ದೇಶದ ಅಭಿವೃದ್ಧಿಯಲ್ಲಿ ಎಂಎಸ್‌ಎಂಇ ಪಾತ್ರ ಮಹತ್ವದ್ದು

0
anand
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ ಕಾಯಿದೆ-2006ರ ಪ್ರಕಾರ, ಒಪ್ಪಿದ ನಿಯಮಗಳ ಪ್ರಕಾರ ಅಥವಾ ಗರಿಷ್ಠ 45 ದಿನಗಳ ಪ್ರಕಾರ ಎಂ.ಎಸ್.ಎಂ.ಇ (ಮೈಕ್ರೋ, ಸ್ಮಾಲ್ ಆ್ಯಂಡ್ ಮೀಡಿಯಂ ಎಂಟರ್ಪ್ರೈಸಸ್)ಗಳಿಗೆ ಪಾವತಿ ಮಾಡಲು ವಿಫಲರಾದ ಯಾವುದೇ ಖರೀದಿದಾರರು ಆರ್‌ಬಿಐ ಸೂಚಿಸಿದ ಬ್ಯಾಂಕ್ ದರಕ್ಕಿಂತ ಮೂರು ಪಟ್ಟು ಮಾಸಿಕ ಸಂಯುಕ್ತ ಬಡ್ಡಿಯನ್ನು ಪಾವತಿಸಲು ಜವಾಬ್ದಾರರಾಗಿರುತ್ತಾರೆ ಎಂದು ಗದುಗಿನ ಹಿರಿಯ ಚಾರ್ಟರ್ಡ ಅಕೌಂಟೆಂಟ್ ಆನಂದ ಪೋತ್ನೀಸ್ ಹೇಳಿದರು.

Advertisement

ಅವರು ಗದುಗಿನ ಅರಿಹಂತ ಪ್ಲಾಜಾದಲ್ಲಿ ಗದಗ ಜಿಲ್ಲಾ ಕ್ಲಾಥ್ ಮರ್ಚಂಟ್ಸ್ ಅಸೋಶಿಯೇಶನ್ ಏರ್ಪಡಿಸಿದ್ದ ಎಂ.ಎಸ್.ಎಂ.ಇ ಕುರಿತಾದ ಸೆಮಿನಾರ್ ಉದ್ದೇಶಿಸಿ ವ್ಯಾಪಾರಸ್ಥರಿಗೆ ಮಾಹಿತಿ ನೀಡಿದರು.

ಇನ್ನೋರ್ವ ಚಾರ್ಟರ್ಡ್ ಅಕೌಂಟೆಂಟ್ ಬೆಂಗಳೂರಿನ ನರೇಂದ್ರ ಜೈನ್ ಮಾತನಾಡಿ, ಸೂಕ್ಷ್ಮ ಉದ್ಯಮ-ಸ್ಥಾವರ ಮತ್ತು ಯಂತ್ರೋಪಕರಣಗಳು ಅಥವಾ ಸಲಕರಣೆಗಳಲ್ಲಿನ ಹೂಡಿಕೆಯು ಒಂದು ಕೋಟಿ ರೂಪಾಯಿಗಳನ್ನು ಮೀರದ ಮತ್ತು ವಹಿವಾಟು ಐದು ಕೋಟಿ ರೂಪಾಯಿ ಒಳಗಿರುವ, ಸಣ್ಣ ಉದ್ಯಮ-ಸ್ಥಾವರ ಮತ್ತು ಯಂತ್ರೋಪಕರಣಗಳು ಅಥವಾ ಸಲಕರಣೆಗಳಲ್ಲಿನ ಹೂಡಿಕೆಯು ಹತ್ತು ಕೋಟಿ ರೂಪಾಯಿಗಳನ್ನು ಮೀರದ ಮತ್ತು ವಹಿವಾಟು ಐವತ್ತು ಕೋಟಿ ರೂಪಾಯಿ ಒಳಗಿರುವ, ಮಧ್ಯಮ ಉದ್ಯಮ-ಸ್ಥಾವರ ಮತ್ತು ಯಂತ್ರೋಪಕರಣಗಳು ಅಥವಾ ಸಲಕರಣೆಗಳಲ್ಲಿನ ಹೂಡಿಕೆಯು ಐವತ್ತು ಕೋಟಿ ರೂಪಾಯಿಗಳನ್ನು ಮೀರದ ಮತ್ತು ವಹಿವಾಟು ಇನ್ನೂರೈವತ್ತು ಕೋಟಿ ರೂಪಾಯಿ ಮೀರದಂತಿರುವ ಹೀಗೆ ಮೂರು ಹಂತಗಳಲ್ಲಿ ವಿಂಗಡಿಸಲಾಗಿದೆ ಎಂದು ವಿವರಣೆ ನೀಡಿದರು.

