ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಕರ್ನಾಟಕ ರಾಜ್ಯ ಬೀದಿಬದಿ ವ್ಯಾಪಾರಸ್ಥರ ಸಂಘ ಸಿಐಟಿಯು ಸಂಯೋಜಿತ ಗಜೇಂದ್ರಗಡ ತಾಲೂಕಾ ಸಮಿತಿಯು ಬೀದಿಬದಿ ವ್ಯಾಪಾರಸ್ಥರ ಹಕ್ಕುಗಳ ರಕ್ಷಣೆಗಾಗಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಮೆರವಣಿಗೆ, ತಾಲೂಕು ಸಮ್ಮೇಳನ ಹಮ್ಮಿಕೊಂಡಿತು.
ಬಹಿರಂಗ ಸಭೆಯನ್ನು ಸಂಘದ ಗೌರವಾಧ್ಯಕ್ಷ ಮತ್ತು ಕೃಷಿ ಕೂಲಿಕಾರರ ಸಂಘದ ತಾಲೂಕು ಅಧ್ಯಕ್ಷ ಬಾಲು ರಾಠೋಡ ಉದ್ಘಾಟಿಸಿ ಮಾತನಾಡಿ, ಇಂದು ನಡೆದ ಬೃಹತ್ ಮೆರವಣಿಗೆಯು ನಮ್ಮ ಹಕ್ಕುಗಳಿಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ಸಹಕಾರಿಯಾಗಿದೆ. ಈ ಮೂಲಕ ಜನರ ಮಧ್ಯೆ ಚರ್ಚೆಯನ್ನು ಹುಟ್ಟುಹಾಕಿದ ಕರ್ನಾಟಕ ರಾಜ್ಯ ಬೀದಿಬದಿ ವ್ಯಾಪಾರಸ್ಥರ ಸಂಘವು ಗಜೇಂದ್ರಗಡದಲ್ಲಿ 2014ರಿಂದಲೇ ಕಾರ್ಯ ನಿರ್ವಹಿಸುತ್ತಿದ್ದು, ಅನೇಕ ಹೋರಾಟಗಳನ್ನು ಮಾಡಿದೆ ಎಂದರು.
ಯುವ ಮುಖಂಡ ಎಫ್.ಎಫ್. ತೋಟದ ಮಾತನಾಡಿ, ಈ ಸಮ್ಮೇಳನ ಅಚ್ಚುಕಟ್ಟಾಗಿ ನಡೆಯುತ್ತಿದೆ. ಸಮ್ಮೇಳನದ ಮೂಲಕ ಮತ್ತೆ ಹೊಸ ಬೇಡಿಕೆಗಳ ಆಧಾರದಲ್ಲಿ ಹೋರಾಟಗಳನ್ನು ರೂಪಿಸಿ ನ್ಯಾಯ ಪಡೆಯಿರಿ. ಸಮ್ಮೇಳನ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ ಎಂದರು.
ತಾಲೂಕು ಉಪಾಧ್ಯಕ್ಷ ಮಾಂಡ್ರೆ, ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಗಣೇಶ್ ರಾಥೋಡ್, ಬೀದಿಬದಿ ವ್ಯಾಪಾರಸ್ಥರ ಸಂಘಟನೆಯ ತಾಲೂಕು ಅಧ್ಯಕ್ಷ ಎಸ್.ಬಿ. ದಿಂಡವಾಡ್ ಮಾತನಾಡಿದರು. ಪೀರು ರಾಠೋಡ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯ ಮೇಲೆ ಸಿಐಟಿಯು ಮುಖಂಡರಾದ ಮೈಬು ಹವಾಲ್ದಾರ್, ಕಟ್ಟಡ ಕಾರ್ಮಿಕರ ಸಂಘದ ತಾಲೂಕಾಧ್ಯಕ್ಷ ಅಂದಪ್ಪ ಕುರಿ, ಎಸ್.ಎಫ್. ಜಿಲ್ಲಾಧ್ಯಕ್ಷ ಚಂದ್ರು ರಾಥೋಡ್, ಪಿವಿಸಿ ಕಮಿಟಿಯ ಸದಸ್ಯ ಚೌಡಮ್ಮ ಯಲ್ಪು, ರಾಜು ಮಾಂಡ್ರೆ, ಮಂಜುಳಾ ಪಮ್ಮಾರ, ಚಂದ್ರಶೇಖರ ರಾಠೋಡ, ಅಂಬರೀಶ್ ಚವ್ಹಾಣ, ಕಳಕಪ್ಪ ಮಾಳೋತ್ತರ, ಕೆ.ಸಿ. ಗೋಡೇಕಾರ, ಉಮೇಶ ನಾವಡೆ, ಸುನೀಲ್ ಕುಂಬಾರ, ಮುತ್ತಣ್ಣ ರಾಠೋಡ, ಅನ್ವರಬಾಸ್ ಹಿರೇಕೋಪ್ಪ, ಮೈಬುಬ ಹವಾಲ್ದಾರ್, ವಿಷ್ಣು ಚಂದುಕರ, ಗಂಗಾಧರ್ ಸತ್ಯಣವರ, ಸಬೀನಾ ಮುಧೋಳ, ದೇವಕ್ಕ ರಾಠೋಡ, ರೇಣವ್ವ ರಾಠೋಡ ಮುಂತಾದವರಿದ್ದರು.
ಪ್ರಾಸ್ತಾವಿಕವಾಗಿ ತಾಲೂಕು ಕಾರ್ಯದರ್ಶಿ ಪೀರು ರಾಠೋಡ ಮಾತನಾಡಿ, ಗಜೇಂದ್ರಗಡ ನಗರವು ವ್ಯಾಪಾರಸ್ಥರ ಕೇಂದ್ರವಾಗಿದ್ದು, ವ್ಯಾಪಾರ ಬೆಳೆಯುತ್ತಲೇ ಇದೆ. ನಗರದಲ್ಲಿನ ಬೀದಿ ಬದಿ ವ್ಯಾಪಾರ ಮಾಡುವ ವ್ಯಾಪಾರಸ್ಥರ ಬದುಕು ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಗಳು ಅವರಿಗೆ ನೀಡಬೇಕಾದ ಕಾನೂನುಬದ್ಧ ಸೌಲಭ್ಯಗಳನ್ನು ನೀಡದಿದ್ದಾಗ ಬೀದಿಗೆ ಇಳಿದು ನ್ಯಾಯಯುತವಾಗಿ ಹೋರಾಟ ಮಾಡಿ ಕೆಲವು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಂಘದ ನೇತೃತ್ವದಲ್ಲಿ ಸಾಧ್ಯವಾಗಿದೆ ಎಂದರು.



