ಉತಾರ ಪೂರೈಕೆಯ ನಿಗೂಢ ರಹಸ್ಯ!

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಇತ್ತೀಚಿನ ದಿನಗಳಲ್ಲಿ ಶಿರಹಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಲೇಔಟ್‌ಗಳು ನಿರ್ಮಾಣವಾಗಿದ್ದು, ಇದರ ಸಂಪೂರ್ಣ ಮಾಹಿತಿ ಪ.ಪಂ ಕಚೇರಿಯಲ್ಲಿಲ್ಲ. ಎಷ್ಟು ಉತಾರಗಳನ್ನು ಪೂರೈಸಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಎಂದು ಪ.ಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ, ಉಪಾಧ್ಯಕ್ಷೆ ನೀಲವ್ವ ಹುಬ್ಬಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಶಿರಹಟ್ಟಿ ಸಿಬ್ಬಂದಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ಅವರು ಮಂಗಳವಾರ ಶಿರಹಟ್ಟಿಯ ಪ.ಪಂ ಕಚೇರಿಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

ಸಾಮಾನ್ಯ ಸಭೆ ನಿಗದಿಪಡಿಸಿದ್ದರೂ ಸಹ ಲೇಔಟ್‌ಗಳ ಬಗ್ಗೆ ಮಾಹಿತಿ ನೀಡಬೇಕಿದ್ದ ಆರ್‌ಐ ಮತ್ತು ಕೇಸ್ ವರ್ಕರ್ ಗೈರು ಹಾಜರಾಗಿದ್ದು, ಸಭೆ ನಡೆಸುವುದು ಸೂಕ್ತವಲ್ಲ. ಇನ್ನು 3 ದಿನಗಳ ಒಳಗಾಗಿ ಮತ್ತೆ ಸಭೆ ಕರೆಯಲು ಮುಖ್ಯಾಧಿಕಾರಿಗೆ ಸೂಚಿಸಿದರು.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಾಣವಾದ ಲೇಔಟ್‌ಗಳ ಸಂಖ್ಯೆ ಎಷ್ಟು, ಅಲ್ಲಿ ಮೂಲ ಸೌಕರ್ಯ ಒದಗಿಸಲಾಗಿದೆಯೇ, ಇಲ್ಲಿಯವರೆಗೂ ಎಷ್ಟು ಪ್ರಮಾಣ ಉತಾರ ಪೂರೈಸಿದೆ ಎಂಬುದನ್ನು ಸದಸ್ಯರು ಇಂಜಿನಿಯರ್ ಬಳಿ ಕೇಳಿದರೆ ತಮಗೆ ಲೇಔಟ್‌ಗಳ ಮಾಹಿತಿ ಇಲ್ಲ ಎಂದರು. ಹೀಗಾದರೆ ಶಿರಹಟ್ಟಿಯಲ್ಲಿ ಏನು ಮಾಡಿದರೂ ನಡೆಯುತ್ತದೆಯೇ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಶಿರಹಟ್ಟಿ ಪ.ಪಂ ವ್ಯಾಪ್ತಿಯಲ್ಲಿಯ ಬಹುತೇಕ ಲೇಔಟ್‌ಗಳಲ್ಲಿ ಯಾವುದೇ ಮೂಲಸೌಕರ್ಯ ಒದಗಿಸದೇ ನಿತ್ಯವೂ ಉತಾರ ಪೂರೈಸುತ್ತಿದ್ದಾರೆ. ಅಧ್ಯಕ್ಷ-ಉಪಾಧ್ಯಕ್ಷ ಮತ್ತು ಸ್ಥಾಯಿ ಸಮಿತಿ ಗಮನಕ್ಕೆ ತರದೇ ಖರ್ಚು-ವೆಚ್ಚಗಳನ್ನು ನಿರ್ವಹಿಸುತ್ತಿದ್ದಾರೆ. ನಿಗದಿತ ಸಮಯದಲ್ಲಿ ಸಭೆಗಳನ್ನು ನಡೆಸುತ್ತಿಲ್ಲ, ಸಾರ್ವಜನಿಕರಿಗೆ ಇಲ್ಲಿಯ ಅಧಿಕಾರಿಗಳು ಸಕಾಲಕ್ಕೆ ಸಿಗುತ್ತಿಲ್ಲ, ಇಂಜಿನಿಯರ್ ಲಾಗಿನ್ ಬೇರೆಯವರು ಉಪಯೋಗಿಸುತ್ತಿದ್ದಾರೆ. ಹೀಗೆ ಸರ್ವಾಧಿಕಾರಿ ಧೋರಣೆ ಮುಂದುವರೆದು ಹಲವು ಗೊಂದಲಗಳ ಗೂಡಾದ ಕಚೇರಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಸದಸ್ಯರು ಒತ್ತಾಯಿಸಿದರು.

ಅಧ್ಯಕ್ಷೆ ದೇವಕ್ಕ ಗುಡಿಮನಿ, ಉಪಾಧ್ಯಕ್ಷೆ ನೀಲವ್ವ ಹುಬ್ಬಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಶಿರಹಟ್ಟಿ, ಸದಸ್ಯರಾದ ಸಂದೀಪ ಕಪ್ಪತ್ತನವರ, ಪರಮೇಶ ಪರಬ, ಫಕ್ಕೀರೇಶ ರಟ್ಟಿಹಳ್ಳಿ, ಅಶ್ರತಅಲಿ ಢಾಲಾಯತ, ನಾಮನಿರ್ದೇಶಿತ ಸದಸ್ಯ ಅಲ್ಲಾಭಕ್ಷಿ ನಗಾರಿ, ಸೋಮನಗೌಡ ಮರಿಗೌಡ, ಮುಖ್ಯಾಧಿಕಾರಿ ಸವಿತಾ ತಾಂಬ್ರೆ ಮುಂತಾದವರು ಉಪಸ್ಥಿತರಿದ್ದರು.

ಹೊಸದಾಗಿ ನಿರ್ಮಾಣವಾಗುತ್ತಿರುವ ಬಡಾವಣೆಗಳಲ್ಲಿ ಅಗತ್ಯ ಮೂಲಸೌಕರ್ಯ ಒದಗಿಸದೇ ಇರುವುದರಿಂದ ಉತಾರ ನೀಡದಂತೆ ಹಿಂದಿನ ಸಭೆಯಲ್ಲಿ ಠರಾವು ಪಾಸ್ ಮಾಡಿದ್ದರೂ ಸಹ ಹೊಸದಾಗಿ ಉತಾರಗಳನ್ನು ನೀಡಲಾಗುತ್ತಿದೆ. ಈ ಬಗ್ಗೆ ಚುನಾಯಿತ ಪ್ರತಿನಿಧಿಗಳನ್ನು ಕೇಳದೇ ತಮಗಿಷ್ಟ ಬಂದಂತೆ ಇಲ್ಲಿಯ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಶೀಘ್ರವೇ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಶಿರಹಟ್ಟಿ ಹೇಳಿದರು.


Spread the love

LEAVE A REPLY

Please enter your comment!
Please enter your name here