ನು ಎಂದಿಗೂ ಮರೆಯಬಾರದು.

ಪ್ರತಿಯೊಂದು ಚಿಕ್ಕ ಪಯಣಕ್ಕೂ ಒಂದು ಮಾರ್ಗಸೂಚಿ ಇರುವಂತೆ, ಬದುಕಿನ ಮಹಾಯಾತ್ರೆಗೆ ಧರ್ಮ ದಿಕ್ಸೂಚಿಯಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು, ಸುಖದ ಮೂಲ ಧರ್ಮಾಚರಣೆಯಲ್ಲಿದೆ ಎಂದು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ನಿರೂಪಿಸಿದ್ದಾರೆ. ದೀಪ ಬೆಳಕಿನ ಸಂಕೇತ; ಕತ್ತಲು ಅಜ್ಞಾನದ ಸಂಕೇತ. ಕತ್ತಲೆ ಕಳೆದು ಬೆಳಕು ಮೂಡಿಸುವುದೇ ನಿಜವಾದ ಗುರುಧರ್ಮ. ದೀಪದಲ್ಲಿ ಬೆಳಕೂ ಇದೆ, ಬೆಂಕಿಯೂ ಇದೆ. ಬೆಳಕಿನಿಂದ ಜೀವನ ವಿಕಾಸಗೊಳ್ಳುತ್ತದೆ; ಬೆಂಕಿಯಿಂದ ಬದುಕು ನಾಶಗೊಳ್ಳುತ್ತದೆ. ಅರಿವಿನ ಆಚರಣೆಯಲ್ಲಿ ಬದುಕನ್ನು ಸಮೃದ್ಧವಾಗಿ ಕಟ್ಟಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದರು.

ಈ ಸಂದರ್ಭದಲ್ಲಿ ತಡವಲಗಾ ಹಿರೇಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ಚಿಕ್ಕಮಗಳೂರಿನ ಶಂಕರದೇವರ ಮಠದ ಚಂದ್ರಶೇಖರ ಶಿವಾಚಾರ್ಯರು, ಹನುಮಾಪುರ ಕಾಳಿಕಾದೇವಿ ಹಿರೇಮಠದ ಡಾ. ಸೋಮಶೇಖರ ಶಿವಾಚಾರ್ಯರು, ಬೀರೂರು ಬಾಳೆಹೊನ್ನೂರು ಶಾಖಾ ಮಠದ ರುದ್ರಮುನಿ ಶಿವಾಚಾರ್ಯರು, ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯರು, ಬೇರುಗಂಡಿ ಬೃಹನ್ಮಠದ ರೇಣುಕ ಮಹಂತ ಶಿವಾಚಾರ್ಯರು, ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯರು ಮತ್ತು ಗುಂಡಕನಾಳದ ಹಿರೇಮಠದ ಗುರುಲಿಂಗ ಶಿವಾಚಾರ್ಯರು ಪಾಲ್ಗೊಂಡಿದ್ದರು.

ಕಾರ್ತಿಕ ದೀಪೋತ್ಸವ ಅಂಗವಾಗಿ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ರಥೋತ್ಸವ ಭಕ್ತ ಸಮೂಹದ ಮಧ್ಯೆ ಸಂಭ್ರಮ ಸಡಗರದಿಂದ ಜರುಗಿತು. ಬೆಂಗಳೂರು ಶ್ರೀ ಜಗದ್ಗುರು ರೇಣುಕಾಚಾರ್ಯ ವಿದ್ಯಾಸಂಸ್ಥೆ ಅಧ್ಯಕ್ಷ ಯು.ಎಂ. ಬಸವರಾಜ್, ಚಿಕ್ಕಮಗಳೂರು ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಬೆಳಗೊಳ ಶಿವಶಂಕರ, ಆಲ್ದೂರಿನ ಇಳೇಖಾನ ಉಮೇಶ್, ಬಾಳೆಹೊನ್ನೂರಿನ ಎಮ್.ಎಸ್. ಚನ್ನಕೇಶವ್ ಭಾಗವಹಿಸಿದ್ದರು.

ಶಿಗ್ಗಾಂವಿ ಸುರಗೀಮಠದ ಲಲಿತಾದೇವಿ ಶಿವಪುತ್ರಯ್ಯ ಮಕ್ಕಳು ದೀಪಾರಾಧನೆ ಸೇವೆಯನ್ನು, ಹುಬ್ಬಳ್ಳಿಯ ವೀರೇಶ ಪಾಟೀಲ ಅವರು ವಿದ್ಯುತ್ ದೀಪಾಲಂಕಾರ ಸೇವೆಯನ್ನು, ಚಿಕ್ಕಮಗಳೂರಿನ ಶಾಂತಮ್ಮ ಮತ್ತು ಮಕ್ಕಳು ದಾಸೋಹ ಸೇವೆಯನ್ನು ಸಲ್ಲಿಸಿದರು. ಸಹಸ್ರಾರು ಭಕ್ತರು ಕಾರ್ತಿಕ ದೀಪೋತ್ಸವ ಹಾಗೂ ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು.

ಇದೇ ಸಂದರ್ಭದಲ್ಲಿ ನವೆಂಬರ್ 27ರಂದು ಶ್ರೀ ರಂಭಾಪುರಿ ಪೀಠದ ನವ ನಿರ್ಮಾಣ ಶಿಲ್ಪಿ ಲಿಂ. ಶ್ರೀಮದ್ ರಂಭಾಪುರಿ ಜಗದ್ಗುರು ಶಿವಾನಂದ ರಾಜೇಂದ್ರ ಭಗವತ್ಪಾದರ ಪೀಠಾರೋಹಣ ಶತಮಾನೋತ್ಸವ ಸಮಾರಂಭದ ಆಮಂತ್ರಣ ಪತ್ರಿಕೆಗಳನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಬಿಡುಗಡೆಗೊಳಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!