ನೀತಿ ಕಥೆ-ಸಾಂಗತ್ಯದ ಫಲ

0
moral story
Spread the love

ಒಂದು ದಿನ ಓರ್ವ ರಾಜನು ತನ್ನ ಮಂತ್ರಿ ಮಾಗಧರೊಂದಿಗೆ ಬೇಟೆಯಾಡಲು ಕಾಡೊಂದನ್ನು ಹೊಕ್ಕನು.

Advertisement

ಚಿರತೆಯನ್ನು ಬೆನ್ನಟ್ಟಿದ ರಾಜ ತನ್ನ ಕುದುರೆಯ ಮೇಲೆ ಮುಂದೆ ಸಾಗಿ ಕಾಡಿನೊಳಗೆ ಬಲು ದೂರ ಹೋಗಿಬಿಟ್ಟನು. ದಣಿವು, ಆಯಾಸಗಳಿಂದ ಬಳಲಿದ ಮಹಾರಾಜನು ಮರವೊಂದರ ಕೆಳಗೆ ಕುಳಿತುಕೊಂಡನು. ಕೂಡಲೇ ಆ ಮರದ ಮೇಲಿದ್ದ ಗಿಳಿಯೊಂದು `ಎಲ್ಲರೂ ಬನ್ನಿ ಇಲ್ಲಿ… ಈ ಮನುಷ್ಯನ ಹತ್ತಿರ ಬಹಳ ಸಂಪತ್ತಿದೆ. ಈತನನ್ನು ಲೂಟಿ ಮಾಡಿ, ಹೊಡೆದು ಕಟ್ಟಿಹಾಕಿ’ ಎಂದು ಜೋರು ಜೋರಾಗಿ ಅರಚಲಾರಂಭಿಸಿತು.

ತುಸು ಆಶ್ಚರ್ಯದಿಂದಲೇ ನೋಡುತ್ತಿದ್ದ ರಾಜ ದೂರದಿಂದ ವಿಚಿತ್ರ ವೇಷ ಧರಿಸಿದ, ಕೈಯಲ್ಲಿ ಭರ್ಜಿ, ಕೋಲು, ಚಾಕು, ಚೂರಿಗಳನ್ನು ಹಿಡಿದ ಹಲವಾರು ಜನ ಡಕಾಯಿತರು ಈತನೆಡೆ ಬರುತ್ತಿರುವುದನ್ನು ಕಂಡು ಇವರ ಕೈಯಲ್ಲಿ ಸಿಕ್ಕರೆ ತನಗೆ ಉಳಿಗಾಲವಿಲ್ಲ ಎಂದು ಭಾವಿಸಿ, ಮಹಾರಾಜನು ಕೂಡಲೇ ತನ್ನ ಕುದುರೆಯನ್ನೇರಿ ಅಲ್ಲಿಂದ ಧಾವಿಸಿ ಬಲು ದೂರದವರೆಗೆ ಮುಂದೆ ಹೋದನು. ಬಹಳಷ್ಟು ದೂರ ಕುದುರೆಯನ್ನು ಓಡಿಸಿ ಹೋದ ರಾಜನಿಗೆ ಇನ್ನು ಡಕಾಯಿತರು ತನ್ನನ್ನು ಹಿಂಬಾಲಿಸುವುದಿಲ್ಲ ಎಂದು ಖಾತರಿಯಾದಾಗ ಅಲ್ಲಿಯೇ ಇದ್ದ ಮತ್ತೊಂದು ಮರದ ಅಡಿಯಲ್ಲಿ ದಣಿವಾರಿಸಿಕೊಳ್ಳಲು ಕುಳಿತುಕೊಂಡನು.

