ನೋವಿನ ಸೆಳಕಿನಲ್ಲಿಯೇ ಒಸರುವ ಅದಮ್ಯ ಜೀವನ ಪ್ರೀತಿ. ಬಡತನದ ಬದುಕಿನಲ್ಲಿ ದೊರೆತ ಶ್ರೀಮಂತ ಅನುಭವಗಳ ಬುತ್ತಿ. ಬದುಕಿನ ಬಂಡಿಯ ಸಾಗಿಸಿ ತುತ್ತಿನ ಚೀಲವ ತುಂಬಿಸಲು ಮಾಡಿದ ಹತ್ತು ಹಲವು ಕೆಲಸಗಳು ಹೊಟ್ಟೆ ತುಂಬಿಸಿದ್ದಕ್ಕಿಂತ ತಲೆಯಲ್ಲಿ ಬದುಕಿನ ವೈವಿಧ್ಯಮಯ ಆಯಾಮಗಳ ವಿವಿಧ ವಿಚಾರಗಳನ್ನು ಭಾವಕೋಶದಲ್ಲಿ ತುಂಬಿಸಿಕೊಂಡವರು. ಸಾಹಿತ್ಯದ ಭಂಡಾರವನ್ನು ಓದಿ ಹೊಸ ವಿಷಯಗಳನ್ನು ಅರಿತು ಕಥೆ, ಕವನಗಳ ರಚನೆಗೆ ಹಾದಿಯನ್ನು ತೋರಿ ಮಸ್ತಕವನ್ನು ತುಂಬಿದ್ದ ಹತ್ತು ಹಲವು ವಿಷಯ ವೈವಿಧ್ಯಗಳು…
ಬರೆದಿದ್ದಕ್ಕಿಂತ ಬರೆಸಿದ್ದೇ ಹೆಚ್ಚು ಎಂಬಂತೆ ಪ್ರೋತ್ಸಾಹಿಸುವ ವ್ಯಕ್ತಿತ್ವ, ಜೀವ ಭಾವಗಳ ತಂತಿಯನ್ನು ನುರಿತ ವೈಣಿಕನಂತೆ ಮಿಡಿದು ಜನರಿಗೆ ಸಾಹಿತ್ಯ ಸುಧೆಯನ್ನು ತುಂಬಿಕೊಟ್ಟವರು, ಸಾಹಿತ್ಯ ಪ್ರಕಾಶನ ಸಂಸ್ಥೆಯನ್ನು ಕಟ್ಟಿ, ಎಲ್ಲರ ಅಕ್ಕರೆಯ ಸಕ್ಕರೆಯ ಬಯಲ ಬೆಳಕಿನ ಸಾಹಿತಿ, ಅಕ್ಕಡಿ ಸಾಲಿನ ಕವಿ ಎಂದೇ ಖ್ಯಾತರಾಗಿರುವ ಕಥೆಗಾರ, ಅಂಕಣ ಬರಹಗಾರ, ಪ್ರಕಾಶನಕಾರ, ಸಂಪಾದಕ, ಉಪನ್ಯಾಸಕ ಹೀಗೆ ಹತ್ತು ಹಲವು ಉಪಾದಿಗಳನ್ನು ತಮ್ಮ ಸಾಹಿತ್ಯ ಸೇವೆಯ ಕಿರೀಟದ ಗರಿಗೆ ಸೇರಿಸಿಕೊಂಡವರು ಎ.ಎಸ್. ಮಕಾನದಾರ.
ಮಾನವೀಯ ಸೂಕ್ಷ್ಮ ಸಂವೇದನೆಗಳನ್ನು ಹೊಂದಿದ, ಬದುಕಿನ ಕುರಿತು ಭವ್ಯವಾದ ಕನಸುಗಳನ್ನು ಹೊತ್ತು ಪ್ರೀತಿ-ಪ್ರೇಮ, ಜೀವ-ಭಾವಗಳ ಶುದ್ಧ ಅಂತಃಕರಣವನ್ನು ಓದುಗ ದೊರೆಗಳಿಗೆ ಕಲ್ಪಿಸಿಕೊಟ್ಟ, ತಾನು ಬಡತನವನ್ನು ಉಂಡರೂ ಅದರ ಬೇಗೆಯನ್ನು ತೋರದೆ ಸಾಹಿತ್ಯದ ಮೂಲಕ ಮೃಷ್ಟಾನ್ನದ ಸವಿಯನ್ನು ಉಣ ಬಡಿಸಿದವರು ಮಕಾನದಾರ.
