ಗದಗ:- ಜಮೀನಿನ ಬಾಂದಾರನಲ್ಲಿ ಅರೆಬೆತ್ತಲೆ ಸ್ಥಿತಿಯಲ್ಲಿ ವ್ಯಕ್ತಿಯೋರ್ವನ ಶವ ಪತ್ತೆಯಾಗಿರುವ ಘಟನೆ ಗದಗ ತಾಲೂಕಿನ ಕಣಗಿನಾಳ ಗ್ರಾಮದ ಹರಲಾಪುರ ರಸ್ತೆಯಲ್ಲಿ ಜರುಗಿದೆ.
ಈಶಪ್ಪ ಕುರಿಯವರ ಎಂಬುವರ ಜಮೀನಿನಲ್ಲಿ ನೀರು ನಿಂತಿದ್ದ ತೆಗ್ಗಿನಲ್ಲಿ ಶವ ಪತ್ತೆಯಾಗಿದೆ. ಕೈಕಾಲು ಕಟ್ಟಿದ ಅರೆಬೆತ್ತಲೆ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಮೃತ ವ್ಯಕ್ತಿಯು ಸುಮಾರು 35ರಿಂದ 40 ವರ್ಷದೊಳಗಿನವನಾಗಿದ್ದು, ಕೈಗೆ ಒಳಉಡುಪಿನಿಂದ ಮತ್ತು ಕಾಲಿಗೆ ಪ್ಯಾಂಟ್‌ನಿಂದ ಕಟ್ಟಿ ಶವ ಎಸೆದಿರುವುದು ಕಂಡುಬಂದಿದೆ.
ಮೃತನ ತಲೆಯ ಭಾಗದಲ್ಲಿ ಹಾಗೂ ಗದ್ದದ ಹತ್ತಿರ ಗಾಯದ ಗುರುತುಗಳು ಕಂಡುಬಂದಿದ್ದು, ಕೊಲೆ ಮಾಡಿ ಶವವನ್ನು ಎಸೆದಿರುವ ಶಂಕೆ ವ್ಯಕ್ತವಾಗಿದೆ. ಘಟನೆಯ ಮಾಹಿತಿ ತಿಳಿದಂತೆಯೇ ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಡಿಎಸ್‌ಪಿ ಹಾಗೂ ಎಸ್‌ಪಿ ರವರು ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ. ಮೃತನ ಗುರುತು ಇನ್ನೂ ಪತ್ತೆಯಾಗಿಲ್ಲ. ಪೊಲೀಸರಿಂದ ತನಿಖೆ ಮುಂದುವರಿದಿದೆ.


