ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರು ಅರೆಸ್ಟ್ ಆಗಿ ಎರಡು ತಿಂಗಳು ಕಳೆಯುತ್ತಾ ಬಂದಿದೆ. ಇಲ್ಲಿಯವರೆಗೆ ಅವರನ್ನು ಹೊರಗೆ ಕರೆತರೋಕೆ ಸಾಧ್ಯವಾಗಿಲ್ಲ. ಈ ಪ್ರಕರಣದಲ್ಲಿ ಪೊಲೀಸರು ಚಾರ್ಜ್ಶೀಟ್ ಸಲ್ಲಿಕೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ ದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ಮಲ್ಲಿ ಎಂಬ ಅರ್ಚಕ ನಟ ದರ್ಶನ್ ಪೋಟೊ ಇಟ್ಟು ಪೂಜೆ ಮಾಡಿದ್ದಾರೆ. ಪೂಜೆ ಮಾಡಿ ಮಂಗಳಾರತಿ ಎತ್ತಿದ್ದಾರೆ.
ಆದರೀಗ ದೇವಸ್ಥಾನದ ಸಂಪ್ರದಾಯಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಕ್ಕೆ ಅರ್ಚಕ ಸ್ಥಾನದಿಂದ ಅಮಾನತು ಆಗಿದ್ದಾರೆ. ಅರ್ಚಕ ಮಲ್ಲಿ ದೇವಸ್ಥಾನದ ರೂಢಿ ಸಂಪ್ರದಾಯಕ್ಕೆ ಧಕ್ಕೆ ಹಾಗೂ ಕರ್ತವ್ಯ ನಿರ್ಲಕ್ಷ್ಯದ ಹಿನ್ನೆಲೆ ಅಮಾನತು ಆಗಿದ್ದಾರೆ. ಧಾರ್ಮಿಕ ದತ್ತಿ ಇಲಾಖೆ ಕಾರ್ಯ ನಿರ್ವಾಹಕ ಅಧಿಕಾರಿ ಹನುಮಂತಪ್ಪರವರು ಅರ್ಚಕನನ್ನು ಅಮಾನತು ಮಾಡಿದ್ದಾರೆ. ಅಲ್ಲದೇ ವಿಚಾರಣೆ ಮುಗಿಯೋವರೆಗೂ ದೇವಸ್ಥಾನಕ್ಕೆ ಬಾರದಂತೆ ನಿಷೇಧ ಹೇರಿದ್ದಾರೆ ಎನ್ನಲಾಗಿದೆ.