ವಿಜಯಸಾಕ್ಷಿ ಸುದ್ದಿ ಗಜೇಂದ್ರಗಡ : ದೇಶವಿರೋಧಿ ಘೋಷಣೆಗಳು ಹಾಗೂ ದೇಶ ವಿಭಜನೆಯ ಹೇಳಿಕೆಗಳನ್ನು ಖಂಡಿಸಿ ಪಟ್ಟಣದ ಬಿಜೆಪಿ ಯುವ ಘಟಕದಿಂದ ಮಂಗಳವಾರ ತಿರಂಗಾ ಯಾತ್ರೆ ನಡೆಯಿತು.
ಈ ವೇಳೆ ಬಿಜೆಪಿ ಮುಖಂಡ ಅಶೋಕ ವನ್ನಾಲ ಮಾತನಾಡಿ, ಒಡೆದಾಳುವ ನೀತಿ, ಅಲ್ಪಸಂಖ್ಯಾತರ ತುಷ್ಟೀಕರಣದ ರಾಜಕಾರಣ ಮಾಡುತ್ತಾ ಬಂದಿರುವ ಕಾಂಗ್ರೆಸ್‌ನ ದುರಾಡಳಿತದಿಂದ ರಾಜ್ಯ ಹಾಗೂ ದೇಶದಲ್ಲಿ ಭಾರತ ವಿರೋಧಿ ಮನಸ್ಥಿತಿಗಳ ಸಂಖ್ಯೆ ಉಲ್ಭಣಿಸುತ್ತಿದೆ ಎನ್ನುವುದಕ್ಕೆ ಅನೇಕ ಘಟನೆಗಳು ಸಾಕ್ಷಿಯಾಗಿವೆ. ಬಿಜೆಪಿ ಎಂದರೆ ದೇಶ ಭಕ್ತರ, ರಾಷ್ಟವಾದಿಗಳ ಪಕ್ಷ. ಪ್ರಧಾನಿ ಮೋದಿ ಅವರ 10 ವರ್ಷದ ಆಡಳಿತ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದೆ. ಹೀಗಾಗಿ ಪ್ರಧಾನಿ ಮೋದಿ ಅವರ ಕೈ ಬಲಪಡಿಸಲು ನಾವೆಲ್ಲ ಒಂದಾಗಿ ಸದೃಢ ಭಾರತ ರಾಷ್ಟದ ನಿರ್ಮಾಣಕ್ಕೆ ಮುಂದಾಗಬೇಕಿದೆ. ದೇಶವಿರೋಧಿಗಳ ವಿರುದ್ಧ ಸೂಕ್ತ ಹಾಗೂ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಇದಕ್ಕೂ ಮುನ್ನ ಪಟ್ಟಣದ ಬಿಜೆಪಿ ಕಾರ್ಯಾಲಯದಿಂದ ಆರಂಭವಾದ ಮೆರವಣಿಗೆಗೆ ಮಾಜಿ ಸಚಿವ ಕಳಕಪ್ಪ ಬಂಡಿ ಚಾಲನೆ ನೀಡಿ ಘಟನೆಯನ್ನು ತೀವ್ರವಾಗಿ ಖಂಡಿಸಿ, ದೇಶ ವಿರೋಧಿ ಘೋಷಣೆಗಳನ್ನು ಕೂಗಿದ ಆರೋಪಿಗಳಿಗೆ ತಕ್ಷಣವೇ ಶಿಕ್ಷೆ ಪ್ರಕಟಿಸಬೇಕು ಎಂದರು.
ಬಳಿಕ ತಿರಂಗಾ ಯಾತ್ರೆಯು ಕಾಲಕಾಲೇಶ್ವರ ವೃತ್ತ, ಜೋಡು ರಸ್ತೆ, ದುರ್ಗಾ ವೃತ್ತ ಮಾರ್ಗವಾಗಿ ಅಂಬೇಡ್ಕರ ವೃತ್ತ, ಶಿವಾಜಿ ವೃತ್ತದಿಂದ ಕಾಲಕಾಲೇಶ್ವರ ವೃತ್ತ ತಲುಪಿದ ನಂತರ ಸಭೆಯಾಗಿ ಮಾರ್ಪಟ್ಟಿತು.
ಈ ವೇಳೆ ಬಿಜೆಪಿ ರೋಣ ಮಂಡಲ ಅಧ್ಯಕ್ಷ ಮುತ್ತಣ್ಣ ಕಡಗದ, ನಗರ ಘಟಕ ರಾಜೇಂದ್ರ ಘೋರ್ಪಡೆ, ವೀರಪ್ಪ ಪಟ್ಟಣಶೆಟ್ಟಿ, ಕನಕಪ್ಪ ಅರಳಿಗಿಡದ, ಮುದಿಯಪ್ಪ ಮುಧೋಳ, ಸುಭಾಸ ಮ್ಯಾಗೇರಿ, ಆರ್.ಕೆ. ಚವ್ಹಾಣ, ಸಂಜೀವ ಜೋಶಿ, ಶ್ರೀನಿವಾಸ ಸವದಿ, ಸೂಗುರೇಶ ಕಾಜಗಾರ, ಬುಡ್ಡಪ್ಪ ಮೂಲಿಮನಿ, ಡಿ.ಜಿ. ಕಟ್ಟಿಮನಿ, ಸಂಜೀವ ದೇಸಾಯಿ, ಗುಲಾಂ ಹುನಗುಂದ ಮುಂತಾದವರಿದ್ದರು.