ಗಜೇಂದ್ರಗಡದ ರಾಯಬಾಗಿ ಸಹೋದರರು ಮತ್ತು ಚಾವಡಿಮನೆ ಅವರ ಫ್ಯಾಕ್ಟರಿಯಲ್ಲಿ ಸೀರೆಗೆ ನೂಲು ಹಚ್ಚುವ, ನೂಲಿಗೆ ಬಣ್ಣ ಹಾಕುವ, ಕಂಡಕಿ ಮಾಡುವ ವೈಪಣಿ ಮಾಡುವ ಸೀರೆಯನ್ನು ಘಳಿಗೆ ಮಾಡಿ ಮಡಚುವ ಕೆಲಸಗಳನ್ನು ಕಲಿಯುತ್ತಾ ಮಾಡುತ್ತಾ ತಮ್ಮ ಬದುಕಿನ ಬವಣೆಯ ಹತ್ತು ಹಲವು ಚಿತ್ತಾರಗಳ ಒಂದೊಂದಾಗಿ ಜೋಡಿಸಿ ನಯವಾಗಿ ಹೊಂದಿಸಿ ಸುಂದರವಾಗಿ ನೇಯುತ್ತಾ ಚಂದದ ಬದುಕನ್ನು ಘಳಿಗೆ ಮಾಡಿ ಕಟ್ಟಿಕೊಂಡು ಸದ್ದಿಲ್ಲದ ಸಾಧನೆಯ ಮೂಲಕ, ತಮ್ಮ ಸಾಧನೆ ಅಂದ ಚಂದವನ್ನು ಜಗತ್ತಿಗೆ ಉಣ ಬಡಿಸುತ್ತಿರುವ ಮಕಾನದಾರರ ಜೀವನ ಪ್ರೀತಿ ಅಪಾರ.
ಹೀಗೆ ಬದುಕು ತನ್ನತ್ತ ಎಸೆದ ಎಲ್ಲ ಮೊನಚು ಬಾಣಗಳನ್ನು ಆಯ್ದು ತಮ್ಮ ಬತ್ತಳಿಕೆಯಲ್ಲಿ ಇರಿಸಿಕೊಂಡು ಬದುಕಿನ ವೈವಿಧ್ಯಮಯ ಅನುಭವಗಳು ಕಟ್ಟಿಕೊಟ್ಟ ಎಂದೂ ಮುಗಿಯದ ಬುತ್ತಿಯನ್ನು ಕಥೆ, ಕವನ, ಲೇಖನಗಳ ಮೂಲಕ ಸುಂದರವಾದ ಸಾಹಿತ್ಯವಾಗಿಸಿ ಅದರ ರಸದೌತಣವನ್ನು ಸಾಹಿತ್ಯಾಸಕ್ತರಿಗೆ ಉಣಬಡಿಸಿದ್ದಾರೆ. ತಮ್ಮ ಬದುಕಿನ ಗಾಢ ಅನುಭವದ ಸಾರವನ್ನು ವೈವಿಧ್ಯಮಯ ಸಾಹಿತ್ಯಕ ಹಿನ್ನೆಲೆಗಳಲ್ಲಿ ಒದಗಿಸಿರುವ ಮಕಾನದಾರರು ಮಾನವೀಯ ಮೌಲ್ಯಗಳನ್ನು ಬಿತ್ತುವ, ಮೃದು ಮತ್ತು ಮಿತ ಭಾಷಿಯಾದ ಭರವಸೆಯ ಬರಹಗಾರರಾಗಿ ರೂಪುಗೊಂಡರು.
ಇವರು ತಮ್ಮ ಶಿಕ್ಷಕರಾದ ಕೆ.ಎಸ್. ಗಾರವಾಡ ಹಿರೇಮಠ ಅವರ ಮಾರ್ಗದರ್ಶನದಲ್ಲಿ ಉದ್ಯೋಗ ವಿನಿಮಯ ಕಚೇರಿಯಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಸಿದರು. ಮುಂದೆ ಕಾಲೇಜು ವಿದ್ಯಾಭ್ಯಾಸವನ್ನು ಪೂರೈಸಿದ ನಂತರ ಪ್ರತಿ ನೌಕರಿಯ ಸಂದರ್ಶನಕ್ಕೆ ಹೋಗಲು ಹಾಸ್ಟೆಲ್‌ನ ಅಡುಗೆಯವರಾಗಿದ್ದ ಎನ್.ಎಸ್. ಪಾಟೀಲ ಎತ್ತಿನ ಗುಡ್ಡ, ಸಹೋದರಿ ಸ್ವರೂಪ ರೇಣುಕಾ ಮಾದಗುಂಡಿ ಮತ್ತು ಇನ್ನೋರ್ವ ಹಿರಿಯ ಸ್ನೇಹಿತ ಉಡಚಪ್ಪ ಆರ್.ಚನ್ನಮ್ಮನವರ್ ಸಹಾಯ, ಮಾರ್ಗದರ್ಶನಗಳನ್ನು ಮರೆಯಲು ಸಾಧ್ಯವಿಲ್ಲ ಎಂದು ನೆನೆಯುತ್ತಾರೆ.