ಏನಾಶ್ಚರ್ಯ! ಇಲ್ಲಿಯೂ ಒಂದು ಗಿಣಿ ಕುಳಿತಿತ್ತು. ಆಯಾಸದಿಂದ ಬಳಲಿದ ರಾಜನನ್ನು ಕಂಡು ಆ ಗಿಣಿಯು `ಮಹಾಶಯರಿಗೆ ನಮಸ್ಕಾರ… ತುಂಬ ದೂರದಿಂದ ಬಂದಿರುವಿರಿ ಎಂದು ಕಾಣುತ್ತದೆ. ಇಲ್ಲಿಯೇ ಹತ್ತಿರದಲ್ಲಿ ನಮ್ಮ ಋಷಿಗಳ ಆಶ್ರಮವಿದೆ. ದಯವಿಟ್ಟು ಬಂದು ನಮ್ಮ ಅತಿಥ್ಯವನ್ನು ಸ್ವೀಕರಿಸಿ’ ಎಂದು ಗಿಣಿ ಹೇಳಿತು.

ತುಸು ಆಶ್ಚರ್ಯದಿಂದಲೇ ಎದ್ದು ನಿಂತ ಮಹಾರಾಜನಿಗೆ ದಾರಿ ತೋರಿಸಿದ ಗಿಣಿ ಆಶ್ರಮದ ಮುಖ್ಯ ಪರ್ಣಕುಟಿಯತ್ತ ಕರೆದೊಯ್ಯಿತು. ಅಲ್ಲಿ ಧ್ಯಾನ ನಿರತರಾಗಿ ಕುಳಿತಿದ್ದ ಋಷಿ ನಿಧಾನವಾಗಿ ಕಣ್ಣು ತೆರೆದು ರಾಜರನ್ನು ನೋಡುತ್ತಾ `ಮಹಾರಾಜರಿಗೆ ತುಂಬಾ ದಣಿವಾಗಿದೆ ಎನಿಸುತ್ತದೆ, ಬನ್ನಿ ಕೈ-ಕಾಲು ತೊಳೆದು ಸ್ವಲ್ಪ ಫಲಹಾರವನ್ನು ಸೇವಿಸಿ, ದಣಿವಾರಿಸಿಕೊಳ್ಳಿ’ ಎಂದು ಆತ್ಮೀಯವಾಗಿ ಆಹ್ವಾನಿಸಿದರು.

ಮುನಿಗಳ ಆಣತಿಯಂತೆ ಹತ್ತಿರದಲ್ಲಿಯೇ ಇದ್ದ ಕೊಳದಲ್ಲಿ ಕೈ-ಕಾಲು ಮುಖ ತೊಳೆದುಕೊಂಡು ಬಂದ ಮಹಾರಾಜನು ಮುನಿಗಳು ನೀಡಿದ ಹಣ್ಣುಗಳನ್ನು ಸೇವಿಸಿ ಕೊಟ್ಟ ಹಾಲನ್ನು ಕುಡಿದನು. ಕೆಲ ಹೊತ್ತಿನ ವಿಶ್ರಾಂತಿಯ ಬಳಿಕವೂ ಆತನ ಮುಖದ ಮೇಲಿನ ನೆರಿಗೆಗಳು ಮಾಯವಾಗದೆ ಇದ್ದುದನ್ನು ಕಂಡು ಋಷಿಮುನಿಗಳು `ಮಹಾರಾಜ, ನಿನ್ನ ಚಿಂತೆಗೆ ಕಾರಣವೇನು’ ಎಂದು ಕೇಳಿದಾಗ…. ಮಹಾರಾಜನು ಬೇಟೆಗೆ ಬಂದಾಗಿನಿಂದ ನಡೆದ ವಿದ್ಯಮಾನಗಳನ್ನು ಮುನಿವರ್ಯರಿಗೆ ಅರುಹಿ ಎರಡು ಗಿಣಿಗಳ ಸ್ವಭಾವದ ವೈಚಿತ್ರ‍್ಯಗಳನ್ನು ತಿಳಿಸಿದನು.

