ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆ ಸೋಮವಾರ ಮಧ್ಯಾಹ್ನ ಜೋರಾದ ಗಾಳಿ, ಗುಡುಗು-ಸಿಡಿಲಬ್ಬರದೊಂದಿಗೆ ಅರ್ಧ ಗಂಟೆ ಸುರಿದ ಮಳೆ ಇಳೆಯನ್ನು ತಂಪಾಗಿಸಿತು.
ಕಳೆದೊಂದು ವಾರದಿಂದ ಆಗಾಗ ಮುಂಗಾರು ಪೂರ್ವದ ಮಳೆ ಬರುತ್ತಿರುವುದು ರೈತರಲ್ಲಿ ಭರವಸೆ ಮೂಡಿಸಿದ್ದರೂ, ನೀರಾವರಿಯಲ್ಲಿ ಶೇಂಗಾ ಬೆಳೆದು ಒಕ್ಕಲಿ ಮಾಡುತ್ತಿರುವ ರೈತರಿಗೆ ಕೊಂಚ ಅಡಚಣೆ ಮಾಡಿದೆ. ಇನ್ನು ಆಲಿಕಲ್ಲು ಮಳೆಯಾಗುತ್ತಿರುವುದರಿಂದ ವೀಳ್ಯದೆಲೆ, ಹೂವು, ಮಾವು ಇತ್ಯಾದಿ ಬೆಳೆಹಾನಿಗೆ ಕಾರಣವಾಗುತ್ತಿದೆ. ಗಾಳಿ, ಗುಡುಗು, ಸಿಡಿಲಬ್ಬರದಿಂದ ಮರ, ಕಂಬ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಳ್ಳುವುದು, ಮೊದಲೇ ಸಂಪೂರ್ಣ ತಗ್ಗು-ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಸಂಚಾರಕ್ಕೆ ಸಂಚಕಾರ ತಂದೊಡ್ಡುತ್ತಿದೆ. ತ್ಯಾಜ್ಯದಿಂದ ತುಂಬಿರುವ ಚರಂಡಿಗಳ ಸ್ವಚ್ಛತೆಗೆ ಈ ಮಳೆ ಮುನ್ಸೂಚನೆ ನೀಡುತ್ತಿದ್ದು, ಪುರಸಭೆಯವರು ಕಾರ್ಯಪ್ರವೃತ್ತರಾಗಬೇಕಿದೆ.
ಮಾಗಿ ಉಳುಮೆಗೆ ಮತ್ತು ಕೆರೆ-ಕಟ್ಟೆಗಳಲ್ಲಿ ನೀರಿಲ್ಲದೇ ಜಾನುವಾರುಗಳು, ಕುರಿ-ಮೇಕೆಗಳು ನೀರಿಗಾಗಿ ಪರಿತಪಿಸುವ ಪರಿಸ್ಥಿತಿಯಿದ್ದು, ಇನ್ನೂ ತುಸು ದೊಡ್ಡ ಮಳೆಯಾದರೆ ಅನಕೂಲವಾಗುತ್ತದೆ ಎಂಬುದು ರೈತರ ಅಭಿಪ್ರಾಯ.