ಧರ್ಮಾಚರಣೆಯಿಲ್ಲದ ಮನುಷ್ಯನ ವ್ಯಕ್ತಿತ್ವಕ್ಕೆ ಬೆಲೆಯಿಲ್ಲ

0
oplus_2
Spread the love

ವಿಜಯಸಾಕ್ಷಿ ಸುದ್ದಿ, ಮುಂಡರಗಿ: ಬದುಕು ಬದಲಾಗಬೇಕಾದರೆ ಬದುಕುವ ದಾರಿ ಬದಲಾಗಬೇಕು. ಸಂಸ್ಕಾರ ಮತ್ತು ಸಂಸ್ಕೃತಿ ಎಂಬ ಬೀಜ ಬಿತ್ತಿ ಜೀವನದಲ್ಲಿ ಸತ್ಫಲಗಳನ್ನು ಪಡೆದುಕೊಳ್ಳಬೇಕು. ಶಾಂತಿ-ನೆಮ್ಮದಿಯ ಬದುಕಿಗೆ ಮತ್ತು ಬದುಕು ಬಲಗೊಳ್ಳಲು ಆಧ್ಯಾತ್ಮಿಕ ಚಿಂತನಗಳು ಅವಶ್ಯಕವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

Advertisement

ಅವರು ಗುರುವಾರ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಜರುಗಿದ ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಹೊರಗಿನ ಮಾಲಿನ್ಯ ಕಳೆಯಲು ಹೊರಟ ಮನುಷ್ಯ ತನ್ನ ಅಂತರಂಗದಲ್ಲಿಯೇ ಕತ್ತಲೆ ತುಂಬಿಕೊಂಡಿದ್ದಾನೆ. ಗೊತ್ತು-ಗುರಿಗಳಿಲ್ಲದೆ ಮನುಷ್ಯನ ಬದುಕು ತತ್ತರಿಸುತ್ತಿದೆ. ಉನ್ನತ ಗುರಿ ಮತ್ತು ಧ್ಯೇಯ ವ್ಯಕ್ತಿತ್ವ ವಿಕಾಸಕ್ಕೆ ದಾರಿದೀಪ. ಧರ್ಮಾಚರಣೆ ಇಲ್ಲದ ಮನುಷ್ಯನ ವ್ಯಕ್ತಿತ್ವಕ್ಕೆ ಬೆಲೆ, ನೆಲೆ ಸಿಗುವುದಿಲ್ಲ. ವ್ಯಕ್ತಿ ಸಂಪತ್ತು ಸಂಪಾದಿಸದಿದ್ದರೂ ಪರವಾಗಿಲ್ಲ. ಆದರೆ ಸದ್ಗುಣಗಳನ್ನು ಬೆಳೆಸಿಕೊಂಡು ಬಾಳುವುದನ್ನು ಕಲಿಯಬೇಕು. ಯುವ ಜನಾಂಗ ಈ ರಾಷ್ಟçದ ಅಮೂಲ್ಯ ಸಂಪÀತ್ತು ಮತ್ತು ಆಸ್ತಿ. ಆಲಸ್ಯ ಮತ್ತು ದುರ್ವ್ಯಸನಗಳಿಂದ ದೂರವಾಗಿ ಸದೃಢ ಸಶಕ್ತ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡರೆ ಅದ್ಭುತ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಕಲಕೇರಿ ಗ್ರಾಮದಲ್ಲಿ ಹುಟ್ಟಿ ಬೆಳೆದು ಧರ್ಮ ಸಂಸ್ಕೃತಿ ಆದರ್ಶಗಳನ್ನು ಅನುಸರಿಸಿ ಬಾಳುತ್ತಿರುವ ಮಾಜಿ ಸಚಿವ ಎಸ್.ಎಸ್. ಪಾಟೀಲ ಮತ್ತು ಅವರ ಚಿರಂಜೀವಿ ಶಿವಕುಮಾರಗೌಡ ಪಾಟೀಲರ ಈ ಸತ್ಕಾರ್ಯ ನಾಡಿನ ಜನರ ಮನದಲ್ಲಿ ಅಚ್ಚಳಿಯದ ಪ್ರಭಾವ ಬೀರುವುದೆಂದು ಹರುಷ ವ್ಯಕ್ತ ಪಡಿಸಿದರು.