ವ್ಯಾಪಾರಸ್ಥರ ಸಂದೇಹದ ಪ್ರಶ್ನೆಗಳಿಗೆ ಪೋತ್ನೀಸ್ ಹಾಗೂ ಜೈನ್ ಅವರು ಕಾಯ್ದೆ ಚೌಕಟ್ಟಿನೊಳಗೆ ಇರುವ ನಿಖರ ಮಾಹಿತಿ ನೀಡಿ ಸಂದೇಹಗಳಿಗೆ ಉತ್ತರಿಸಿದರು. ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಕ್ಲಾಥ್ ಮರ್ಚಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಸುರೇಶ ಬನ್ಸಾಲಿ ಮಾತನಾಡಿದರು. ಅಸೋಸಿಯೇಶನ್ ಕಾರ್ಯದರ್ಶಿ ಹೀರಾಚಂದ ಸಿಮ್ಲಾನಿ ಸ್ವಾಗತಿಸಿದರು. ಮನೀಶ್ ಬನ್ಸಾಲಿ ನಿರೂಪಿಸಿದರು. ಖಜಾಂಚಿ ಮಹಾವೀರ ಸೋಳಂಕಿ ವಂದಿಸಿದರು.
ಕಾರ್ಯಕ್ರಮದಲ್ಲಿ ಬಾಬುಲಾಲ ಬನ್ಸಾಲಿ, ಸುರೇಶ ಓಸ್ವಾಲ, ಸಾವಲಚಂದ್ ಜೈನ್, ರಮೇಶ ಬನ್ಸಾಲಿ, ದೀಪಕ ಬಾಫಣಾ, ಮೋಹನ ಪವಾರ, ಹರೀಶ ಜೋತವಾನಿ, ವ್ಹಿ.ಎಂ. ಖಟವಟೆ, ಮಂಜುನಾಥ ಚನ್ನಪ್ಪನವರ, ಧೀರಜ್ ಪಾಲರೇಚಾ, ರಾಜೇಂದ್ರ ಜೈನ್, ರಾಮಕೃಷ್ಣ ಕಾಟೀಗರ, ಮಂಜುನಾಥ ಬಸವಾ, ರಮೇಶ ಬನ್ಸಾಲಿ ಸೇರಿದಂತೆ ಗದಗ ಮಾರ್ಕೆಟ್‌ನ ಗಣ್ಯ ವ್ಯಾಪಾರಸ್ಥರು ಪಾಲ್ಗೊಂಡಿದ್ದರು.

ವ್ಯವಹಾರದಲ್ಲಿ ಒಪ್ಪಂದ ಆಗಿದ್ದರೆ 45 ದಿನ, ಒಪ್ಪಂದ ಆಗದಿದ್ದರೆ 15 ದಿನಗಳೊಳಗೆ ಹಣ ಪಾವತಿಸಬೇಕು ಎಂಬುದನ್ನೇ ಸರಳವಾಗಿ ತಿಳಿಯಬೇಕಷ್ಟೇ. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಎಂಎಸ್‌ಎಂಇ ಮಹತ್ವದ ಪಾತ್ರವನ್ನು ವಹಿಸಿದೆ ಎಂದು ಆನಂದ ಪೋತ್ನೀಸ್ ತಿಳಿಸಿದರು.


Spread the love

LEAVE A REPLY

Please enter your comment!
Please enter your name here