ನಸುನಕ್ಕ ಮುನಿಗಳು `ಹಾಗಾದರೆ ನೀವು ನಮ್ಮ ತಮ್ಮ ವಾಸಿಸುತ್ತಿರುವ ಜಾಗಕ್ಕೆ ಹೋಗಿ ಬಂದಿರುವಿರಿ’ ಎಂದಾಗ ರಾಜನ ಆಶ್ಚರ್ಯ ಮೇರೆ ಮೀರಿತ್ತು. ಆಗ ಮುನಿಗಳು `ಅಷ್ಟೊಂದು ಆಶ್ಚರ್ಯ ಪಡುವ ಅಗತ್ಯವಿಲ್ಲ ಮಹಾರಾಜ. ನನ್ನ ಮತ್ತು ನನ್ನ ಸಹೋದರನ ಬಳಿ ಇರುವ ಎರಡು ಗಣಿಗಳು ಒಂದೇ ತಾಯಿಯ ಮಕ್ಕಳು. ನನ್ನ ಸಹೋದರ ದರೋಡೆಯನ್ನು ವೃತ್ತಿಯನ್ನಾಗಿ ಮಾಡಿಕೊಂಡರೆ, ನಾನು ಆಧ್ಯಾತ್ಮ ಸಾಧನೆಯನ್ನು ಜೀವನ ಮಾರ್ಗವಾಗಿ ಆಯ್ದುಕೊಂಡೆನು. ದರೋಡೆಯೇ ವೃತ್ತಿಯಾದ ನನ್ನ ತಮ್ಮನ ಬಳಿ ಬೆಳೆದ ಗಿಣಿ ಮರಿ ಕಡಿ, ಬಡಿ, ಹೊಡಿ, ದೋಚು ಎಂಬ ಮಾತುಗಳನ್ನು ಆಡಿದರೆ, ಆಶ್ರಮದ ಪ್ರಶಾಂತ ಮತ್ತು ಸಂಸ್ಕಾರಯುತ ವಾತಾವರಣದಲ್ಲಿ ಬೆಳೆದ ಗಿಣಿ ಮರಿಯೂ ಇಲ್ಲಿಯ ಭಾಷೆಯನ್ನು ಮಾತನಾಡಿತಷ್ಟೇ’ ಎಂದು ನುಡಿದರು. ಎರಡು ಗಿಣಿಗಳ ನಡುವಣ ವ್ಯತ್ಯಾಸವನ್ನು ಅರಿತ ಮಹಾರಾಜ ಮುನಿವರರ ಮಾತುಗಳಿಗೆ ಹೌದೆಂಬಂತೆ ತಲೆದೂಗಿದನು.

ನೋಡಿದಿರಾ ಸ್ನೇಹಿತರೆ, ದುರ್ಜನರ ಸಂಗವು ಇದ್ದಲಿನಂತೆ. ಬಿಸಿಯಾಗಿದ್ದರೆ ಕೈಯನ್ನು ಸುಡುವುದು.

ಆರಿದ್ದರೆ ಕಪ್ಪು ಮಸಿಯನ್ನು ಹಚ್ಚುವುದು ಅದರ ಹುಟ್ಟುಗುಣ. ಆದ್ದರಿಂದಲೇ ನಮ್ಮ ಹಿರಿಯರು ಹೇಳುವುದು `ಸಜ್ಜನರ ಸಂಗ ಹೆಜ್ಜೇನ ಸವಿದಂತೆ’ ಎಂದು. ಆದ್ದರಿಂದ, ನಮ್ಮ ಸ್ನೇಹಿತರನ್ನು ಬಲು ಎಚ್ಚರಿಕೆಯಿಂದ ಆಯ್ದುಕೊಳ್ಳೋಣ.
ವೀಣಾ ಹೇಮಂತ್ ಗೌಡ ಪಾಟೀಲ್.
ಮುಂಡರಗಿ.


Spread the love

LEAVE A REPLY

Please enter your comment!
Please enter your name here