ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಾಮಾನ್ಯ ಜನರ ಅಸಾಮಾನ್ಯ ಕೆಲಸಗಳನ್ನು ದೇಶದ ಜನರಿಗೆ ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ತಿಳಿಸಿ ಜನರೊಡಗೂಡಿ ಜನರಿಂದಲೇ ಸಮೃದ್ಧ ದೇಶವನ್ನು ಕಟ್ಟುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡುತ್ತಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ತಾಲೂಕಿನ ಸೂರಣಗಿ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ಜಿಲ್ಲಾ ರೈತ ಮೋರ್ಚಾದ ವತಿಯಿಂದ ಏರ್ಪಡಿಸಿದ್ದ ಪ್ರಧಾನ ಮಂತ್ರಿಗಳ ಮನ್ ಕಿ ಬಾತ್ ವೀಕ್ಷಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರು ಜನರ ಜೊತೆಗೆ ನೇರ ಸಂಪರ್ಕ ಇಟ್ಟುಕೊಂಡು ಇಡೀ ದೇಶದಲ್ಲಿ ಆಗುತ್ತಿರುವ ಒಳ್ಳೆಯ ಕೆಲಸಗಳ ಬಗ್ಗೆ ದೇಶಕ್ಕೆ ತಿಳಿಸಿ ಅವುಗಳಿಂದ ಪ್ರೇರಣೆ ಪಡೆಯಲು ಈ ಕಾರ್ಯಕ್ರಮ ನಡೆಸುತ್ತಿದ್ದಾರೆ. ದೇಶದ ಯಾವುದೇ ಮೂಲೆಯಲ್ಲಿ ಸಾಮಾನ್ಯರು ಮಾಡಿರುವ ಅಸಾಮಾನ್ಯ ಸಾಧನೆಗಳನ್ನು ಹೇಳುತ್ತಾರೆ. ದುಬೈನಲ್ಲಿ ಕನ್ನಡ ಶಾಲೆ ತೆರೆದಿರುವುದು, ಮಣಿಪುರದಲ್ಲಿ ಸೋಲಾರ್ ಬಳಕೆ ಮೂಲಕ ವಿದ್ಯುತ್ ಸಂಪರ್ಕ ಪಡೆದು ವಿದ್ಯೆ ಪಡೆದಿರುವುದು, ದಲ್ಲಾಳಿಗಳನ್ನು ದೂರ ಮಾಡಿ ರೈತರೇ ರೈತ ಉತ್ಪಾದಕ ಕಂಪನಿಗಳನ್ನು ತೆರೆದಿರುವುದು ಇತ್ಯಾದಿಗಳೊಂದಿಗೆ ಹೆಣ್ಣು ಮಕ್ಕಳ ಸಾಧನೆ, ರೈತರ ಸಾಧನೆಗಳನ್ನು ಮನ್‌ಕಿ ಬಾತ್‌ನಲ್ಲಿ ಹೇಳುವ ಮೂಲಕ ಸ್ಫೂರ್ತಿದಾಯಕ ಕೆಲಸ ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಡಾ. ಚಂದ್ರು ಲಮಾಣಿ, ಶಿರಹಟ್ಟಿ ಮಂಡಲದ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಬಸವರಾಜ ಕುಂದಗೋಳಮಠ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಬಸವರಾಜ ಇಟಗಿ, ತಿಮ್ಮರಡ್ಡಿ ಮರಡ್ಡಿ, ಸಣ್ಣೀರಪ್ಪ ಹಳ್ಳೆಪ್ಪನವರ, ನಾಗರಾಜ ಕುಲಕರ್ಣಿ, ಶಿವಪ್ರಕಾಶ ಮಹಾಜನಶೆಟ್ಟರ, ತಿಪ್ಪಣ್ಣ ಕೊಂಚಿಗೇರಿ, ಜಾನು ಲಮಾಣಿ, ಥಾವರಪ್ಪ ಲಮಾಣಿ, ಅಶ್ವಿನಿ ಅಂಕಲಕೋಟಿ, ಗಂಗಾಧರ ಮೆಣಸಿನಕಾಯಿ, ವಿಜಯ ಕುಂಬಾರ, ನವೀನ ಹಿರೇಮಠ, ಅಶೋಕ ಸೂರಣಗಿ, ಕುಮಾರ ಬೆಟಗೇರಿ, ಸಚಿನ ಮೆಲ್ಮುರಿ, ಈರಣ್ಣ ಶಿರನಹಳ್ಳಿ, ಫಕ್ಕೀರೇಶ ರಗಟಿ, ದ್ಯಾಮಣ್ಣ ನೀರಲಗಿ, ಮಲ್ಲಪ್ಪ ಮಠಪತಿ ಸೇರಿದಂತೆ ಗ್ರಾಮಸ್ಥರು, ಪ್ರಮುಖರು ಉಪಸ್ಥಿತರಿದ್ದರು.
ಬೆಳೆ ಪರಿಹಾರ ನೀಡುವಲ್ಲಿ ಮಧ್ಯವರ್ತಿಗಳು ಗೋಲ್‌ಮಾಲ್ ಮಾಡಿದ್ದಾರೆ. ಅದರ ಬಗ್ಗೆ ತನಿಖೆ ಮಾಡಲು ಹೇಳಿದ್ದೇನೆ. ನಾನು ಮುಖ್ಯಮಂತ್ರಿ ಇದ್ದಾಗ ಕೇಂದ್ರ ಸರ್ಕಾರ ನೀಡುವ ಪರಿಹಾರದ ಎರಡು ಪಟ್ಟು ಪರಿಹಾರ ನೀಡಿದ್ದೆ. ಒಣ ಬೇಸಾಯಕ್ಕೆ ನಾನು 12500 ರೂ. ಕೊಟ್ಟಿದ್ದೆ. ನೀರಾವರಿಗೆ 25 ಸಾವಿರ, ತೋಟಗಾರಿಕೆಗೆ 28 ಸಾವಿರ ರೂ. ಪರಿಹಾರ ನೀಡಿದ್ದೆ. ರೈತರ ಪರ ಸರ್ಕಾರ ಇದ್ದರೆ ಪರಿಹಾರ ಸಿಗುತ್ತದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.



