ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: “ಗುರು-ಶಿಷ್ಯ ಪರಂಪರೆಯೇ ಭಾರತೀಯ ಧರ್ಮ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕತೆಯ ಭದ್ರ ಬುನಾದಿಯಾಗಿದೆ. ‘ಹರ ಮುನಿದರೆ ಗುರು ಕಾಯುವನು’ ಎಂಬಂತೆ ಗುರು ಶಿಷ್ಯನ ಬದುಕಿಗೆ ದಾರಿದೀಪವಾಗಿದ್ದು, ಗುರು ತೋರಿದ ಧರ್ಮಮಾರ್ಗದಲ್ಲಿಯೇ ರಾಷ್ಟ್ರ ಮತ್ತು ಸಂಸ್ಕೃತಿಯ ರಕ್ಷಣೆ ಸಾಧ್ಯ,” ಎಂದು ಹಿಂದೂ ಜನಜಾಗೃತಿ ಸಮಿತಿಯ ವಕ್ತಾರೆ ವಿದುಲಾ ಹಳದೀಪುರ ಹೇಳಿದರು.
ಪಟ್ಟಣದ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದಲ್ಲಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ಗುರುಪೂರ್ಣಿಮೆ ಮಹೋತ್ಸವದಲ್ಲಿ ಅವರು ಮಾತನಾಡಿದರು.
ಗುರುಗಳು ಜ್ಞಾನ ಹಾಗೂ ಆಧ್ಯಾತ್ಮಿಕ ಶಕ್ತಿಯ ಭಂಡಾರವಾಗಿದ್ದು, ಸಾಮಾನ್ಯ ವ್ಯಕ್ತಿಯನ್ನೂ ಆದರ್ಶ ವ್ಯಕ್ತಿತ್ವವಾಗಿ ರೂಪಿಸುವ ಸಾಮರ್ಥ್ಯ ಹೊಂದಿದ್ದಾರೆ. “ಧರ್ಮೋ ರಕ್ಷತಿ ರಕ್ಷಿತಃ” ಎಂಬ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಪ್ರತಿಯೊಬ್ಬರೂ ಧರ್ಮ ಹಾಗೂ ರಾಷ್ಟ್ರ ರಕ್ಷಣೆಗೆ ಕಂಕಣಬದ್ಧರಾಗಬೇಕು ಎಂದು ಹೇಳಿದರು.
ದೇಶ ಹಾಗೂ ಧರ್ಮದ ಮೇಲೆ ವಿವಿಧ ಸವಾಲುಗಳು ಎದುರಾಗುತ್ತಿರುವ ಸಂದರ್ಭದಲ್ಲಿ ಹಿಂದೂ ಸಮಾಜವು ಸ್ವಬೋಧ ಮತ್ತು ಶತ್ರುಬೋಧ ಬೆಳೆಸಿಕೊಂಡು ಸಂಘಟಿತರಾಗಬೇಕಿದೆ. ಸಮಾಜ ಸಂಘಟಿತವಾದಾಗ ಮಾತ್ರ ರಾಷ್ಟ್ರ ಮತ್ತು ಧರ್ಮದ ರಕ್ಷಣೆಗೆ ಬಲ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.
ಪ್ರತಿಯೊಬ್ಬರೂ ಈಶ್ವರ ಪೂಜೆ, ಧ್ಯಾನ ಮತ್ತು ಪ್ರಾರ್ಥನೆಯ ಮೂಲಕ ಆಧ್ಯಾತ್ಮಿಕ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು. ಮಕ್ಕಳಲ್ಲಿ ಬಾಲ್ಯದಿಂದಲೇ ನೈತಿಕ ಮೌಲ್ಯಗಳು, ಧರ್ಮಬೋಧನೆ ಹಾಗೂ ಗುರು-ಹಿರಿಯರ ಬಗ್ಗೆ ಗೌರವ ಬೆಳೆಸಬೇಕು ಎಂದು ಕರೆ ನೀಡಿದರು.
ಸಮಾಜಕ್ಕೆ ಒಳಿತಾಗುವ ಗುಣಗಳನ್ನು ಬೆಳೆಸಿಕೊಳ್ಳುವ ಜೊತೆಗೆ ಭಾರತದ ಸಾಂಸ್ಕೃತಿಕ ಪರಂಪರೆ ಉಳಿಸುವ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು. ಭಾರತ ಮಾತೆ, ಗೋ ರಕ್ಷಣೆ ಹಾಗೂ ಸಂಸ್ಕೃತಿ ಸಂರಕ್ಷಣೆಯಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಮುಂಬರುವ ತುರ್ತು ಪರಿಸ್ಥಿತಿಗಳು ಹಾಗೂ ಪ್ರಕೃತಿ ವಿಕೋಪಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರೂ ಪ್ರಥಮ ಚಿಕಿತ್ಸೆ, ಅಗ್ನಿಶಾಮಕ ಹಾಗೂ ಸ್ವರಕ್ಷಣಾ ತರಬೇತಿ ಪಡೆಯಬೇಕು ಎಂದು ಸಲಹೆ ನೀಡಿದರು.
ಯುವ ಮುಖಂಡ ಆದೇಶ ಹುಲಗೂರು ಮಾತನಾಡಿ, ಜಾತಿ-ಪಂಗಡಗಳ ಭೇದ ಮರೆತು ಹಿಂದೂ ಸಮಾಜ ಸಂಘಟಿತವಾದಾಗ ಮಾತ್ರ ಸಮಾಜದ ಮೇಲಿನ ಅನ್ಯಾಯ ಮತ್ತು ದೌರ್ಜನ್ಯಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವ್ಯಾಸಪೂಜೆ, ಗುರುಪೂಜೆ, ಧರ್ಮರಕ್ಷಕರ ಸತ್ಕಾರ, ಸ್ವರಕ್ಷಣಾ ಕೌಶಲ್ಯದ ಪ್ರಾತ್ಯಕ್ಷಿಕೆ, ಕಿರುಚಿತ್ರ ಹಾಗೂ ಗ್ರಂಥ ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು.
ಶಂಕರ ಬ್ಯಾಡಗಿ, ದುಂಡಪ್ಪ ಸವಣೂರ, ಈರಣ್ಣ ಪೂಜಾರ, ವಿರೇಶ ಚಿಂಚಲಿ, ಪ್ರಕಾಶ ಬೆಟಗೇರಿ, ಮುರುಗೇಶ ರುದ್ರಶೆಟ್ಟಿ, ಶೋಭಾ ಇಟಗಿ, ಲಕ್ಷ್ಮೀ ತಟ್ಟಿ, ಬೇಬಿ ರುದ್ರಶೆಟ್ಟಿ, ಗೀತಾ ಬಡಿಗೇರ, ಅನುಸೂಯ ಸಜ್ಜನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಗುರು ತೋರಿದ ಧರ್ಮಮಾರ್ಗದಲ್ಲಿಯೇ ನಡೆಯುವ ಮೂಲಕ ರಾಷ್ಟ್ರ ಮತ್ತು ಸಂಸ್ಕೃತಿಯನ್ನು ರಕ್ಷಿಸಬಹುದು. ಸಮಾಜ ಸಂಘಟಿತವಾದಾಗ ಮಾತ್ರ ಧರ್ಮದ ಮೇಲೆ ಬರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯ.”
– ವಿದುಲಾ ಹಳದೀಪುರ, ವಕ್ತಾರೆ, ಹಿಂದೂ ಜನಜಾಗೃತಿ ಸಮಿತಿ



