ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ನಾದಸ್ವರ, ನಾಟಿವೈದ್ಯ, ಕ್ಷೌರಿಕ ಸೇರಿದಂತೆ ಹತ್ತು ಹಲವಾರು ವೃತ್ತಿಗಳ ಮೂಲಕ ಸೇವಾಭಾವನೆಯಿಂದ ಸೇವೆಗೈಯುವ ಸವಿತಾ ಸಮಾಜದ ಕಾರ್ಯಸಾಧನೆ ಶ್ಲಾಘನೀಯವಾಗಿದ್ದು, ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಉಕ್ತಿಯನ್ನು ಅಕ್ಷರಶಃ ಸವಿತಾ ಸಮಾಜದವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ ಎಂದು ಕರ್ನಾಟಕ ಮಾಧ್ಯಮಿಕ ಪ್ರೌಡಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಎಂ.ಕೆ. ಲಮಾಣಿ ಹೇಳಿದರು.
ಮಂಗಳವಾರ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಜರುಗಿದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ದೇವದೇವತೆಗಳ ಆಯುಷ್ಕರ್ಮವನ್ನು ಮಾಡುತ್ತಿದ್ದ ಕ್ಷೌರಿಕ ಸಮಾಜದ ಮೂಲ ಪುರುಷ ಸವಿತಾ ಮಹಿರ್ಷಿ ಬ್ರಹ್ಮಜ್ಞಾನ ಸಂಪಾದನೆ ಜೊತೆಗೆ ಸಾಮವೇದದ ಹರಿಕಾರರಾಗಿದ್ದರು. ಅಂತಹ ಪುಣ್ಯಪರುಷರ ಜಯಂತಿ ಕಾರ್ಯಕ್ರಮವನ್ನು ಸರ್ಕಾರದ ಅಡಿಯಲ್ಲಿ ಮಾಡುತ್ತಿರುವದು ಅತ್ಯಂತ ಸ್ತುತ್ಯಾರ್ಹ. ವೇದಗಳಲ್ಲಿ ಸವಿತಾ ಮಹರ್ಷಿಯನ್ನು ಸಾಮವೇದದ ಸೃಷ್ಟಿಕರ್ತ ಎಂದು ಕರೆಯುತ್ತಿದ್ದು, ಅಂತಹ ಮಹಾನ್ ಋಷಿಮುನಿಗಳ ಜಯಂತಿಯನ್ನು ರಥಸಪ್ತಮಿ ದಿನದಂದು ಸರ್ಕಾರದ ವತಿಯಿಂದ ಆಚರಿಸಲು ಮುಂದಾಗಿರುವುದು ಶ್ಲಾಘನೀಯ ಎಂದರು.
ಸವಿತಾ ಸಮಾಜದ ತಾಲೂಕಾ ಘಟಕ ಅಧ್ಯಕ್ಷ ನಾಗರಾಜ ಆರೆಪಲ್ಲಿ ಮಾತನಾಡಿ, ಸವಿತಾ ಎಂದರೆ ಜನ್ಮ ನೀಡಿದಾತ. ಗಾಯತ್ರಿ ಮಾತೆಯ ನಾಮದೊಂದಿಗೆ ಸವಿತಾ ಮಹರ್ಷಿ ಉನ್ನತ ಸ್ಥಾನವನ್ನು ಕಾಣಬಹುದು. ಬ್ರಹ್ಮಜ್ಞಾನವನ್ನು ಹೊಂದಿರುವ ಸವಿತಾ ಮಹರ್ಷಿ ಶಿವನ ಬಲಗಣ್ಣಿನ ಮೂಲಕ ಜನ್ಮತಾಳಿದಾತ ಎಂಬುದನ್ನು ಪುರಾಣಗಳಿಂದ ತಿಳಿಯಬಹುದು. ಅಂತಹ ಮಹಾನ್ ದಾರ್ಶನಿಕರ ಜೀವನ ಸಾಧನೆಯನ್ನು ಅರ್ಥ ಮಾಡಿಕೊಂಡು ಅವರ ತತ್ವಾದರ್ಶಗಳನ್ನು ನಾವೆಲ್ಲರೂ ಅರಿತುಕೊಳ್ಳಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಸವಿತಾ ಸಮಾಜದ ಹಿರಿಯರಾದ ಸುಶೀಲಮ್ಮ ಆರೆಪಲ್ಲಿ ಹಾಗೂ ಪದ್ಮಾವತಿ ಬಾರ್ಬರ ಅವರನ್ನು ಸನ್ಮಾನಿಸಿ ಸತ್ಕರಿಸಲಾಯಿತು.
ವೆಂಕಟೇಶ ಅರೆಪಲ್ಲಿ, ನಾರಾಯಣ ಅರೆಪಲ್ಲಿ, ಲಕ್ಷ್ಮಣ ಬಾರ್ಬರ್, ಬಾಲರಾಜ ಕಲವರಾಲ, ಕರ್ನಾಟಕ ಪ್ರಜಾಪರ ವೇದಿಕೆ ತಾಲೂಕಾ ಘಟಕ ಅಧ್ಯಕ್ಷ ಹಸನ್ ತಹಸೀಲ್ದಾರ್, ಅಶೋಕ ವರವಿ, ಪ್ರಕಾಶ ಬಾರ್ಬರ, ಶ್ರೀಕಾಂತ ಬಾರ್ಬರ್, ಬಾಬಾಜಾನ ಕೋಳಿವಾಡ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು
ಪ್ರಸ್ತುತ ದಿನಮಾನದಲ್ಲಿ ಸವಿತಾ ಸಮಾಜ ಅತ್ಯಂತ ಹಿಂದುಳಿದ ಸಮಾಜವಾಗಿದ್ದು, ಸಮಾಜದ ಹಾಗೂ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರ ಅಗತ್ಯ ಕ್ರಮ ತೆಗೆದುಕೊಂಡು ಪ್ಯಾಕೇಜ್ ಘೋಷಣೆ ಮಾಡಬೇಕು. ಕ್ಷೌರಿಕ ಕುಟುಂಬ ಅತ್ಯಂತ ದಯನೀಯ ಸ್ಥಿತಿಯಲ್ಲಿ ಜೀವನ ನಿರ್ವಹಣೆ ಮಾಡುತ್ತಿದ್ದು, ಕಾರ್ಮಿಕರಿಗೆ ನೀಡುವ ಸೌಲಭ್ಯ ಹಾಗೂ ಸವಲತ್ತುಗಳನ್ನು ನೀಡಬೇಕು ಎಂದು ತಾಲೂಕಾ ಘಟಕ ಅಧ್ಯಕ್ಷ ನಾಗರಾಜ ಆರೆಪಲ್ಲಿ ಒತ್ತಾಯಿಸಿದರು.