ಪುಟ್ಟರಾಜರ ಸಂಗೀತ ಸ್ಪೂರ್ತಿಯ ಸೆಲೆ

0
Spread the love

ವಿಜಯಸಾಕ್ಷಿ ಸುದ್ದಿ, ದಾವಣಗೆರೆ: ಡಾ. ಪಂಡಿತ ಪುಟ್ಟರಾಜ ಗವಾಯಿಗಳು ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೆ ತಮ್ಮ ಸಂಗೀತದ ಮೂಲಕ ಇಡೀ ವಿಶ್ವಕ್ಕೆ ಮಹತ್ವವಾದ ಕೊಡುಗೆಯನ್ನು ನೀಡಿದ್ದಾರೆ. ಅವರು ಸಂಗೀತದ ಎಲ್ಲಾ ಪ್ರಕಾರಗಳಲ್ಲಿ ಅಪಾರವಾದ ಜ್ಞಾನ ಮತ್ತು ಪ್ರೌಢಿಮೆಯನ್ನು ಸಾಧಿಸಿದ್ದರು ಎಂದು ಸಂಗೀತಭಾರತಿ ಸಂಸ್ಥಾಪಕ ಹೆಚ್.ಪಿ. ಕಲ್ಲಂಭಟ್ ಬಣ್ಣಿಸಿದರು.

Advertisement

ನಗರದ ಕುವೆಂಪು ಕನ್ನಡ ಭವನದಲ್ಲಿ ಡಾ. ಪಂಡಿತ್ ಪುಟ್ಟರಾಜ ಸೇವಾ ಸಮಿತಿ ಗದಗ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪೂಜ್ಯ ಡಾ. ಪಂಡಿತ ಪುಟ್ಟರಾಜರ ಅಭಿಮಾನಿ ಭಕ್ತರ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಗವಾಯಿಗಳ ಸಂಗೀತ ಕೇವಲ ಮನರಂಜನೆಯನ್ನು ನೀಡದೆ, ದಿವ್ಯ ಅನುಭೂತಿಯನ್ನು ನೀಡುವ ಶಕ್ತಿಯನ್ನು ಹೊಂದಿತ್ತು. ಹೀಗಾಗಿಯೇ ಅವರ ಕೀರ್ತಿ ವಿಶ್ವದಾದ್ಯಂತ ಪಸರಿಸಿದೆ. ಪ್ರಸ್ತುತ ರಾಜ್ಯದ ಪ್ರತಿ ಗ್ರಾಮ/ತಾಲೂಕು ಮತ್ತು ಜಿಲ್ಲೆಗಳಲ್ಲಿ ಪುಟ್ಟರಾಜ ಗವಾಯಿಗಳವರ ಹೆಸರಲ್ಲಿ ಅನೇಕ ಸಂಗೀತ ಕಾರ್ಯಕ್ರಮಗಳು ನಡೆಯುತ್ತಿರುವುದು ಅವರ ಹಿರಿಮೆಗೆ ಸಾಕ್ಷಿಯಾಗಿದೆ. ಅವರ ಆದರ್ಶಗಳು ಮತ್ತು ಸಂಗೀತದ ಮೇಲಿನ ಅವರ ಅಪಾರ ಪ್ರೀತಿ ಇಂದಿನ ಪೀಳಿಗೆಗೆ ಸ್ಪೂರ್ತಿಯ ಸೆಲೆಯಾಗಿದೆ ಎಂದು ನುಡಿದರು.

‘ಭಕ್ತಿ ಎಂಬುದು ಪ್ರೇಮದ ಸಫಲತೆ ನೋಡಾ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಉಪನ್ಯಾಸಕಿ ವಾಣಿ ಬಸವರಾಜ್, ಭಕ್ತಿಯೆಂದರೆ ಕೇವಲ ಆಚರಣೆ ಅಲ್ಲ. ಅದು ಒಳಗಿನ ಪ್ರೇಮದ ಸ್ವಚ್ಛತೆಯಿಂದ ಕೂಡಿದ ಜೀವನವಾಗಿದೆ. ಅಕ್ಕಮಹಾದೇವಿ ಜೀವನವೇ ಭಕ್ತಿಯ ರೂಪವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಅಕ್ಕನ ವಚನಗಳು ಮತ್ತು ತ್ಯಾಗದ ಜೀವನವು ಭಕ್ತಿಯ ಮೂಲಕ ವಿಷಯದ ಆಸೆಗಳನ್ನು ಜಯಸಿ ಪ್ರೇಮದ ಸಾಕಾರವಾದ ಶಿವನಲ್ಲಿ ಲೀನವಾಗುವ ಸಂದೇಶವನ್ನು ನೀಡುತ್ತವೆ ಎಂದು ವಚನಗಳನ್ನು ಉದಾಹರಿಸಿ ವಿವರಿಸಿದರು.

ಬೈಲಹೊಂಗಲ ತಾಲೂಕಾ ಬುಡರಕಟ್ಟಿ ಶ್ರೀ ಮಡಿವಾಳೇಶ್ವರ ಮಠದಶ್ರೀ ಶಿವಪಂಚಾಕ್ಷರಿ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ದಾವಣಗೆರೆ ಜಿಲ್ಲಾಧ್ಯಕ್ಷ ವಿನಾಯಕ ಪಿ.ಬಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾಧ್ಯಕ್ಷರಾದ ಗಿರಿಜಾ ಮುಳುಗುಂದ ಭಾಗವಹಿಸಿದ್ದರು. ರಾಜ್ಯ ಸಂಚಾಲಕಿ ಸುಮಾ ಹಡಪದ ಪ್ರಾರ್ಥನೆ ಹಾಡಿದರು. ಸೇವಾ ಸಮಿತಿಯ ದಾವಣಗೆರೆ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ಸತೀಶ ಧಾರವಾಡ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸ್ಥಾಪಕರಾದ ವೇದಮೂರ್ತಿ ಚೆನ್ನವೀರ ಸ್ವಾಮಿಗಳು ಹಿರೇಮಠ ಮಾತನಾಡಿ, ಕಳೆದ 24 ವರ್ಷಗಳಿಂದ ಸಂಸ್ಥೆಯು ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಪುಟ್ಟರಾಜ ಗವಾಯಿಗಳ ಹೆಸರುಗದುಗಿನಲ್ಲಿ ಪ್ರಸಿದ್ಧಿಯಾದಷ್ಟೇ ದಾವಣಗೆರೆಯಲ್ಲಿಯೂ ವೀರೇಶ್ವರ ಪುಣ್ಯಾಶ್ರಮದ ಮೂಲಕ ಪ್ರಸಿದ್ಧಿಯಾಗಿದೆ ಎಂದರು.


Spread the love

LEAVE A REPLY

Please enter your comment!
Please enter your name here