ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣ ಸೇರಿ ತಾಲೂಕಿನ ಬಹುತೇಕ ಕಡೆ ಸೋಮವಾರ ಸಂಜೆ ಮತ್ತು ಮಂಗಳವಾರ ಬೆಳಿಗ್ಗೆ ಸುರಿದ ಅಬ್ಬರದ ಗಾಳಿ-ಮಳೆ ಅನೇಕ ಆವಾಂತರಗಳನ್ನು ಸೃಷ್ಟಿಸಿದೆ.
ಪಟ್ಟಣದಲ್ಲಿ ಚರಂಡಿಗಳು ತುಂಬಿ ರಸ್ತೆ ಮೇಲೆಯೇ ಹರಿದು ಅನೇಕ ಕಡೆ ಸಂಚಾರ ಅಸ್ತವ್ಯಸ್ಥಗೊಂಡಿತ್ತು.
ಕಟ್ಟಿದ್ದ ಚರಂಡಿ, ಲಂಡಿ ನಾಲಾವನ್ನು ಮಳೆಯಲ್ಲಿಯೇ ಪುರಸಭೆ ಪೌರ ಕಾರ್ಮಿಕರು ಸ್ವಚ್ಛಗೊಳಿಸಿದರು.
ತಾಲೂಕಿನ ಗೊಜನೂರ ಹತ್ತಿರದ ವರ್ತಿ ಹಳ್ಳ ಅತ್ಯಂತ ರಭಸವಾಗಿ ಹರಿಯುತ್ತಿದ್ದರಿಂದ 2 ಗಂಟೆಗಳ ಕಾಲ ಗದಗ-ಲಕ್ಷ್ಮೇಶ್ವರ ಸಂಪರ್ಕ ಕಲ್ಪಿಸುವ ಕೈಗಾ-ಇಳಕಲ್ ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತಗೊಂಡಿತ್ತು.

ಗದಗನಿಂದ ಲಕ್ಷ್ಮೇಶ್ವರದ ಕಡೆ-ಲಕ್ಷ್ಮೇಶ್ವರದಿಂದ ಗದಗ ಕಡೆಗೆ ಹೋಗಬೇಕಾದ ವಾಹನಗಳು ಹಳ್ಳದ ಎರಡೂ ಬದಿ 1 ಕಿ.ಮೀ ದೂರಕ್ಕೆ ಸಾಲುಗಟ್ಟಿ 1 ಗಂಟೆಗೂ ಹೆಚ್ಚು ಕಾಲ ರಸ್ತೆ ಮಧ್ಯದಲ್ಲಿಯೇ ನಿಂತ ಪರಿಣಾಮ ಸಾಕಷ್ಟು ಟ್ರಾಫಿಕ್ ಕಿರಿಕಿರಿಯುಂಟಾಯಿತು.
ಈ ವೇಳೆ ಗ್ರಾಮದ ಗ್ರಾ.ಪಂ ಮಾಜಿ ಸದಸ್ಯ ಶಿವರಾಜಗೌಡ ಪಾಟೀಲ ಪ್ರತಿವರ್ಷ ಮಳೆಗಾಲದಲ್ಲಿ ಈ ಸಮಸ್ಯೆ ತಪ್ಪದಂತಾಗಿದ್ದು, ಈ ಭಾಗದ ನೂತನ ಸಂಸದರು, ಶಾಸಕರು ಸೇತುವೆ ನಿರ್ಮಾಣಕ್ಕೆ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬಡ್ನಿ ಹತ್ತಿರದ ದೊಡ್ಡ ಹಳ್ಳದ ಸೇತುವೆ ಕೊಚ್ಚಿ ಹೋಗಿ ಲಕ್ಷ್ಮೇಶ್ವರ-ದೇವಿಹಾಳ ಸಂಪರ್ಕದ ರಸ್ತೆ ಸಂಪೂರ್ಣ ಸ್ಥಗಿತಗೊಂಡಿದ್ದು, ಈ ಭಾಗದ ಗ್ರಾಮಗಳ ಜನರು ಸುತ್ತುವರಿದು ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ತಾತ್ಕಾಲಿಕವಾಗಿ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಗ್ರಾಮದ ಸತೀಶಗೌಡ ಪಾಟೀಲ ಆಗ್ರಹಿಸಿದ್ದಾರೆ.
