ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಹರಪನಹಳ್ಳಿ ತಾಲೂಕಿನ ಬಾಗಳಿ ಗ್ರಾಮದಲ್ಲಿ 2 ಸಾವಿರಕ್ಕೂ ಅಧಿಕ ಮನೆಗಳಿದ್ದು, 3 ವಾರ್ಡ್ಗಳನ್ನು ಹೊಂದಿದೆ. ಎಲ್ಲಾ ಕುಟುಂಬಗಳ ದಿನನಿತ್ಯದ ಬಳಕೆಗೆ ಅಗತ್ಯವಿದ್ದಷ್ಟು ನೀರಿದ್ದರೂ ಸಮರ್ಪಕವಾದ ನಿರ್ವಹಣೆಯಿಲ್ಲದೆ ಗ್ರಾಮದಲ್ಲಿ ನೀರಿನ ಅಭಾವ ಹೆಚ್ಚಿದೆ.
ನಿರಂತರವಾಗಿ ಸುರಿದ ಮಳೆಯಿಂದ ಗ್ರಾಮಕ್ಕೆ ಸರಬರಾಜು ಆಗುವ ಕುಡಿಯುವ ನೀರಿನ ಪೈಪ್‌ಗಳ ಮೇಲೆ ದ್ವಿಚಕ್ರ ವಾಹನಗಳು ಮತ್ತು ಟ್ರ್ಯಾಕ್ಟರ್‌ಗಳಂತಹ ವಾಹನಗಳು ಸಂಚರಿಸಿದ್ದರಿಂದ ಕೆಲವು ಕಡೆ ಪೈಪ್ ಲೈನ್ ಒಡೆದಿದ್ದರೆ, ಕೆಲವು ಕಡೆ ಹಲವಾರು ವರ್ಷಗಳಿಂದ ಹಳೆಯ ತುಕ್ಕು ಹಿಡಿದ ಪೈಪ್‌ಗಳನ್ನು ಹಾಕಿರುವುದರಿಂದ ತುಂಡಾಗಿ ನೀರು ಪೋಲಾಗುತ್ತಿದೆ. ಸಂಬಂಧಿಸಿದ ವಾರ್ಡಿನ ಸಾರ್ವಜನಿಕರು ಗ್ರಾಮ ಪಂಚಾಯಿತಿಗೆ ಕಳೆದ ನಾಲ್ಕೈದು ತಿಂಗಳುಗಳಿಂದ ಹಲವಾರು ಬಾರಿ ಮನವಿ ನೀಡಿದ್ದರೂ ಅವ್ಯವಸ್ಥೆ ಮಾತ್ರ ಹಾಗೆಯೇ ಇದೆ.
ಕಳೆದ ತಿಂಗಳು ನಡೆದ ಗ್ರಾಮ ಸಭೆಯಲ್ಲಿ ಇದರ ಬಗ್ಗೆ ಪಿಡಿಓ, ಅಧ್ಯಕ್ಷರು ಮತ್ತು ಸದಸ್ಯರು ಚರ್ಚಿಸಿ ಗ್ರಾಮದಲ್ಲಿ ಪ್ರತಿ 3 ವಾರ್ಡ್ಗೆ ಒಬ್ಬರಂತೆ 3 ಜನ ನೀರುಗಂಟಿಗಳನ್ನು ನೇಮಕ ಮಾಡಲಾಗಿದೆ. ಇವರಿಗೆ ಒಡೆದಿರುವ ಪೈಪ್‌ಲೈನ್ ದುರಸ್ತಿ ಮಾಡುವಂತೆ ನಿರ್ದೇಶನ ನೀಡಿದ್ದರೂ, ಯಾರ ಮಾತಿಗೂ ಕವಡೆ ಕಾಸಿನ ಕಿಮ್ಮತ್ತು ನೀಡದೆ ಕಾಲಹರಣ ಮಾಡುತ್ತಿದ್ದಾರೆಯೇ ಹೊರತು ಯಾವ ಕೆಲಸವೂ ಆಗುತ್ತಿಲ್ಲ. ಪ್ರಶ್ನಿಸಹೋದರೆ ಸಾರ್ವಜನಿಕರ ಮೇಲೆಯೇ ದರ್ಪ ತೋರಿಸುತ್ತಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದ ಮಂಡಿ ದುರುಗಮ್ಮ ದೇವಸ್ಥಾನದ ಹಿಂಭಾಗದ ವಾಲ್ ಮತ್ತು ಶೃಂಗಾರತೋಟಕ್ಕೆ ಹೋಗುವ ಮುಖ್ಯ ರಸ್ತೆ, ಕೆರೆಯ ಕೋಡಿಯ ಮೇಲುಗಡೆ, ಪಶು ಆಸ್ಪತ್ರೆಯ ಮುಂಭಾಗ, ಚೌಡಮ್ಮ ದೇವಸ್ಥಾನದ ಸಮೀಪ ಹಾಗೂ ಕಲ್ಲೇಶ್ವರ ದೇವಸ್ಥಾನಕ್ಕೆ ಸಾಗುವ ದಾರಿಯಲ್ಲಿ ನೀರಿನ ಪೈಪ್‌ಗಳು ಒಡೆದು ಅದರಲ್ಲಿ ಶುದ್ಧ ನೀರಿನೊಂದಿಗೆ ಮಳೆಯ ನೀರು ಮತ್ತು ರಸ್ತೆಯ ಮೇಲಿನ ಕಲುಷಿತ ನೀರು ಮಿಶ್ರಣವಾಗಿ ಗ್ರಾಮಸ್ಥರು ಚರ್ಮ ರೋಗ, ವಾಂತಿ-ಭೇದಿ ಹಾಗೂ ಜ್ವರದಿಂದ ಬಳಲುವಂತಾಗಿದೆ.
ನಿತ್ಯ ಕಲುಷಿತ ನೀರು ಸೇವನೆಯಿಂದ ಹಿರಿಯರಿಗೆ, ಮಕ್ಕಳಿಗೆ ಮತ್ತು ಬಾಣಂತಿಯರಿಗೆ ತೊಂದರೆಯಾಗುತ್ತಿದ್ದು, ನೀರುಗಂಟಿಗಳು ನಿರ್ಲಕ್ಷ್ಯತನ ಬಿಟ್ಟು ಕೆಲಸ ಮಾಡಬೇಕು. ಇಲ್ಲವಾದರೆ ಅವರನ್ನು ಕೆಲಸದಿಂದ ತೆಗೆದುಹಾಕಿ ಬೇರೆಯವರನ್ನು ಕೂಡಲೇ ನೇಮಕ ಮಾಡಿಕೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಚ್. ಚಂದ್ರಶೇಖರ್ ಈ ಬಗ್ಗೆ ಪ್ರತಿಕ್ರಿಯಿಸಿ, ಗ್ರಾಮದಲ್ಲಿ ಆಗಿರುವ ಸಮಸ್ಯೆಯನ್ನು ಆದಷ್ಟು ಬೇಗ ಸರಿಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವೆ ಎಂದಿದ್ದಾರೆ.