ಹದಿಮೂರು ಸ್ವತಂತ್ರ ಕೃತಿಗಳನ್ನು ಇಪ್ಪತ್ತೆರಡು ಸಂಪಾದಿತ ಕೃತಿಗಳನ್ನು ರಚಿಸಿರುವ ಮಕಾನದಾರರು ಪ್ರೀತಿ ಪ್ರೇಮ, ಭಗ್ನತೆ, ವಿರಹ ತಾಯಿ, ಬಡತನಗಳ ಕುರಿತು ರಚಿಸಿರುವ ಹಲವಾರು ಕವನಗಳು ಸಹೃದಯರ ಮನಸ್ಸನ್ನು ಸೆಳೆದಿದೆ. ಭಗ್ನ ಪ್ರೇಮವನ್ನು ಹೀಗೂ ವರ್ಣಿಸಬಹುದೇ ಎಂಬ ಭಾವವನ್ನು ಮೂಡಿಸಿವೆ. ತನ್ನೊಳಗಿನ ನೋವನ್ನು ಹಸಿರಾಗಿಸುವ ಪುಟ್ಟ ಹನಿಗವಿತೆಗಳನ್ನು ನೇಯ್ದಿರುವ ಕವಿಯ ಜಾಣ್ಮೆಯನ್ನು ಎಷ್ಟು ಹೊಗಳಿದರೂ ಸಾಲದು.
ಎದೆಯ ಸುಡುವ ನೆನಪುಗಳು, ಸಖೀ ಸಖ, ಕೆಳಗಲ ಮನಿ ಮಾಬವ್ವ ಮತ್ತು ಇತರ ಕವಿತೆಗಳು, ಒಂದು ಮೌನದ ಬೀಜ, ಅಕ್ಕಡಿ ಸಾಲು, ಮೂರು ದಶಕದ ಕಾವ್ಯ, ಪ್ಯಾರಿ ಪದ್ಯ, ದರ್ವೇಶಿ ಪದ್ಯ, ಉಸಿರ ಗಂಧ ಸೋಕಿ ಇವುಗಳು ಮಕಾನದಾರರ ಕಾವ್ಯ ಸಂಕಲನಗಳಾಗಿವೆ.
ಬೆಳಕಿನ ಹಾಡು, ಸೌಹಾರ್ದ ಸಂಗಮ, ಬೊಗಸೆ ತುಂಬಾ ಬಯಲು, ಕತ್ತಲೂರಿನ ಬೆಳಕು (ರಾಜ್ಯಮಟ್ಟದ ಪ್ರಾತಿನಿಧಿಕ ಕಥಾ ಸಂಕಲನಗಳು), ಅಲಿಯವರ ಮಕ್ಕಳ ನೀತಿ ಕಥೆಗಳು ಸಂಪಾದಿತ ಕೃತಿಗಳಾಗಿವೆ. ಮನುಷ್ಯ ಪ್ರೇಮ ಕದ ತೆರೆಯುವ ಹೊತ್ತಿಗೆ ( ವಿಮರ್ಶೆ), ಸೂಫಿ ಸಾಹಿತ್ಯ (ಅಭಿನಂದನಾ ಗ್ರಂಥ)ಗಳನ್ನು ಕೂಡ ಸಂಪಾದಿಸಿದ್ದಾರೆ.
ನಿರಂತರ ಪ್ರಕಾಶನವನ್ನು ಆರಂಭಿಸಿರುವ ಮಕಾನದಾರರು ಯುವ ಬರಹಗಾರರ ಪುಸ್ತಕಗಳನ್ನು ಪ್ರಕಟಿಸಿ ಪ್ರೋತ್ಸಾಹಿಸಿದ್ದಾರೆ. ಮಕಾನದಾರ ಸಾಹಿತ್ಯ ಪ್ರತಿಷ್ಠಾನವನ್ನು ಸ್ಥಾಪಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಗುರುತಿಸಿ ಸನ್ಮಾನಿಸಿದ್ದಾರೆ. ವಿಶೇಷವಾಗಿ ಸೂಫಿ ಸಂತರ ಕುರಿತ ಹಲವಾರು ಉಪನ್ಯಾಸಗಳನ್ನು ಮಾಡಿರುವ ಮಕಾನದಾರ ಅವರು ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ಸಂಕ್ರಮಣ ಪ್ರಶಸ್ತಿ, ಜಿಲ್ಲಾ ಸರ್ವೋತ್ತಮ ಪ್ರಶಸ್ತಿ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯಮಟ್ಟದ ಅಣಿಮಾನಂದ ಸದ್ಭಾವನ ಸಾಹಿತ್ಯ ಪ್ರಶಸ್ತಿ, ಸಂತ ಶಿಶುನಾಳ ಭಾವೈಕ್ಯತಾ ಪುರಸ್ಕಾರ, ಕರುನಾಡ ಸಿರಿ ರಾಷ್ಟ್ರೀಯ ಯುವ ಸಂಸ್ಕೃತಿ ಅಕಾಡೆಮಿ ಪುರಸ್ಕಾರ, ವೀರರಾಣಿ ಕಿತ್ತೂರು ಚೆನ್ನಮ್ಮ ಪ್ರಶಸ್ತಿ, ಸುವರ್ಣ ಕರ್ನಾಟಕ ಪ್ರಶಸ್ತಿ, ಕರುನಾಡ ಪದ್ಮಶ್ರೀ ಮುಂತಾದ ಪ್ರಶಸ್ತಿಗಳು ಇವರ ಮಡಿಲನ್ನು ಸೇರಿವೆ.