ಅಕ್ಕಿಗುಂದ, ಬಟ್ಟೂರ, ದೊಡ್ಡೂರ ಮಾರ್ಗದ ಹಳ್ಳಗಳು ಅಪಾಯದ ಮಟ್ಟ ಮೀರಿ ಹರಿದಿವೆ. ಬರಗಾಲದಿಂದ ಕಂಗೆಟ್ಟಿದ್ದ ಜನಸಮುದಾಯಕ್ಕೆ ಈ ಮಳೆ ಕೊಂಚ ನೆಮ್ಮದಿ ತಂದಿದ್ದರೂ, ಕೆಲವೆಡೆ ಮಳೆಯ ರುದ್ರ ನರ್ತನದಿಂದ ಬೆಚ್ಚಿ ಬೀಳುವಂತಾಗಿದೆ.

ಕೆರೆ, ಕೃಷಿಹೊಂಡ ತುಂಬಿದ್ದು ಹಳ್ಳ, ಬಾಂದಾರ ನದಿಯಂತೆ ಭೋರ್ಗರೆದಿವೆ. ಮಳೆರಾಯನ ಆಗಮನಕ್ಕಾಗಿ ಕಾಯುತ್ತಿದ್ದ ರೈತರು ಜಮೀನುಗಳನ್ನೆಲ್ಲ ಹದಗೊಳಿಸಿದ್ದ ಕೆಲವೇ ರೈತರು ಬಿತ್ತನೆ ಮಾಡಿದ್ದು, ಬಿತ್ತನೆಗೆ ಸಕಾಲವಾಗಿದ್ದರಿಂದ ಬಹುತೇಕ ರೈತರು ಒಂದು ವಾರದ ಕಾಲ ಮಳೆ ಬಿಡುವಿಗೆ ಮೊರೆ ಹೋಗುವಂತಾಗಿದೆ.
ಆದರೆ ಹವಾಮಾನ ಇಲಾಖೆ ಇನ್ನೂ ಒಂದು ವಾರ ಕಾಲ ಮುಂಗಾರು ಚುರುಕುಗೊಳ್ಳಲಿದೆ ಎಂಬ ಮಾಹಿತಿ ರೈತರನ್ನು ಚಿಂತೆಗೀಡು ಮಾಡಿದೆ.
ಯತ್ನಳ್ಳಿ- ಮಾಡಳ್ಳಿ ಸಂಪರ್ಕ ಕಲ್ಪಿಸುವ ಮಾರ್ಗದ ಹಳ್ಳ ಅಪಾರ ಸೆಳವಿನಿಂದ ಸೋಮವಾರ ರಾತ್ರಿಯಿಂದಲೇ ಸಂಪರ್ಕ ಕಡಿತಗೊಂಡು ಎರಡೂ ಗ್ರಾಮದ ಜನರು ಆಯಾ ಊರಲ್ಲಿಯೇ ಆಶ್ರಯ ಪಡೆಯುವಂತಾಗಿತ್ತು. ಪ್ರತಿ ವರ್ಷದ ಮಳೆಗಾಲದಲ್ಲಾಗುವ ಸಮಸ್ಯೆ ತಪ್ಪಿಸಲು ಹಳ್ಳಕ್ಕೆ ಸೇತುವೆ ನಿರ್ಮಿಸಬೇಕು ಎಂದು ಗ್ರಾಮದ ಡಿ.ಬಿ. ಡೊಳ್ಳಿನ, ಶೇಖರಗೌಡ ಪಾಟೀಲ ಆಗ್ರಹಿಸಿದ್ದಾರೆ.


