ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಐಪಿಎಲ್ 11ನೇ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ RCB, 20 ಓವರ್‌ಗಳಲ್ಲಿ 250 ರನ್‌ಗಳ ಭಾರೀ ಮೊತ್ತ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸಿಎಸ್ಕೆ 19.4 ಓವರ್‌ಗಳಲ್ಲಿ 207 ರನ್‌ಗಳಿಗೆ ಸೀಮಿತಗೊಂಡು 43 ರನ್‌ಗಳಿಂದ ಸೋಲನುಭವಿಸಿತು.
ಗೆಲುವಿನ ಬಳಿಕ ಮಾತನಾಡಿದ RCB ನಾಯಕ ರಜತ್ ಪಾಟಿದಾರ್, ತಂಡದ ಸಾಂಘಿಕ ಪ್ರದರ್ಶನವನ್ನು ಶ್ಲಾಘಿಸಿದರು. ಆರಂಭದಲ್ಲಿ ಪಿಚ್ ನಿಧಾನವಾಗಿತ್ತು. ಆದರೆ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಉತ್ತಮ ಆರಂಭ ನೀಡಿದರು. ಅವರ ಬ್ಯಾಟಿಂಗ್ ಅದ್ಭುತವಾಗಿತ್ತು ಎಂದು ಹೇಳಿದರು.
13ನೇ ಓವರ್ ನಂತರ ಆಟದ ವೇಗ ಹೆಚ್ಚಿಸಿದ ಬಗ್ಗೆ ಮಾತನಾಡಿದ ಅವರು, ಬೌಲರ್‌ಗಳ ಮೇಲೆ ಒತ್ತಡ ಹೇರುವುದು ನಮ್ಮ ಯೋಜನೆ ಆಗಿತ್ತು. ಅದನ್ನು ನಾನು ಮತ್ತು ಟಿಮ್ ಡೇವಿಡ್ ಯಶಸ್ವಿಯಾಗಿ ಜಾರಿಗೊಳಿಸಿದ್ದೇವೆ ಎಂದರು.
ಟಿಮ್ ಡೇವಿಡ್ ವಿಶ್ವದ ಅತ್ಯುತ್ತಮ ಫಿನಿಷರ್‌ಗಳಲ್ಲಿ ಒಬ್ಬರು. ಅವರು ಹೊಡೆದ 106 ಮೀಟರ್ ಸಿಕ್ಸರ್ ಅದ್ಭುತ. ನಾನು ನಾನ್-ಸ್ಟ್ರೈಕರ್ ಎಂಡ್‌ನಿಂದ ಅದನ್ನು ಆನಂದಿಸಿದೆ. ಅವರ ಸ್ಥಿರ ಪ್ರದರ್ಶನ ತಂಡಕ್ಕೆ ದೊಡ್ಡ ಬಲ ಎಂದು ಪಾಟಿದಾರ್ ಮೆಚ್ಚುಗೆ ವ್ಯಕ್ತಪಡಿಸಿದರು.



