ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ನಗರಸಭೆಯ 2ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿಗೆ ತಡೆಯಾಜ್ಞೆ ನೀಡಿದ್ದ ಹೈಕೋರ್ಟ್, ಸೆ.11ರಂದು ಪ್ರಕರಣವನ್ನು ಮತ್ತೊಮ್ಮೆ ಕೈಗೆತ್ತಿಕೊಳ್ಳಲಿದೆ.
ಸದ್ಯ ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಆದರೆ ಮೀಸಲಾತಿ ಘೋಷಣೆಯಲ್ಲಿ ರೋಸ್ಟರ್ ಪಾಲನೆಯಾಗಿಲ್ಲ ಎಂದು ಆರೋಪಿಸಿ 1ನೆ ವಾರ್ಡಿನ ಕಾಂಗ್ರೆಸ್ ಸದಸ್ಯೆ ಲಕ್ಷ್ಮಿ ಅನಿಲಕುಮಾರ ಸಿದ್ದಮ್ಮನಹಳ್ಳಿ ಹಾಗೂ 10ನೇ ವಾರ್ಡಿನ ಕಾಂಗ್ರೆಸ್ ಸದಸ್ಯ ಇಮ್ತಿಯಾಜ್ ಶಿರಹಟ್ಟಿ, 2024 ಆಗಸ್ಟ್ 31ರಂದು ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿದಾರರ ಮನವಿ ಪುರಸ್ಕರಿಸಿದ ಹೈಕೋರ್ಟ್, ಮುಂದಿನ ವಿಚಾರಣೆಯವರೆಗೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ತಡೆಯಾಜ್ಞೆ ಹೊರಡಿಸಿತ್ತು. ಸೆ.11ರಂದು ಮೀಸಲಾತಿ ವಿಷಯ ಹೈಕೋರ್ಟ್ ನಲ್ಲಿ ಮತ್ತೊಮ್ಮೆ ವಿಚಾರಣೆಗೆ ಬರಲಿದ್ದು, ಅವಳಿ ನಗರದಲ್ಲಿ ರಾಜಕೀಯ ಚರ್ಚೆ ಗರಿಗೆದರಿದೆ.
ಗದಗ-ಬೆಟಗೇರಿ ನಗರಸಭೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಹೊಂದಿದ್ದು, ಮೊದಲ ಅವಧಿಯನ್ನು ಯಶಸ್ವಿಯಾಗಿ ಪೂರೈಸಿದೆ. 2ನೇ ಅವಧಿಯಲ್ಲಿ ಬಿಜೆಪಿಗೆ ಅಧಿಕಾರ ಸಿಗಬಾರದು ಎನ್ನುವ ದುರುದ್ದೇಶದಿಂದ ಕಾಂಗ್ರೆಸ್ ನಾಯಕರು ವಿ.ಪ ಸದಸ್ಯ ಸಲೀಂ ಅಹ್ಮದ್ ಅವರನ್ನು ಗದಗ ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ಹುನ್ನಾರ ನಡೆಸಿದ್ದರು.
ಈ ಯೋಜನೆಯಲ್ಲಿ ಕಾಂಗ್ರೆಸ್ ಸದಸ್ಯರು ಸೋಲು ಕಾಣುತ್ತಲೇ ಹತಾಶರಾಗಿ ಮೀಸಲಾತಿಯನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು, ಬಿಜೆಪಿಗೆ ಸರಳವಾಗಿ ಅಧಿಕಾರ ಸಿಗಬಾರದು ಎನ್ನುವ ಕಾರಣಕ್ಕೆ ಕಾಂಗ್ರೆಸ್ ಸದಸ್ಯರು ಕೋರ್ಟ್ ಮೊರೆ ಹೋಗಿದ್ದಾರೆ ಎನ್ನಲಾಗಿದೆ.
ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಪ್ರಕಟಗೊಂಡ ನಂತರ ಆಕ್ಷೇಪಣೆಗೆ ಕಾಲಾವಕಾಶವಿತ್ತು. ಆದರೆ ಕಾಂಗ್ರೆಸ್ ಸದಸ್ಯರು, ಸರಕಾರ ನೀಡಿದ್ದ ಕಾಲಾವಕಾಶದ ಅವಧಿ ಮೀರಿದ ನಂತರ ಕೋರ್ಟ್ ಮೊರೆ ಹೋಗಿದ್ದಾರೆ. ಹೀಗಾಗಿ ಹೈಕೋರ್ಟ್ ಈ ಹಿಂದಿನ ಮೀಸಲಾತಿಯನ್ನೇ ಪುರಸ್ಕರಿಸುವ ವಿಶ್ವಾಸವಿದೆ ಎನ್ನುತ್ತಾರೆ ನಗರಸಭೆಯ ಮಾಜಿ ಅಧ್ಯಕ್ಷೆ ಉಷಾ ದಾಸರ.
ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹ್ಮದ್ ಹಾಗೂ ಎಸ್.ವಿ. ಸಂಕನೂರ ಅವರು ಗದಗ-ಬೆಟಗೇರಿ ಮತದಾರರ ಪಟ್ಟಿ ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದರು. ಆ ಮೂಲಕ ನಗರಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಲ್ಲಿ ಮತದಾನ ಮಾಡುವ ವಿಚಾರ ಹೊಂದಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಉಪವಿಭಾಗಾಧಿಕಾರಿಗಳು, ಕಲಬುರ್ಗಿ ಹೈಕೋರ್ಟ್ ಪೀಠ ಇದೇ ರೀತಿಯ ಪ್ರಕರಣದಲ್ಲಿ ನೀಡಿದ ತೀರ್ಪನ್ನು ಉಲ್ಲೇಖಿಸಿ, ಅರ್ಜಿಯನ್ನು ತಿರಸ್ಕರಿಸಿದ್ದರು.