ವಿಜಯಸಾಕ್ಷಿ ಸುದ್ದಿ, ಗದಗ: ಬಾಲ ಹಾಗೂ ಕಿಶೋರ ಕಾರ್ಮಿಕರ, ಭಿಕ್ಷಾಟನೆಯಲ್ಲಿ ತೊಡಗಿದ ಮಕ್ಕಳ, ಬೀದಿಬದಿ ಮಕ್ಕಳ, ಅನಾಥ, ನಿರ್ಗತಿಕ ಮಕ್ಕಳ, ವಿಪತ್ತಿಗೆ ಬಲಿಯಾದ ಮಕ್ಕಳ ರಕ್ಷಣೆ ಮಾಡುವಂತೆ ಹಾಗೂ ಈ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ, ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಘಟಕ, ಗದಗಇವರ ಸಹಯೋಗದಲ್ಲಿ `ಮಕ್ಕಳ ರಕ್ಷಣೆ, ವಿಪತ್ತು ನಿರ್ವಹಣೆಯಲ್ಲಿ ಭಾಗಿದಾರ ಇಲಾಖೆಗಳ ಪಾತ್ರ’ ಕುರಿತು 2 ದಿನಗಳ ತರಬೇತಿದಾರರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉಪ ಅಧೀಕ್ಷಕರು ಮಾತನಾಡಿ, ಪೊಲೀಸ್ ಇಲಾಖೆ 24/7 ವಿಪತ್ತು ಸಂದರ್ಭದಲ್ಲಿ ಹಾಗೂ ಮಕ್ಕಳ ರಕ್ಷಣಾ ಕಾರ್ಯಾಚರಣೆಯಲ್ಲಿ ಸದಾ ಸನ್ನದ್ಧವಾಗಿದ್ದು, ಎಂತಹುದೇ ತುರ್ತು ಪರಿಸ್ಥಿತಿಯಲ್ಲಿ ರಕ್ಷಣೆಗೆ 112ಗೆ ಕರೆ ಮಾಡಬುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಆರ್.ಎಸ್ ಬುರಡಿ, ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಶೌಚಾಲಯ ನಿರ್ವಹಣೆ ಮತ್ತು ದುರಸ್ತಿ ಕಾಮಗಾರಿಯನ್ನು ಹಂತ ಹಂತವಾಗಿ ಮಾಡಲಾಗುತ್ತಿದೆ. ಬಾಲ್ಯ ವಿವಾಹ, ಬಾಲಕಾರ್ಮಿಕತೆ, ಪೋಕ್ಸೋದಂತಹ ಪ್ರಕರಣಗಳಿಗೆ ಬಲಿಯಾಗುವವರ ಬಹುಸಂಖ್ಯಾತ ಮಕ್ಕಳು ಶಾಲೆಯಿಂದ ಹೊರಗುಳಿದ ಮಕ್ಕಳೇ ಆಗಿರುತ್ತಾರೆ. ಆದ್ದರಿಂದ ಅಂತಹ ಶಾಲೆಯಿಂದ ಹೊರಗುಳಿದ ಮಕ್ಕಳನ್ನು `ಮರಳಿ ಬಾ ಶಾಲೆಗೆ’ ಎಂಬ ಕಾರ್ಯಕ್ರಮದ ಮೂಲಕ ಎಲ್ಲ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳುವ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ತಿಳಿಸಿದರು.
ವಿಪತ್ತು ನಿರ್ವಹಣಾ ತಜ್ಞ ಶಿವಾನಂದ ರಾಜನಾಳ ಮಾತನಾಡಿ, ಕಂದಾಯ ಇಲಾಖೆಯು ವಿಪತ್ತು ಪೂರ್ವ, ವಿಪತ್ತು ಸಂದರ್ಭದಲ್ಲಿ ಹಾಗೂ ವಿಪತ್ತು ಘಟಿಸಿದ ನಂತರ ಕೈಗೊಳ್ಳಬೇಕಾದ ಕ್ರಮಗಳು, ಮಕ್ಕಳ, ಮಹಿಳೆಯರ ಮತ್ತು ವಿಕಲಚೇತನರ ರಕ್ಷಣೆ ಕಾರ್ಯಾಚರಣೆ ಕುರಿತು ಸಮಗ್ರವಾಗಿ ಉಪನ್ಯಾಸ ನೀಡಿದರು.
ಎರಡನೇ ದಿನ ಅಗ್ನಿಶಾಮಕ ಅಧಿಕಾರಿ ವ್ಹಿ.ಎಸ್.ಟೆಕ್ಕೇಕರ್, ಅಗ್ನಿ ದುರಂತ ಪೂರ್ವ ವಹಿಸಬೇಕಾದ ಮುಂಜಾಗ್ರತೆ, ದುರಂತ ಸಂಭವಿಸಿದ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಯ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿ ಉಪನ್ಯಾಸ ನೀಡಿದರು.
ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಮ್.ಎಮ್. ಅವಟೆ ತರಬೇತಿಯಲ್ಲಿ ಭಾಗವಹಿಸಿದ ಅಧಿಕಾರಿ/ಸಿಬ್ಬಂದಿಗಳಿಗೆ ಪ್ರಶಸ್ತಿಪತ್ರ ವಿತರಿಸಿ, 2 ದಿನಗಳ ತರಬೇತಿಯಲ್ಲಿ ಪಡೆದ ಜ್ಞಾನವನ್ನು ತಳಮಟ್ಟದವರೆಗೆ ಎಲ್ಲಾ ಸಿಬ್ಬಂದಿಗಳಿಗೆ ಹಾಗೂ ಸಾರ್ವಜನಿಕರಿಗೆ ತಲುಪಿಸಿ ಮಕ್ಕಳ ರಕ್ಷಣೆ ಹಾಗೂ ವಿಪತ್ತು ನಿರ್ವಹಣೆ ಕುರಿತು ಜಾಗೃತಿ ಮೂಡಿಸುವಂತೆ ಕರೆ ನೀಡಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ರಫೀಕಾ ಹಳ್ಳೂರು ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಲ್ಲಪ್ಪ ಹೊಸಳ್ಳಿ ನಿರೂಪಿಸಿ ವಂದಿಸಿದರು.
ಮೊದಲನೇ ದಿನ ಕೊಪ್ಪಳದ ಯುನಿಸೆಫ್ ಸಂಯೋಜಕ ಹರೀಶ ಜೋಗಿ ಮಕ್ಕಳ ಹಕ್ಕುಗಳು, ಬಾಲನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ, ಬಾಲ ಕಾರ್ಮಿಕತೆ ಮತ್ತು ಕಿಶೋರ ಕಾರ್ಮಿಕ ನಿಷೇಧ ಹಾಗೂ ನಿಯಂತ್ರಣ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಗಳ ಕುರಿತು ಉಪನ್ಯಾಸ ನೀಡಿದರು.