ವಿಜಯಸಾಕ್ಷಿ ಸುದ್ದಿ, ರೋಣ : ರೋಣ ಪಟ್ಟಣದ ಮುಖ್ಯ ವೃತ್ತಗಳಲ್ಲಿ `ಥರ್ಡ್ ಐ’ ಸಿಸಿ ಟಿವಿ ಕ್ಯಾಮರಗಾಳನ್ನು ಅಳವಡಿಸಿದ್ದು, ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ರಾಜ್ಯ ಖನಿಜ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಸೋಮವಾರ ಪಟ್ಟಣದ ಪಿಡಬ್ಲುಡಿ ಪ್ರವಾಸಿ ಮಂದಿರದ ಬಳಿ `ಥರ್ಡ್ ಐ’ ಸಿಸಿ ಟಿವಿ ಕ್ಯಾಮರಾ ಅಳವಡಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದ್ವಿಚಕ್ರ ವಾಹನ ಸವಾರರು ತಮ್ಮ ಹಾಗೂ ಕುಟುಂಬದ ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಬೇಕು. ಕಾರ್‌ನಲ್ಲಿ ಪ್ರಯಾಣಿಸುವವರು ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ಇದರಿಂದ ಅಪಘಾತ ಸಂಖ್ಯೆಗಳು ಕಡಿಮೆಯಾಗುವುದಲ್ಲದೆ, ನಿಮ್ಮನ್ನೇ ನಂಬಿಕೊಂಡಿರುವ ಕುಟುಂಬ ನೆಮ್ಮದಿಯಾಗಿರುತ್ತವೆ ಎಂದ ಶಾಸಕರು, ಕ್ಯಾಮರಾ ಅಳವಡಿಕೆಗೆ 10 ಲಕ್ಷ ರೂ. ಅನುದಾನ ಒದಗಿಸಲಾಗಿದೆ ಎಂದರು.
ಎಸ್ಪಿ ಬಿ.ಎಸ್. ನೇಮಗೌಡ ಮಾತನಾಡಿ, `ಥರ್ಡ್ ಐ’ ಅಳವಡಿಕೆಯಾದಾಗಿನಿಂದ ಶೇ.80ರಷ್ಟು ಅಪಘಾತ ಸಂಖ್ಯೆಗಳು ಇಳಿಮುಖವಾಗಿದೆ. ಈ ಕಾರ್ಯದಿಂದ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವವರನ್ನು ಶೀಘ್ರ ಪತ್ತೆ ಹಚ್ಚಬಹುದು. ಮುಖ್ಯವಾಗಿ ನ್ಯಾಯಾಲಯವು `ಥರ್ಡ್ ಐ’ ಸೆರೆಹಿಡಿದ ಚಿತ್ರಗಳನ್ನು ಮಾನ್ಯ ಮಾಡುತ್ತದೆ. ಹೀಗಾಗಿ ನಾಗರಿಕರು ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಬೇಕು ಎಂದರು.
ಸಂಗನಗೌಡ ಪಾಟೀಲ, ಸಿಪಿಐ ಎಸ್.ಎಸ್. ಬಿಳಗಿ, ಪಿಎಸ್‌ಐ ಎಲ್.ಕೆ. ಜೂಲಕಟ್ಟಿ, ಬಾವಾಸಾಬ ಬೆಟಗೇರಿ, ಸಂಗಪ್ಪ ಜಿಡ್ಡಿಬಾಗಿಲ, ಸಂಗು ನವಲಗುಂದ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.



