ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ಅಂಗವೈಕಲ್ಯತೆಯುಳ್ಳವರಲ್ಲಿ ಶ್ರವಣ ನ್ಯೂನತೆ ಹೊಂದಿದವರು ಸಂವಹನ ಸಂಪರ್ಕದಿಂದಲೂ ದೂರ ಉಳಿಯುತ್ತಾರೆ ಎಂದು ಭಾರತೀಯ ಸನ್ನೆ ಭಾಷೆ ತಜ್ಞ ಜಿ.ದುರುಗೇಶ್ ತಿಳಿಸಿದರು.
ಪಟ್ಟಣದ ತಾಲೂಕು ಆಡಳಿತ ಕಚೇರಿಯಲ್ಲಿ ಗುರುವಾರ ತಾಲೂಕು ಡೆಫ್ ಅಸೋಸಿಯೇಷನ್ ವತಿಯಿಂದ ಶ್ರವಣ ನ್ಯೂನತೆ ಹೊಂದಿದವರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಬಿ.ವಿ. ಗಿರಿಶ್ ಬಾಬು ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ದೇಶದಲ್ಲಿ ಒಟ್ಟಾರೆ 21 ತೆರೆನಾದ ಅಂಗವಿಕಲರಿದ್ದಾರೆ. ತಾಲೂಕಿನಲ್ಲಿ 4412 ಜನರು ಅಂಗವೈಕಲ್ಯರಿದ್ದು, ಇದರಲ್ಲಿ ಸರ್ಕಾರಿ ಸೌಲಭ್ಯಗಳನ್ನು ಪಡೆಯುವ ಸಲುವಾಗಿ ಮಧ್ಯವರ್ತಿಗಳ ಹಾವಳಿಯಿಂದ ಸುಳ್ಳು ದಾಖಲೆಗಳನ್ನು ಪಡೆದು ನಿಜವಾದ ಫಲಾನುಭವಿಗಳಿಗೆ ಸಿಗಬೇಕಾದ ಸೌಲಭ್ಯಗಳನ್ನು ಕಸಿದುಕೊಳ್ಳುತ್ತಿದ್ದಾರೆ.
2016ರ ಕಾಯ್ದೆ ಅನ್ವಯ ಶೇ.40ಕ್ಕೂ ಅಧಿಕ ಅಂಗವೈಕಲ್ಯ ಉಳ್ಳವರಿಗೆ ಮಾತ್ರ ಯುಡಿಐಡಿ ಕಾರ್ಡ್ ನೀಡಬೇಕು. ಆದರೆ ಶೇ.60 ಜನರು ವಾಮಮಾರ್ಗದ ಮೂಲಕ ವೈದ್ಯರಿಂದ ಸುಳ್ಳು ಪ್ರಮಾಣ ಪತ್ರಗಳನ್ನು ಪಡೆದು ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಹುಟ್ಟಿನಿಂದ ಮಾತು ಬಾರದ, ಕಿವಿ ಕೇಳದೆ ಇರುವ ಅಂಗವಿಕಲರಿಗೆ ಇದುವರೆಗೆ 1400 ರೂಗಳಷ್ಟು ಮಾಸಾಶನ ನೀಡುತ್ತಿದ್ದು, ಅದರಿಂದ ಜೀವನ ನಿರ್ವಹಣೆಗೆ ತುಂಬಾ ತೊಂದರೆಯಾಗುತ್ತಿದೆ. ಆದ್ದರಿಂದ ಸರ್ಕಾರವು 5000 ರೂಗಳವರೆಗೆ ಮಾಸಾಶನ ನೀಡಬೇಕು.
ಅಂಗವಿಕಲರಿಗೆ ಸರ್ಕಾರಿ ಕಚೇರಿಗಳಲ್ಲಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ತೆಗೆದುಕೊಂಡು ಅವರ ಜೀವನ ನಿರ್ವಹಣೆಗೆ ಅನುಕೂಲ ಮಾಡಿಕೊಡಬೇಕು ಹಾಗೂ ಯಾವುದೇ ಕಚೇರಿಗೆ ಮೂಗರು, ಕಿವುಡರು ಹೋದಾಗ ಅಧಿಕಾರಿಗಳು ಗೌರವಯುತವಾಗಿ ಸ್ಪಂದಿಸಬೇಕು, ಅಧಿಕಾರಿಳು ಸನ್ನೆ ಭಾಷೆಯನ್ನು ಕಡ್ಡಾಯವಾಗಿ ಕಲಿಯಬೆಕು. ಇವರಿಗೆ ಸರ್ಕಾರದಿಂದ ಸೂಕ್ತ ನ್ಯಾಯ ದೊರಬೇಕು ಎಂದರು.
ಡೆಫ್ ಅಸೋಸಿಯೇಷನ್ ತಾಲೂಕಾಧ್ಯಕ್ಷ ಬಿ. ಸಂತೋಷ್, ನಾಗರಾಜ, ಕುಬೇರಾಚಾರಿ, ಮೆಹಬೂಬ್, ಗೋಣಿಬಸಪ್ಪ, ಕೊಟ್ರೇಶಪ್ಪ ಮುಂತಾದವರಿದ್ದರು.