ಬೆಂಗಳೂರು: ಈ ಸರ್ಕಾರದಲ್ಲಿ ರೇಟ್ ಕಾರ್ಡ್ ಮೊದಲೇ ಫಿಕ್ಸ್ ಆಗಿ ಹೋಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಈ ಸರ್ಕಾರ ಪ್ರತಿಯೊಂದನ್ನು ಮಾರಾಟಕ್ಕೆ ಇಟ್ಟಿದೆ. ಪ್ರತಿಯೊಂದಕ್ಕೂ ಲೂಟಿ ಹೊಡೆದುಕೊಂಡು ಕೂತಿದ್ದಾರೆ. ಈ ಸರ್ಕಾರದಲ್ಲಿ ರೇಟ್ ಕಾರ್ಡ್ ಮೊದಲೇ ಫಿಕ್ಸ್ ಆಗಿ ಹೋಗಿದೆ. ನಾನು ಪ್ರಾರಂಭದಲ್ಲೇ ಈ ಸರ್ಕಾರದ ರೇಟ್ ಕಾರ್ಡ್ ಬಗ್ಗೆ ಹೇಳಿದ್ದೆ ಎಂದಿದ್ದಾರೆ.
ಇನ್ನೂ ನಾನು ಅಧಿಕಾರ ನಡೆಸಿದ್ದೇನೆ. ನಾನು ಹರಿಶ್ಚಂದ್ರ ಎಂದು ಎಲ್ಲೂ ಹೇಳಿಲ್ಲ. ವಿಧಾನಸಭೆಯಲ್ಲಿ ಹೇಳಿದ್ದೇನೆ. ಚುನಾವಣೆ ನಡೆಯಬೇಕಾದ್ರೆ ಇನ್ನೊಬ್ಬರ ಹತ್ರ ಕೈ ಚಾಚಲೇಬೇಕು. ಆದರೆ ನಾನು ಅಧಿಕಾರ ನಡೆಸುವಾಗ ಪ್ರತಿಯೊಂದು ಮಾರಾಟಕ್ಕೆ ಇಟ್ಟಿರಲಿಲ್ಲ ಎಂದು ಹೇಳಿದರು.
ಇದೇ ವೇಳೆ ವೈಕುಂಠ ಏಕಾದಶಿ ಶುಭಾಶಯ ಕೋರಿದ ಕುಮಾರಸ್ವಾಮಿ, ಇವತ್ತು ವೈಕುಂಠ ಏಕಾದಶಿ. ವೈಕುಂಠದ ಬಾಗಿಲು ತೆಗೆಯುತ್ತೆ ಅಂತ ಪ್ರತೀತಿ ಇದೆ. ದೇವರಲ್ಲಿ ಪ್ರಾರ್ಥನೆ ಮಾಡಿ ಒಳ್ಳೆದು ಮಾಡಲಿ ಕೊಡಪ್ಪ ಅಂತ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ. ಇವತ್ತು ಪವಿತ್ರವಾದ ದಿನ. ಅ ವಿಷ್ಣು ದೇಶ ಆಳುವವರಿಗೆ, ರಾಜ್ಯ ಆಳುವವರಿಗೆ ಎಲ್ಲರಿಗೂ ಸದ್ಬುದ್ದಿ ಕೊಟ್ಟು ಜನತೆಯ ಸಮಸ್ಯೆಗೆ ಒಳ್ಳೆಯ ಕೆಲಸ ಮಾಡುವ ವಾತಾವರಣ ನಿರ್ಮಾಣ ಮಾಡಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದರು.