ವಿಜಯಸಾಕ್ಷಿ ಸುದ್ದಿ, ಗದಗ: ಪ್ರವಾದಿ ಹಜರತ್ ಮುಹಮ್ಮದ ಪೈಗಂಬರರ ಜಯಂತಿ ಈದ್ ಮಿಲಾದ್ ಕೇವಲ ಧಾರ್ಮಿಕ ಆಚರಣೆಯಲ್ಲ. ಮಾನವೀಯ ಮೌಲ್ಯಗಳ ನೆನಪಿನ ದಿನವಾಗಿದೆ. ಪ್ರವಾದಿಯವರ ಜೀವನವು ನ್ಯಾಯ, ಶಾಂತಿ, ಸಮಾನತೆ ಮತ್ತು ಸೇವೆಯ ಸಂಕೇತವಾಗಿದೆ. ಹಾಗಾಗಿ ಪ್ರವಾದಿ ಮುಹಮ್ಮದ ಪೈಗಂಬರರ ಜೀವನ ಮತ್ತು ಶಾಂತಿಯ ಸಂದೇಶವು ನಮಗೆ ಪ್ರೇರಣೆಯಾಗಿದೆ ಎಂದು ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ ಆರ್.ಮಾನ್ವಿ ಹೇಳಿದರು.
ಅವರು ಪ್ರವಾದಿ ಹಜರತ್ ಮುಹಮ್ಮದ ಪೈಗಂಬರರ ಜಯಂತಿ ನಿಮಿತ್ತ ಬೆಟಗೇರಿಯ ಮಂಜು ಶಿಕ್ಷಣ ಸಂಸ್ಥೆಯಲ್ಲಿ ವಿಶೇಷ ಚೇತನ ಮಕ್ಕಳಿಗೆ ಹಣ್ಣು-ಹಂಪಲು ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಹಾಗೂ ಮಾನವೀಯತೆಯನ್ನು ಆಚರಣೆಯಲ್ಲಿ ತರುವ ತತ್ವ-ಸಿದ್ಧಾಂತಗಳನ್ನು ಪ್ರತಿಪಾದಿಸಿದ್ದಾರೆ. ಪ್ರವಾದಿಯವರ ಶಾಂತಿ ಸಂದೇಶವನ್ನು ಸಾರಿದ ಅವರ ನೈಜ ಇತಿಹಾಸವನ್ನು ಅರಿಯದ ಕೆಲ ಜಾತಿವಾದಿಗಳು, ಮಾನವ ವಿರೋಧಿಗಳು ಇಂತಹ ಶಾಂತಿ ದೂತರನ್ನು ಅಗೌರವಿಸುತ್ತಿರುವುದು ಖಂಡನೀಯವಾಗಿದೆ. ಇವರು ಕೇವಲ ಒಂದು ಜಾತಿಗೆ ಸೀಮಿತವಾಗದೇ ಜಗತ್ತಿನ ಎಲ್ಲಾ ಜಾತಿ ಮತ್ತು ಧರ್ಮೀಯರ ಮಾನವೀಯ ಮೌಲ್ಯಗಳ ಮತ್ತು ಅವರ ಹಕ್ಕುಗಳಿಗಾಗಿ ಹೋರಾಟದ ನಡೆಸಿದವರು. ಪ್ರವಾದಿಯವರ ಶಾಂತಿಯ ಸಂದೇಶಗಳನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ನಮ್ಮ ಮುಂದಿನ ಜೀವನ ನಡೆಸಿದರೆ ನಮ್ಮ ಬದುಕು ಸುಗಮವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಂಜು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಂಕರಸಿಂಗ ರಜಪೂತ ಗುರುಗಳು, ಸ್ಲಂ ಸಮಿತಿ ಉಪಾಧ್ಯಕ್ಷ ಅಶೋಕ ಕುಡತಿನ್ನಿ, ಕಾರ್ಯದರ್ಶಿ ಅಶೋಕ ಕುಸಬಿ, ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಮುಖಂಡರಾದ ಮೌಲಾಸಾಬ ಗಚ್ಚಿ, ಮೆಹಬೂಬಸಾಬ ಬಳ್ಳಾರಿ, ಶರಣಪ್ಪ ಸೂಡಿ, ಸಲೀಂ ಹರಿಹರ, ಖಾಜಾಸಾಬ ಇಸ್ಮಾಯಿಲನವರ, ಎಂ.ಎಂ. ಶೇಖ, ರಿಜ್ವಾನ ಮುಲ್ಲಾ, ಗುಲಪರಿ ಮಾನ್ವಿ, ನಜೀರಅಹ್ಮದ ಹಾವಗಾರ, ಜಂದಿಸಾಬ ಢಾಲಾಯತ ಹಾಗೂ ಸಮಿತಿಯ ಮುಖಂಡರು ಉಪಸ್ಥಿತರಿದ್ದರು.
ಇಂದಿನ ಸಮಾಜದಲ್ಲಿ ನಾವು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು ಪ್ರವಾದಿಯವರ ಸಂದೇಶಗಳು ನಮಗೆ ಶಾಶ್ವತ ಮಾರ್ಗದರ್ಶನವಾಗಿದೆ. ಇಂದಿನ ಸಮಾಜದಲ್ಲಿ ದ್ವೇಷ, ಅಸಹಿಷ್ಣುತೆ ಮತ್ತು ಅಸಮಾನತೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರವಾದಿ ಹಜರತ್ ಮುಹ್ಮದ ಪೈಗಂಬರರ ಶಾಂತಿಯ ಸಂದೇಶಗಳು ಎಲ್ಲರಿಗೂ ಮಹತ್ವದ ಪ್ರೇರಣೆಯಾಗಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣದ ಹಕ್ಕು, ವಾರಸುದಾರಿತ್ವದಲ್ಲಿ ಪಾಲು ಮತ್ತು ಮಾನವೀಯ ಗೌರವಕ್ಕಾಗಿ ಪ್ರವಾದಿಯವರು ತಮ್ಮ ಇಡೀ ಜೀವವನ್ನು ತ್ಯಾಗ ಮಾಡಿದ್ದಾರೆ ಎಂದು ಇಮ್ತಿಯಾಜ ಆರ್.ಮಾನ್ವಿ ತಿಳಿಸಿದರು.