ಹೆಸರಿನಿಂದಲೇ ಕುತೂಹಲ ಮೂಡಿಸಿರುವ ‘ಧರ್ಮಸ್ಥಳ ನಿಯೋಜಿಕವರ್ಗ್’ ಸಿನಿಮಾ ಇದೀಗ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮೂಲಕ ಸಿನಿರಸಿಕರ ಗಮನ ಸೆಳೆದಿದೆ. ಹೊಸ ವರ್ಷದ ಸಂಭ್ರಮದಲ್ಲಿ ಬಿಡುಗಡೆ ಆದ ಈ ಪೋಸ್ಟರ್ ಸಿನಿಮಾ ಕುರಿತು ಹೆಚ್ಚಿನ ನಿರೀಕ್ಷೆ ಮೂಡಿಸಿದೆ.
‘ಮೂವಿಂಗ್ ಡ್ರೀಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ ಸಂಸ್ಥೆ ನಿರ್ಮಿಸಿರುವ ಈ ಚಿತ್ರವನ್ನು ಜೈ ಜ್ಞಾನ ಪ್ರಭಾ ತೋಟ ಅವರು ನಿರ್ದೇಶನ ಮಾಡಿದ್ದು, ಹಿರಿಯ ನಟರಾದ ಸಾಯಿ ಕುಮಾರ್ ಹಾಗೂ ಸುಮನ್ ಅವರ ಜೊತೆಗೆ ನಟರಾಜ್, ವರುಣ್ ಸಂದೇಶ್ ಮತ್ತು ವಿತಿಕಾ ಶೇರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರದ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ರಾಜಕೀಯ ಹಿನ್ನೆಲೆ ಹೊಂದಿರುವ ಕಥಾಹಂದರ, ಭಾವನಾತ್ಮಕ ಅಂಶಗಳ ಜೊತೆಗೆ ತಿರುವು-ಮರಳುಗಳು ಪ್ರೇಕ್ಷಕರನ್ನು ಹಿಡಿದಿಡಲಿವೆ ಎಂದು ಚಿತ್ರತಂಡ ಭರವಸೆ ನೀಡಿದೆ.
ಈ ಬಗ್ಗೆ ಮಾತನಾಡಿದ ನಿರ್ದೇಶಕರು, “ಇದು ಕೇವಲ ರಾಜಕೀಯ ಸಿನಿಮಾ ಅಲ್ಲ, ಭಾವನಾತ್ಮಕ ಎಂಟರ್ಟೈನರ್ ಕೂಡ. ಹಿರಿಯ ಹಾಗೂ ಯುವ ಕಲಾವಿದರ ಸಮನ್ವಯವೇ ಸಿನಿಮಾದ ದೊಡ್ಡ ಪ್ಲಸ್” ಎಂದು ತಿಳಿಸಿದ್ದಾರೆ. ಚಂದ್ರಬೋಸ್ ಸಾಹಿತ್ಯಕ್ಕೆ ಸುನೀತಾ ಧ್ವನಿ ನೀಡಿರುವ ಹಾಡುಗಳು ಸಿನಿಮಾಕ್ಕೆ ಮತ್ತಷ್ಟು ಬಲ ನೀಡಲಿವೆ.
ಕಾಲಕೇಯ ಪ್ರಭಾಕರ್, ರಾಜಾ ರವೀಂದ್ರ, ಪೃಥ್ವಿ, ರಾಜೀವ್ ಕನಕಾಲ, ಶಿವ ಸೇರಿದಂತೆ ದೊಡ್ಡ ಕಲಾವಿದರ ಬಳಗವೇ ಈ ಸಿನಿಮಾದ ಮತ್ತೊಂದು ವಿಶೇಷ. ಸಾಯಿ ಕುಮಾರ್–ಸುಮನ್ ಕಾಂಬಿನೇಷನ್ ಹಾಗೂ ರಾಜಕೀಯ ಕಥಾಹಂದರದ ‘ಧರ್ಮಸ್ಥಳ ನಿಯೋಜಿಕವರ್ಗ್’ ಸಿನಿಮಾ ಮೇಲೆ ಸಿನಿಪ್ರೇಮಿಗಳು ಈಗಾಗಲೇ ಕಣ್ಣಿಟ್ಟಿದ್ದಾರೆ.



