ಚಿತ್ರದುರ್ಗ: ಕಾಂಗ್ರೆಸ್ಸಿಗರ ಕುರ್ಚಿ ಕಾದಾಟದಿಂದ ರಾಜ್ಯದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ರಾಜ್ಯದಲ್ಲಿ ನಿಜವಾಗಿ ಏನೂ ಅಭಿವೃದ್ಧಿ ಆಗಿಲ್ಲ; ಕಾಂಗ್ರೆಸ್ಸಿನ ವಿರುದ್ಧ ಜನರು ಹಿಡಿಶಾಪ ಹಾಕುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರ ಕೊಟ್ಟರು. ನಿನ್ನೆ ಜರ್ಮನಿಯ ಚಾನ್ಸೆಲರ್ ಕರ್ನಾಟಕಕ್ಕೆ ಬಂದಿದ್ದರು. ಜರ್ಮನಿಯು ಉತ್ಪಾದನಾ ಹಬ್ ಆಗಿರುವ ತಂತ್ರಜ್ಞಾನದ ದೇಶ. ಅಂಥ ದೇಶದ ಚಾನ್ಸೆಲರ್ ಕರ್ನಾಟಕಕ್ಕೆ ಬಂದರೆ, ಇವರಲ್ಲಿ ಒಬ್ಬರು ಸಿಎಂ ಕುರ್ಚಿ ಉಳಿಸಿಕೊಳ್ಳಲು, ಇನ್ನೊಬ್ಬರು ಅದೇ ಕುರ್ಚಿ ಕಸಿದುಕೊಳ್ಳಲು ಹೋಗಿ ರಾಹುಲ್ ಗಾಂಧಿ ಜೊತೆ ನಿಂತುಕೊಂಡಿದ್ದಾರೆ. ಇದರಂದ ರಾಜ್ಯದ ಪರಿಸ್ಥಿತಿ ಏನಾಗಬೇಕು ಎಂದು ಕೇಳಿದರು.
ಇದೆಲ್ಲವನ್ನೂ ರಾಜ್ಯದ ಜನರು ಗಮನಿಸುತ್ತಿದ್ದಾರೆ. ಬರುವ ದಿನಗಳಲ್ಲಿ ಉತ್ತರ ನೀಡುತ್ತಾರೆ ಎಂದು ತಿಳಿಸಿದರು. ಕಾಂಗ್ರೆಸ್ಸಿನಲ್ಲಿ ಆಂತರಿಕ ಕಚ್ಚಾಟ ಇದೆ. ಒಬ್ಬರು ಕುರ್ಚಿ ಉಳಿಸಿಕೊಳ್ಳಲು ಕಾತುರದಲ್ಲಿದ್ದಾರೆ. ನನ್ನ ತಾಳ್ಮೆ ಕೆಣಕಬೇಡಿ; ನಾನು ಸಿಎಂ ಆಗಬೇಕೆಂದು ಉಳಿದವರು ರೆಡಿ ಆಗಿದ್ದಾರೆ ಎಂದರು.
ಮತ್ತೊಂದು ಪ್ರಶ್ನೆಗೆ ಉತ್ತರಿಸಿ, ಜನಾರ್ದನ ರೆಡ್ಡಿ, ಶ್ರೀರಾಮುಲು ಅವರಷ್ಟೇ ಅಲ್ಲ; ರಾಜ್ಯದ ಪ್ರಮುಖರ ಜೊತೆ ಚರ್ಚೆ ಮಾಡಿದಾಗ ನಾವೆಲ್ಲರೂ ಬಳ್ಳಾರಿ ಪಾದಯಾತ್ರೆ ಮಾಡುವುದು ಒಳ್ಳೆಯದು ಎಂಬ ಅಭಿಪ್ರಾಯ ಬಹುತೇಕ ಎಲ್ಲರದೂ ಆಗಿದೆ. ವರಿಷ್ಠರ ಜೊತೆ ಚರ್ಚಿಸಿ ತೀರ್ಮಾನಿಸಬೇಕಾಗಿದೆ ಎಂದು ನುಡಿದರು. ನಾನು ಈಗಾಗಲೇ ಈ ಕುರಿತು ಪಕ್ಷದ ದೆಹಲಿ ವರಿಷ್ಠರಿಗೆ ಮಾತನಾಡಿದ್ದೇನೆ. ಇವತ್ತು, ನಾಳೆಯೊಳಗೆ ಅದರ ಬಗ್ಗೆ ಸಂದೇಶವುಳ್ಳ ಮಾಹಿತಿ ಬರಲಿದೆ ಎಂದು ತಿಳಿಸಿದರು.



