ಬೆಂಗಳೂರು: ಶ್ರೀಮಂತರು ಸ್ವಯಂ ಪ್ರೇರಿತರಾಗಿ ಗ್ಯಾರಂಟಿ ಯೋಜನೆಗಳ ಲಾಭ ಪಡೆಯುವುದನ್ನು ಬಿಡಬೇಕು ಎಂದು ಸಚಿವ ಎಂ.ಬಿ. ಪಾಟೀಲ್ ಒತ್ತಾಯಿಸಿದ್ದಾರೆ.
ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶ್ರೀಮಂತರು ಗ್ಯಾರಂಟಿ ಯೋಜನೆಗಳನ್ನು ಪಡೆದುಕೊಳ್ಳುವುದು ಸರಿಯಲ್ಲ ಎಂಬ ಡಿಕೆ ಸುರೇಶ್ ಅವರ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದರು. ಗ್ಯಾರಂಟಿ ಯೋಜನೆಗಳ ಲಾಭವನ್ನು ಅರ್ಹ ಬಿಪಿಎಲ್ ಕುಟುಂಬಗಳು ಮಾತ್ರ ಪಡೆಯಬೇಕು, ಶ್ರೀಮಂತರು ಅದನ್ನು ಸ್ವಯಂ ಇಚ್ಛೆಯಿಂದ ತ್ಯಜಿಸಬೇಕು ಎಂಬುದು ತಮ್ಮ ಅಭಿಪ್ರಾಯವೂ ಹೌದು ಎಂದು ಹೇಳಿದರು.
ಇದೇ ವೇಳೆ ಗ್ಯಾರಂಟಿ ಯೋಜನೆಗಳು ರಾಜ್ಯ ಸರ್ಕಾರಕ್ಕೆ ಹೊರೆಯಾಗುತ್ತಿವೆ ಎಂಬ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಎಂ.ಬಿ. ಪಾಟೀಲ್, ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿಯೂ ಸಮಾನವಾಗಿ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು. ಗೃಹಲಕ್ಷ್ಮಿ ಹಾಗೂ ಶಕ್ತಿ ಯೋಜನೆಗಳು ಅಭಿವೃದ್ಧಿಯ ಭಾಗವಾಗಿದ್ದು, ಅವುಗಳಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುವುದಿಲ್ಲ ಎಂದು ಹೇಳಿದರು. ರಾಜ್ಯದ ಮುಖ್ಯಮಂತ್ರಿಗಳು ಹಣಕಾಸು ವಿಷಯದಲ್ಲಿ ಅನುಭವಿಗಳಾಗಿದ್ದು, ಈಗಾಗಲೇ ಹಲವು ಬಜೆಟ್‌ಗಳನ್ನು ಮಂಡಿಸಿರುವವರು; ಅವರು ಹಣಕಾಸನ್ನು ಸಮರ್ಥವಾಗಿ ನಿರ್ವಹಿಸಲಿದ್ದಾರೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.



