ವಿಜಯಸಾಕ್ಷಿ ಸುದ್ದಿ, ಬೆಟಗೇರಿ: ಇಲ್ಲಿನ ಶ್ರೀ ದೇವಾಂಗ ಸಮಾಜ ಹಾಗೂ ನೇಕಾರರ ವಿವಿಧೋದ್ದೇಶಗಳ ಸಹಕಾರ ಸಂಘದ 14ನೇ ವಾರ್ಷಿಕ ಸರ್ವ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷ ಪ್ರಕಾಶ ಹತ್ತಿಕಾಳರ ಅಧ್ಯಕ್ಷತೆಯಲ್ಲಿ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹಣಬರಟ್ಟಿ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಸಮಾಜ ಹಾಗೂ ಸಮಾಜ ಬಾಂಧವರು ಸಕ್ರಿಯವಾಗಿ ಪಾಲ್ಗೊಂಡಾಗ ಸಮಾಜ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಬೆಳೆಯುತ್ತದೆ. ಈ ದಿಶೆಯಲ್ಲಿ ದೇವಾಂಗ ನೇಕಾರರ ವಿವಿಧೋದ್ದೇಶಗಳ ಸಂಘ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ಸಂಘದ ಕಾರ್ಯದರ್ಶಿ ದಶರಥರಾಜ ಕೊಳ್ಳಿ ಸಂಘ ನಡೆದು ಬಂದ ಹಾದಿಯನ್ನು ಸಭೆಗೆ ವಿವರಿಸಿ, ಸಮಾಜ ಸಂಘಟನೆಗೆ, ಮಹಿಳಾ ಸಂಘಟನೆಗೆ, ಧಾರ್ಮಿಕ ಸಂಘಟನೆಗೆ ನಮ್ಮ ಸಂಘ ಸಹಕಾರ ನೀಡುತ್ತಾ ಬಂದಿದ್ದು, ಸಮಾಜದ ಹಿರಿಯರನ್ನು ಗುರುತಿಸಿ ಗೌರವಿಸುತ್ತಿದೆ. ಈ ದಿಶೆಯಲ್ಲಿ ಸಮಾಜದ ಹಿರಿಯರ ಸಹಕಾರ ಅಮೂಲ್ಯವಾದುದು ಎಂದು ಹೇಳಿದರು.
ದೇವಾಂಗ ಮಹಿಳಾ ಮಂಡಳದ ಅಧ್ಯಕ್ಷೆ ವೀಣಾ ಪಿ. ನೀಲಗುಂದ ಮಾತನಾಡಿ, ಆಡಳಿತ ಮಂಡಳಿ ಹಾಗೂ ಸಲಹಾ ಮಂಡಳಿಯ ಮಾರ್ಗದರ್ಶನದ ಫಲವಾಗಿ 14 ವರ್ಷ ಪೂರ್ಣಗೊಳಿಸಿ 15ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು.
ಪ್ರಿಯಾಂಕ ವ್ಹಿ. ಕುದರಿಮೋತಿ ಮಾತನಾಡಿ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರಿ ಕ್ಷೇತ್ರ ಅಪಾರ ಕೊಡುಗೆಯನ್ನು ನೀಡಿದೆ. ಈ ಕ್ಷೇತ್ರದ ಪರಿಣಾಮಕಾರಿ ಬೆಳವಣಿಗೆಗೆ ಯುವಕರು, ಮಹಿಳೆಯರು ಕೈಜೋಡಿಸಬೇಕಾಗಿದೆ ಎಂದರು.
ದೇವಾಂಗ ರತ್ನ ಪ್ರಶಸ್ತಿ ಪುರಸ್ಕೃತ ಸುಭಾಸ ಹುಲಗೂರ ಮಾತನಾಡಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪ್ರಕಾಶ ಹತ್ತಿಕಾಳ ಶೇರುದಾರರಿಗೆ ಲಾಭಾಂಶದಲ್ಲಿ ಶೇ. 6 ಡಿವಿಡೆಂಡ್ ಘೋಷಿಸಿದರು. ಅಮೃತಾ ಬಗಾಡೆ ಪ್ರಾರ್ಥಿಸಿದರು. ವಜ್ರೇಶ್ವರಿ ಪೆಂಟಾ ಸ್ವಾಗತಿಸಿದರು. ನಿರ್ಮಲಾ ಕೊಳ್ಳಿ ನಿರೂಪಿಸಿದರು. ವಸಂತ ಇಂಜಿನಿ ವಂದಿಸಿದರು.
ಮುಖ್ಯ ಅತಿಥಿಗಳಾಗಿ ಹೊಸಬನ ಶಂಕರಿ ದೇವಿ ದೇವಸ್ಥಾನ ಮಹಿಳಾ ಮಂಡಳದ ಅಧ್ಯಕ್ಷೆ ರಾಧಾ ಎಮ್.ಬೆಲ್ಲದ ಮಾತನಾಡಿ, ಸಂಘವು ವ್ಯವಹಾರದ ಜೊತೆಗೆ ಸಾಮಾಜಿಕ ಚಟುವಟಿಕೆಗಳಲ್ಲಿಯೂ ತೊಡಗಿದೆ. ಪ್ರತಿವರ್ಷ ವಾರ್ಷಿಕ ಸಾಮಾನ್ಯ ಸಭೆಯಲ್ಲಿ 60 ವಸಂತ ಪೂರೈಸಿದ ನೇಕಾರರಿಗೆ ಸನ್ಮಾನ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.