ಸ್ಯಾಂಡಲ್ ವುಡ್ ನಟಿ ಭಾವನಾ ರಾಮಣ್ಣ ಇತ್ತೀಚೆಗೆ ಐವಿಎಫ್ ಚಿಕಿತ್ಸೆ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆದ್ರೆ ಅದರಲ್ಲಿ ಒಂದು ಮಗು ಹುಟ್ಟುವ ಮೊದಲೇ ಮೃತಪಟ್ಟಿತ್ತು. ಎರಡು ವಾರಗಳ ಹಿಂದೆಯೇ ಭಾವನಾ ಅವರಿಗೆ ಹೆರಿಗೆಯಾಗಿದ್ದು ಇದೀಗ ಮಗು ಕಳೆದುಕೊಂಡ ನೋವನ್ನು ನಟಿ ತೋಡಿಕೊಂಡಿದ್ದಾರೆ.
ಐವಿಎಫ್ ಮೂಲಕ ಗರ್ಭ ಧರಿಸಿದ್ದ ಭಾವನಾ ಅವಳಿ ಮಕ್ಕಳಿಗೆ ಜನ್ಮ ನೀಡುವ ಸಂಭ್ರಮದಲ್ಲಿದ್ದರು. ಅವಧಿಗೂ ಮೊದಲೇ ಅವರಿಗೆ ರಕ್ತಸ್ರಾವ ಆರಂಭವಾದ ಹಿನ್ನೆಲೆಯಲ್ಲಿ ಆಗಸ್ಟ್ 20 ರಂದು ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಲಾಯಿತು. ಈ ಅವಧಿಯಲ್ಲಿ ಒಂದು ಮಗು ತೀರಿಕೊಂಡಿದೆ. ಇನ್ನೊಂದು ಮಗು ಆರೋಗ್ಯವಾಗಿದೆ.
ಇದೇ ವಿಚಾರದ ಬಗ್ಗೆ ಮಾತನಾಡಿರುವ ನಟಿ ಭಾವನಾ ರಾಮಯ್ಯ.. ಸೀಮಂತದವರೆಗೆ ಎಲ್ಲವೂ ಸರಿಯಾಗಿತ್ತು. ಆಮೇಲೆ ಹೆಚ್ಚು ಹೊತ್ತು ಕೂರಲು ಸಾಧ್ಯವಾಗುತ್ತಿರಲಿಲ್ಲ. ಬಳಿಕ ರಕ್ತಸ್ರಾವ ಶುರುವಾಯಿತು. ಹತ್ತಿರದಲ್ಲೇ ಇದ್ದ ಆಸ್ಪತ್ರೆಗೆ ತೆರಳಿದ್ದೆ. ಅಲ್ಲಿನ ವೈದ್ಯರು ನಾನಿರುವ ಪರಿಸ್ಥಿತಿ ಬಗ್ಗೆ ವಿವರಿಸಿದರು.
ಆ ಹೊತ್ತಿಗೆ ತಾಯಿಯಿಂದ ಮಗುವಿಗೆ ಹೋಗುವ ರಕ್ತ ಪೂರೈಕೆಯಲ್ಲೇ ಸಮಸ್ಯೆಯಾಗಿ ಪರಿಸ್ಥಿತಿ ಅಪಾಯಕರ ಸ್ಥಿತಿ ಮುಟ್ಟಿತ್ತು. ನಾನು ನೋಡುತ್ತಿರುವಂತೆಯೇ ಒಂದು ಮಗುವಿನ ಹೃದಯ ಬಡಿತ ಶೇಕಡಾ 50 ರಷ್ಟ್ಯ ಇಳಿದು ಹೋಗಿತ್ತು. ತೂಕವೂ ಇಳಿದಿತ್ತು. ಮಗುವಿನ ಆರೋಗ್ಯ ಸುಧಾರಿಸಲಿ ಅಂತಾ ಪ್ರಾರ್ಥಿಸುತ್ತಿದ್ದೇವು. ಆದರೆ ಸುಧಾರಿಸಲೇ ಇಲ್ಲ. ನಾನು ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಪುಣ್ಯಕ್ಕೆ ಇನ್ನೊಂದು ಆರೋಗ್ಯವಾಗಿತ್ತು ಎಂದಿದ್ದಾರೆ.
ಮಗುವಿನ ಹೃದಯ ಬಡಿತ ಸೊನ್ನೆಯತ್ತ ಕುಸಿಯುತ್ತಿರುವುದನ್ನು ನೋಡಿದಾಗ ಆಗಿರುವ ನೋವನ್ನು ವಿವರಿಸೋದು ಕಷ್ಟ. ಮಗಳನ್ನು ಕಳೆದುಕೊಂಡ ನೋವು ಸದಾ ಕಾಡುತ್ತಿರುತ್ತದೆ. ಅವಳಿ ಮಕ್ಕಳನ್ನು ಮಡಿಲು ತುಂಬಿಕೊಳ್ಳಲು ಬಹಳ ಕಾದಿದ್ದೆ. ಈಗ ಒಂದು ಮಗುವನ್ನು ಕಳೆದುಕೊಂಡಿದ್ದಕ್ಕೆ ಅಳುವುದೋ, ಇನ್ನೊಂದು ಮಗು ಆರೋಗ್ಯವಾಗಿ ಜನಿಸಿದ್ದಕ್ಕೆ ಖುಷಿ ಪಡುವುದೋ ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ನನ್ನ ಅಜ್ಜಿಯ ಹೆಸರು ರುಕ್ಕಿಣೀ ಮಗಳಿಗೂ ಅದೇ ಹೆಸರನ್ನು ಇಟ್ಟಿದ್ದೇನೆ. ನನ್ನ ಮಗಳ ಪೂರ್ಣ ಹೆಸರು ರುಕ್ಕಿಣಿ ಭಾವನಾ ರಾಮಣ್ಣ. ಈಗ ಮಗಳ ಜೊತೆಗೆ ಮನೆಗೆ ಬಂದಿದ್ದೇನೆ ಎಂದಿದ್ದಾರೆ.