ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ದೊಡ್ಡದು

0
bottom
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ : ಸಂಸ್ಥೆಯ ಬೆಳವಣಿಗೆಗೆ ನೆರವು ನೀಡಲು ಭಾರತೀಯ ಕೌನ್ಸಿಲ್ ಆಫ್ ವರ್ಲ್ಡ್ ಅಫೇರ್ಸ್ ಮತ್ತು ಐಐಟಿ ಧಾರವಾಡ ನಡುವೆ ಎಂಓಯು ಸಾಧ್ಯವಾಗಿಸಲು ನಾವು ಅನುಕೂಲ ಮಾಡಿಕೊಡುತ್ತೇವೆ. ಇದು ಅಪಾರ ಸಾಧ್ಯತೆಗಳನ್ನು ಉಂಟು ಮಾಡಲಿದೆ ಎಂದು ಭಾರತದ ಉಪ ರಾಷ್ಟ್ರಪತಿಗಳಾದ ಜಗದೀಪ್ ಧನಕರ್ ನುಡಿದರು.

Advertisement

ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಧಾರವಾಡ (ಐಐಟಿ ಧಾರವಾಡ)ದ ಕ್ಯಾಂಪಸ್‌ನಲ್ಲಿ ನಿರ್ಮಾಣವಾದ ಹೊಸ ಕೇಂದ್ರೀಯ ಕಲಿಕಾ ರಂಗಮಂದಿರ (ಸೆಂಟ್ರಲ್ ಲರ್ನಿಂಗ್ ಥಿಯೇಟರ್-ಸಿಎಲ್‌ಟಿ), ಜ್ಞಾನ ಸಂಪನ್ಮೂಲ-ದತ್ತಾಂಶ ಕೇಂದ್ರ (ಕೆಆರ್‌ಡಿಸಿ) ಮತ್ತು ಎರಡು ಹೊಸ ಪ್ರವೇಶ ದ್ವಾರಗಳ ಉದ್ಘಾಟನೆಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಭಾರತವು ಮುಂದಿನ ಕೆಲವು ವರ್ಷಗಳಲ್ಲಿ ಜಾಗತಿಕವಾಗಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲು ಸಜ್ಜಾಗಿದೆ. ಭಾರತವು ತನ್ನ ಗುರಿಗಳನ್ನು ಸಾಧಿಸಲು ಮತ್ತು 2047ರ ಹೊತ್ತಿಗೆ ಅಭಿವೃದ್ಧಿ ಹೊಂದಿದ ರಾಷ್ಟçಗಳ ಶ್ರೇಣಿಗೆ ಸೇರುವಂತೆ ಮಾಡಲು ತಂತ್ರಜ್ಞಾನದ ಶಕ್ತಿಯನ್ನು ಬಳಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಐಐಟಿ ಧಾರವಾಡದ ನಿರ್ದೇಶಕ ಪ್ರೊ.ವೆಂಕಪ್ಪಯ್ಯ ಆರ್. ದೇಸಾಯಿ ಮಾತನಾಡಿ, ಭಾರತದ ಗೌರವಾನ್ವಿತ ಉಪ ರಾಷ್ಟ್ರಪತಿಗಳ ನಮ್ಮ ಕ್ಯಾಂಪಸ್‌ನಲ್ಲಿ ಈ ಮಹತ್ವದ ಕಟ್ಟಡಗಳು ಮತ್ತು ಸೌಲಭ್ಯಗಳನ್ನು ಉದ್ಘಾಟಿಸಿದ್ದು ಹೆಮ್ಮೆಯ ಕ್ಷಣವಾಗಿದೆ. ಐಐಟಿ ಧಾರವಾಡದಲ್ಲಿ ಸಂಪನ್ಮೂಲಗಳನ್ನು ಸೂಕ್ತವಾಗಿ ಬಳಸಿಕೊಳ್ಳುವ ಮೂಲಕ ಈ ಪ್ರದೇಶವನ್ನು ಸುಸ್ಥಿರ ಅಕ್ಷಯ ಕ್ಷೇತ್ರವನ್ನಾಗಿ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಹೇಳಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಧಾರವಾಡವು ಐಐಟಿ ಮತ್ತು ಐಐಐಟಿ ಉಪಸ್ಥಿತಿಯೊಂದಿಗೆ ಉನ್ನತ ಶಿಕ್ಷಣದ ಪ್ರಮುಖ ಕೇಂದ್ರವಾಗಿದೆ. ಇದು ಜಿಲ್ಲೆಯ ಕೈಗಾರಿಕಾ ಬೆಳವಣಿಗೆಗೆ ದಾರಿ ಮಾಡಿಕೊಡುತ್ತದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳು ಕರ್ನಾಟಕದ ಉದಯೋನ್ಮುಖ ತಂತ್ರಜ್ಞಾನ ಮತ್ತು ಆರ್ಥಿಕ ಶಕ್ತಿ ಕೇಂದ್ರಗಳಲ್ಲಿ ಸೇರಿಕೊಂಡಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಭಾರತದ ದ್ವಿತೀಯ ಮಹಿಳೆ ಡಾ. ಸುದೇಶ್ ಧನಕರ್, ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಸೇರಿದಂತೆ ಜಿಲ್ಲೆಯ ಹಿರಿಯ ಅಧಿಕಾರಿಗಳು, ಐಐಟಿ ಧಾರವಾಡದ ವಿವಿಧ ವಿಭಾಗದ ಪ್ರಾಧ್ಯಪಕರು, ವಿದ್ಯಾರ್ಥಿಗಳು, ಸಂಶೋಧಕರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಆಕಾಶವಾಣಿಯ ಹಿರಿಯ ಉದ್ಘೋಷಕಿ ಮಾಯಾ ರಾಮನ್, ಕುಮಾರಿ ಮೇಘನಾ ಭಟ್, ಮುಕ್ತಾ ವೇದಪಾಠಕ ಅವರು ನಿರೂಪಿಸಿ, ವಂದಿಸಿದರು.

ದೇಶದ ಯುವಕರು ಪ್ರಜಾಪ್ರಭುತ್ವ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಧಾರವಾಡದ ಐಐಟಿಯಲ್ಲಿರುವ ಪ್ರತಿಭೆಗಳಿಂದಾಗಿ ಈ ಕಿರಿಯ ಐಐಟಿಯಲ್ಲಿನ ವಿದ್ಯಾರ್ಥಿಗಳು ಗಣನೀಯ ನೆರವು ಪಡೆಯುತ್ತಾರೆ. ಈ ಶ್ರೇಷ್ಠ ಕಲಿಕಾ ಕೇಂದ್ರವು ಬೆಳವಣಿಗೆ ಹೊಂದುವ ಮತ್ತು ಮುಂದಿನ ಹಂತಕ್ಕೆ ಹೋಗಲು ಬೇಕಾದ ಸಾಕಷ್ಟು ಸಾಮರ್ಥ್ಯವನ್ನು ಹೊಂದಿದೆ ಎಂದು ಜಗದೀಪ್ ಧನಕರ್ ಹೇಳಿದರು.


Spread the love

LEAVE A REPLY

Please enter your comment!
Please enter your name here