ಸಮ್ಮುಖ ವಹಿಸಿದ್ದ ವಿರೂಪಾಪುರ ಕಲಕೇರಿ ಮುದುಕೇಶ್ವರ ಶಿವಾಚಾರ್ಯರು ಮಾತನಾಡಿ, ತಾಳ್ಮೆ ಮತ್ತು ಸಹನೆಯ ಗುಣ ಮನುಷ್ಯನಲ್ಲಿ ಇಲ್ಲದಿರುವುದೇ ಇಂದಿನ ಅಶಾಂತಿಗೆ ಕಾರಣ ಬದುಕಿನ ಬೆಂಗಾಡು ಸಮೃದ್ಧಗೊಳ್ಳಲು ಗುರು ಮತ್ತು ದೇವರ ಕೃಪೆ ಅವಶ್ಯಕವೆಂದರು.

ನುಡಿ ನೈವೇದ್ಯ ಸಲ್ಲಿಸಿದ ಹಂಪಸಾಗರದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯರು, ಅಧ್ಯಕ್ಷತೆ ವಹಿಸಿದ ಮಾಜಿ ಸಚಿವ ಎಸ್.ಎಸ್. ಪಾಟೀಲ, ನ್ಯಾಯವಾದಿಗಳಾದ ವೀರೇಶ ಕೂಗು ಮಾತನಾಡಿದರು. ಸಮಾರಂಭದಲ್ಲಿ ಬಂಕಾಪುರ ರೇವಣಸಿದ್ಧೇಶ್ವರ ಶಿವಾಚಾರ್ಯರು, ಹಿರೇವಡ್ಡಟ್ಟಿ ವೀರೇಶ್ವರ ಶಿವಾಚಾರ್ಯರು, ಬನ್ನಿಕೊಪ್ಪದ ಡಾ. ಸುಜ್ಞಾನದೇವ ಶಿವಾಚಾರ್ಯರು, ಸೂಡಿ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು, ಸಿದ್ಧರಬೆಟ್ಟ-ಅಬ್ಬಿಗೇರಿ ವೀರಭದ್ರ ಶಿವಾಚಾರ್ಯರು, ಮಾನೆಹಳ್ಳಿ ಮಳಿಯೋಗೇಶ್ವರ ಶಿವಾಚಾರ್ಯರು, ಹರಪನಹಳ್ಳಿ ವರಸದ್ಯೋಜಾತ ಶಿವಾಚಾರ್ಯರು, ಶಾಸಕ ಡಾ.ಚಂದ್ರು ಲಮಾಣಿ ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರು ರಕ್ಷೆ ಸ್ವೀಕರಿಸಿದರು.

ಸಮಾರಂಭದ ಸಮ್ಮುಖವನ್ನು ವಿರುಪಾಪುರ ಕಲಕೇರಿ ಮುದುಕೇಶ್ವರ ಶಿವಾಚಾರ್ಯ ಸ್ವಾಮಿಗಳು ವಹಿಸಿದ್ದರು. ಶಿವಕುಮಾರಗೌಡ ಎಸ್.ಪಾಟೀಲ ಸ್ವಾಗತಿಸಿದರು. ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.

ಸಮಾರಂಭ ಉದ್ಘಾಟಿಸಿದ ಕ.ಸಾ.ಪ. ಮಾಜಿ ಅಧ್ಯಕ್ಷ ಮನು ಬಳಿಗಾರ ಮಾತನಾಡಿ, ಚಿತೆ ನಿರ್ಜೀವ ವಸ್ತುಗಳನ್ನು ಸುಡುತ್ತದೆ. ಚಿಂತೆ ಸಜೀವ ವಸ್ತುಗಳನ್ನು ನಾಶಗೊಳಿಸುತ್ತದೆ. ಚಿಂತೆ ಚಿಂತನೆಗೊಳಗಾದಾಗ ಬದುಕು ಸಾರ್ಥಕಗೊಳ್ಳುತ್ತದೆ. ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರು ಮತ್ತು ಬಸವಣ್ಣನವರು ಸಮಾಜದ ಎರಡು ಕಣ್ಣು. ಅಧರ್ಮದ ಕವಚ ಹೊತ್ತ ವಿಚಾರಗಳು ಬಹಳ ಕಾಲ ಉಳಿಯುವುದಿಲ್ಲ. ಸತ್ಯ-ಧರ್ಮ ಉಳಿಯಬೇಕು ಮತ್ತು ಬೆಳೆಯಬೇಕೆಂದರು.


Spread the love

LEAVE A REPLY

Please enter your comment!
Please enter your name here