ಮಡಿಕೇರಿ:- ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಗ್ರಾಮದಲ್ಲಿ ಇಬ್ಬರು ಪ್ರಿಯಕರರ ಜೊತೆ ಸೇರಿ ಪತಿಯನ್ನೇ ಕೊಂದು ಕಾಫಿ ತೋಟದಲ್ಲಿ ಸುಟ್ಟುಹಾಕಿರುವ ಘಟನೆ ಜರುಗಿದೆ.
54 ವರ್ಷದ ರಮೇಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಮೃತ ವ್ಯಕ್ತಿಯ 2ನೇ ಪತ್ನಿ ನಿಹಾರಿಕಾ ಹಾಗೂ ಬಾಯ್‌ಫ್ರೆಂಡ್‌ಗಳಾದ ಹರಿಯಾಣ ಮೂಲದ ಅಂಕುಲ್ ರಾಣ ಹಾಗೂ ನಿಖಿಲ್‌ನನ್ನ ಪೊಲೀಸರು ಬಂಧಿಸಿದ್ದಾರೆ.
ಕೊಡಗಿನ ಕಾಫಿ ತೋಟವೊಂದರಲ್ಲಿ ನಿಗೂಢವಾಗಿ ಓರ್ವ ವ್ಯಕ್ತಿಯನ್ನು ಕೊಲೆ ಮಾಡಿ, ಸುಟ್ಟು ಹಾಕಲಾಗಿತ್ತು. ಈ ಕುರಿತು ಅ.8 ರಂದು ಮೃತದೇಹ ಪತ್ತೆಯಾಗಿತ್ತು. ವ್ಯಕ್ತಿಯ ಬಹುತೇಕ ಭಾಗಗಳು ಸುಟ್ಟು ಕರಕಲಾಗಿ ಕಾಲುಗಳು ಮಾತ್ರ ಸುಟ್ಟು ಹೋಗದೇ ಹಾಗೇ ಉಳಿದಿತ್ತು.
ಈ ಪ್ರಕರಣವನ್ನು ಭೇದಿಸುವುದು ಪೊಲೀಸರಿಗೆ ಸವಾಲಾಗಿತ್ತು. ಸದ್ಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಿಹಾರಿಕಾ ಎಂಬ ಮಹಿಳೆ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ರಮೇಶ್‌ನನ್ನು ಮದುವೆ ಆಗಿದ್ದರು. ಆಸ್ತಿ ಮಾರಾಟದಲ್ಲಿ 8 ಕೋಟಿ ರೂ. ಹಣ ಪಡೆಯುವ ಉದ್ದೇಶದೊಂದಿಗೆ ಆತನನ್ನು ವಿವಾಹವಾಗಿದ್ದಳು. ಆದರೆ ನಿಹಾರಿಕಾ ಹರಿಯಾಣ ಮೂಲದ ಅಂಕುಲ್ ರಾಣ ಎಂಬಾತನನ್ನು ಪ್ರೀತಿಸುತ್ತಿದ್ದಳು.
ಕಾರಿನಲ್ಲಿ ಡ್ರಾಪ್ ಮಾಡುವ ಉದ್ದೇಶದಿಂದ ತನ್ನ ಮರ್ಸಿಡಿಸ್ ಬೆಂಜ್ ಟಿಎಸ್ 07 ಎಫ್‌ಎಸ್ 5679 ಕಾರಿನಲ್ಲಿ ಹೊರಟು ಬಳಿಕ ಉಪ್ಪಲ್-ಭುವನಗಿರಿ ನಡುವಿನ ಹೆದ್ದಾರಿಯ ಬಳಿ ಕಾರನ್ನು ಬದಿಗೆ ನಿಲ್ಲಿಸಿ ಕೊಲೆ ಮಾಡಿದ್ದರು. ಅಲ್ಲಿಂದ ಬೆಂಗಳೂರಿನ ಹೊರಮಾವುದಲ್ಲಿದ್ದ ತನ್ನ ಇನ್ನೊಬ್ಬ ಬಾಯ್‌ಫ್ರೆಂಡ್ ನಿಖಿಲ್ ಬಳಿ ಬಂದು ವಿಚಾರ ತಿಳಿಸಿದ್ದರು.
ಮೃತದೇಹವನ್ನು ನಾಶ ಮಾಡುವ ಉದ್ದೇಶದಿಂದ ಬೆಂಗಳೂರಿನಿಂದ ನೇರವಾಗಿ ಗೂಗಲ್ ಮ್ಯಾಪ್ ಹಾಕಿಕೊಂಡು ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಬಳಿ ಪನ್ಯ ಎಸ್ಟೇಟ್‌ಗೆ ಬಂದಿದ್ದರು.
ಅಲ್ಲಿ ಮೃತದೇಹವನ್ನು ಯಾರಿಗೂ ಗೊತ್ತಾಗದಂತೆ ಬೆಂಗಳೂರಿನಿಂದಲೇ ತಂದಿದ್ದ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಅದೇ ಕಾರಿನಲ್ಲಿ ವಾಪಸ್ ತೆರಳಿದ್ದಾರೆ ಎನ್ನುವುದು ಪೊಲೀಸರ ತನಿಖೆಯ ಬಳಿಕ ಬೆಳಕಿಗೆ ಬಂದಿದೆ.