ಸಾಮಾಜಿಕ ಸೇವೆಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಮಕಾನದಾರರು ಕಳೆದ ಏಳು ತಿಂಗಳಿಂದ ಪ್ರತಿ ವಾರ ಹಲವು ಜನರಿಗೆ ಊಟದ ಕಿಟ್‌ಗಳನ್ನು ನ್ಯಾಯವಾದಿ ಎಸ್.ಕೆ. ನದಾಫ್, ಎಂ.ಜಿ. ಮುಲ್ಲಾ, ಧರ್ಮ ಗುರುಗಳಾದ ರಫೀಕ್ ಮೌಲಾನ ರಾಜೇಸಾಬ್ ಅಣ್ಣಿಗೇರಿ ಮತ್ತು ಮಕ್ತುಮ್ ಜೋಹರಂ ಅವರ ಮಾರ್ಗದರ್ಶನ, ಸಹಕಾರದೊಂದಿಗೆ ನಿರಂತರವಾಗಿ ವಿತರಿಸುವ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ.
ಇದೀಗ ಅತ್ಯುತ್ತಮವಾಗಿ ಕರ್ತವ್ಯವನ್ನು ನಿರ್ವಹಿಸಿರುವ ರಾಜ್ಯ ಸರಕಾರಿ ನೌಕರರಿಗೆ ನೀಡುವ 2023ನೇ ಸಾಲಿನ ರಾಜ್ಯಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಯು ಮಕಾನದಾರರಿಗೆ ಲಭಿಸಿದ್ದು ಅರ್ಹತೆಗೆ ಸಂದ ಗೌರವವಾಗಿದೆ. ಅವರ ಸಾಹಿತ್ಯಕ ಮತ್ತು ವೈಯುಕ್ತಿಕ ಸಾಧನೆಗಳು ಹೀಗೆ ನಿತ್ಯ ನಿರಂತರವಾಗಿ ನಡೆಯುತ್ತಿರಲಿ ಎಂದು ಹಾರೈಸುವ…
– ವೀಣಾ ಹೇಮಂತ್‌ಗೌಡ ಪಾಟೀಲ್,
ಮುಂಡರಗಿ.
ಬದುಕಿನ ಬವಣೆಗಳ ಒಟ್ಟು ಮೊತ್ತವನ್ನು ಅನುಭವಿಸುತ್ತಲೇ ಸುಂದರವಾದ ಸಾಹಿತ್ಯಕ ಬದುಕನ್ನು ಕಟ್ಟಿಕೊಂಡವರು ಮಕಾನದಾರರು. ಬದುಕಿನಲ್ಲಿ ಆದರ್ಶಗಳನ್ನು ಇಟ್ಟುಕೊಂಡು ಹೊಸ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಸಾಹಿತ್ಯ ಸೃಷ್ಟಿಸಿದ ಮಕಾನದಾರರು. ಹಲವಾರು ಒತ್ತಡಗಳ ನಡುವೆಯೂ ಮೌಲ್ಯಗಳೊಂದಿಗೆ ರಾಜಿಯಾಗದೆ ತಮ್ಮತನವನ್ನು ಬಿಟ್ಟುಕೊಡದೆ ಸೃಜನಶೀಲ ವ್ಯಕ್ತಿತ್ವವನ್ನು ಹಾಸಿ ಹೊದ್ದುಕೊಂಡವರು. ಮಕಾನದಾರರು ಕೇವಲ ತಾವು ಮಾತ್ರ ಬೆಳೆಯಲಿಲ್ಲ, ತಮ್ಮ ಸುತ್ತ ಇರುವವರನ್ನು ಪ್ರೋತ್ಸಾಹಿಸಿ ಬೆನ್ನು ತಟ್ಟಿ ಬರೆಸಿ ಬೆಳೆಸಿದರು. ಅವರ ಲೇಖನಗಳನ್ನು ಪ್ರಕಾಶನ ಸಂಸ್ಥೆಯ ಮೂಲಕ ಹೊರ ತಂದರು.