ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಜಿಟಿಜಿಟಿ ಮಳೆಯ ನಡುವೆಯೂ ಪಟ್ಟಣ ಸೇರಿ ತಾಲೂಕಿನೆಲ್ಲೆಡೆ ಮೊಹರಂ ಹಬ್ಬವನ್ನು ಸಂಪ್ರದಾಯಬದ್ಧವಾಗಿ ಆಚರಿಸಲು ಜನತೆ ಸನ್ನದ್ಧರಾಗಿದ್ದಾರೆ. ಮೊಹರಂ ಹಿಂದೂ-ಮುಸ್ಲಿಂ ಭಾವೈಕ್ಯದ ಹಬ್ಬವಾಗಿ ಇಂದಿಗೂ ತನ್ನ ಆಚರಣೆ, ಪರಂಪರೆ ಮತ್ತು ಸಾಂಸ್ಕೃತಿಕ ವೈಭವವನ್ನು ಉಳಿಸಿಕೊಂಡು ಬಂದಿದೆ.
ಈ ಹಬ್ಬದ ಆಚರಣೆಗೆ ಒಂದು ವಾರ ಮೊದಲಿಂದಲೇ ಎಲ್ಲೆಡೆ ಮೊಹರಂ ಹುಲಿಗಳದ್ದೇ ಅಬ್ಬರ ಕಂಡು ಬರುತ್ತಿದೆ. ಹಸೇನ-ಹುಸೇನರು ವೀರ ಸ್ವರ್ಗವನ್ನಪ್ಪಿದ ಹಿನ್ನೆಲೆಯಲ್ಲಿ ಆಚರಿಸುವ ಮೊಹರಂ ಹಬ್ಬದ ಸಂದರ್ಭದಲ್ಲಿ ನಂಬಿಕೆಯಂತೆ ಪ್ರಾಯಶ್ಚಿತ್ತ ಮತ್ತು ಹರಕೆಗಾಗಿ ಮೈತುಂಬ ಹುಲಿ ವೇಷ ಬರೆಯಿಸಿಕೊಂಡು ಹಲಗೆ ಬಾರಿಸುತ್ತಾ ನಾದಕ್ಕೆ ತಕ್ಕಂತೆ ಹುಲಿ ಕುಣಿಯುತ್ತಾರೆ. ಅಳ್ಳೊಳ್ಳಿ ಬವ್ವಾ ವೇಷದೊಂದಿಗೆ ಜನರನ್ನು ಆಕರ್ಷಿಸುತ್ತಾ ಕಾಣಿಕೆ ಸ್ವೀಕರಿಸುತ್ತಾರೆ.
ತಮ್ಮ ಮಕ್ಕಳು ಹುಲಿಯಂತೆ ಶಕ್ತಿವಂತ, ಆರೋಗ್ಯವಂತ, ಉಜ್ವಲ ಭವಿಷ್ಯಕ್ಕಾಗಿ ಮತ್ತು ಇಷ್ಟಾರ್ಥ ಸಿದ್ದಿಗಾಗಿ ಅಲೈ ದೇವರಿಗೆ 5, 11, 21 ವರ್ಷ ಅಥವಾ ಜೀವಹುಲಿವೇಷದ ಹರಕೆ ಕಟ್ಟಿಕೊಳ್ಳುತ್ತಾರೆ. ಅದಕ್ಕಾಗಿ ಮೊಹರಂ ಹಬ್ಬದ ವೇಳೆ ಹುಲಿವೇಷ ಬರೆಸಿಕೊಳ್ಳುವ ಸಂಪ್ರದಾಯವಿದೆ. ಹುಲಿ ವೇಷ ಬರೆಯುವಾಗ ಹಳದಿ ಬಣ್ಣದ ಮೇಲೆ ನವಿಲಿನ ಚಿತ್ರ, ಹುಲಿಯ ಚಿತ್ರ, ಕುದುರೆಯ ಚಿತ್ರ, ಹಸ್ತ, ದೇವರ ಛತ್ರಿ, ಮೀನು, ಹಾವಿನ ಚಿತ್ರಗಳನ್ನು ಸೊಗಸಾಗಿ ಬಿಡಿಸಲಾಗುತ್ತದೆ.
ಕೊನೆಯಲ್ಲಿ ವೇಷಕ್ಕೆ ದೃಷ್ಟಿಯಾಗಬಾರದು ಎಂಬ ಉದ್ದೇಶದಿಂದ ಕೈಗೆ ನವಿಲುಗರಿ ಕಟ್ಟಲಾಗುತ್ತದೆ. ಈ ಒಂದೊಂದು ಚಿತ್ರಗಳೂ ಕೂಡ ಅನೇಕ ಸಂದೇಶಗಳನ್ನು ಸಾರುತ್ತವೆ. ಹಬ್ಬದ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ಪಟ್ಟಣದಲ್ಲಿ ಹೊಸ ಬಟ್ಟೆ, ದಿನಸಿ ಸೇರಿ ಹಬ್ಬದ ವಸ್ತುಗಳ ಖರೀದಿ ಸಂಭ್ರಮ ಕಂಡುಬಂದಿತು. ಪಟ್ಟಣ ಸೇರಿ ಲಕ್ಷ್ಮೇಶ್ವರ ಪೊಲೀಸ್‌ಠಾಣಾ ವ್ಯಾಪ್ತಿಯಲ್ಲಿ 52 ಕಡೆ ನಿಗದಿತ ಸ್ಥಳದಲ್ಲಿ ಪಾಂಜಾಗಳ ಪ್ರತಿಷ್ಠಾನೆ ಮಾಡಲಾಗಿದ್ದು, ಭಾನುವಾರ ಪಾಂಜಾಗಳ ಮೆರವಣಿಗೆ ನಡೆದು ಸಂಜೆ ಹೊಳೆಗೆ ಸಾಗಿಸುವ ಸಂಪ್ರದಾಯ ನೆರವೇರಿಸಲಾಗುತ್ತದೆ.