ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನಾಲ್ಕನೇ ತರಗತಿ ಓದಿದ್ದ ಲಿಂ. ಗುರು ಅನ್ನದಾನ ಸ್ವಾಮೀಜಿಗಳು ವಿಶ್ವ ವಿದ್ಯಾಲಯದ ಸ್ಥಾಪನೆಯ ಉತ್ಕೃಷ್ಟ ಚಿಂತನೆ ಹೊಂದಿದ್ದರು. ಶಿಕ್ಷಣದ ಬಗ್ಗೆ ಅತೀವ ಕಾಳಜಿ, ಅದರಲ್ಲೂ ಬಡ ಮಕ್ಕಳ ವಿದ್ಯಾಭ್ಯಾಸದ ಕುರಿತಾಗಿ ಅವರಿಗಿದ್ದ ಉದಾತ್ತ ಆಲೋಚನೆಗಳು ಹಾಗೂ ಮುಂದಾಲೋಚನೆಯ ಫಲ ಸ್ವರೂಪವಾಗಿಯೇ ಸ್ವಾತಂತ್ರ್ಯ ಪೂರ್ವದಲ್ಲಿಯೇ ನರೇಗಲ್ಲನಲ್ಲಿ ವಿದ್ಯಾಸಂಸ್ಥೆಗಳು ಆರಂಭವಾದವು ಎಂದು ಉಪನ್ಯಾಸಕ ಎಫ್.ಎನ್. ಹುಡೇದ ಹೇಳಿದರು.
ಪಟ್ಟಣದ ಶ್ರೀ ಅನ್ನದಾನ ವಿಜಯ ಬಾಲಕಿಯರ ಪ್ರೌಢಶಾಲೆಯಲ್ಲಿ ಸನ್ 2025-26ನೇ ಸಾಲಿನ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ, ಶಾಲಾ ಸಂಸ್ಥಾಪಕರ ದಿನಾಚರಣೆ, ಶಾಲಾ ಸಂಸತ್ ಸದಸ್ಯರ ಪ್ರಮಾಣ ವಚನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೂಜ್ಯರ ತಪಃಶಕ್ತಿ, ಇಚ್ಛಾಶಕ್ತಿ, ಕಾಯಕ ಶಕ್ತಿಗಳಿಂದ ಆರಂಭಗೊಂಡ ಹಲವು ಸಂಸ್ಥೆಗಳಲ್ಲಿ ಒಂದಾಗಿರುವ ಶ್ರೀ ಅನ್ನದಾನ ವಿಜಯ ಬಾಲಕಿಯರ ಪ್ರೌಢಶಾಲೆ ನರೇಗಲ್‌ನ ಮಾದರಿ ವಿದ್ಯಾಸಂಸ್ಥೆಯಾಗಿದೆ. ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಶಾಲೆಯು ಸಂಸ್ಥಾಪಕರ ದಿನ ಆಚರಣೆ ಮಾಡುತ್ತಿರುವದು ಶ್ಲಾಘನೀಯ ಎಂದರು.
ಶಾಲೆಯ ಆಡಳಿತ ಮಂಡಳಿ ಚೇರಮನ್ ವೀರಣ್ಣ ಹಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು. ನೂತನವಾಗಿ ಆಯ್ಕೆಯಾದ ಶಾಲಾ ಸಂಸತ್ತಿನ ಪದಾಧಿಕಾರಿಗಳಿಗೆ ಶಿಕ್ಷಕ ಎಸ್. ಶಿವಮೂರ್ತಿ ಪ್ರಮಾಣ ವಚನ ಬೋಧಿಸಿದರು. 2025ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿನಿಯರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತಾಧಿಕಾರಿ ಎನ್.ಆರ್. ಗೌಡರ ವಹಿಸಿದ್ದರು. ಆಡಳಿತ ಮಂಡಳಿ ಸದಸ್ಯರಾದ ನಿಂಗನಗೌಡ ಲಕ್ಕನಗೌಡರ, ಮಲ್ಲಿಕಾರ್ಜುನಪ್ಪ ಮೆಣಸಗಿ, ಅಂದಾನಪ್ಪ ಬೂದಿಹಾಳ, ಬಿ.ಡಿ. ಯರಗೊಪ್ಪ, ಎಂ.ಎಸ್. ಅತ್ತಾರ, ಅರುಣಕುಮಾರ, ಎಸ್.ಎಫ್. ಧರ್ಮಾಯತ, ಆರ್.ಎಂ. ಗುಳಬಾಳ, ಗೀತಾ ಭೋಪಳಾಪುರ, ಪ್ರಶಿಕ್ಷಣಾರ್ಥಿ ದೀಪಾ ರಡ್ಡೇರ, ಜ್ಯೋತಿ ಪೂಜಾರ, ವೀರೇಶ ಚುಳಕಿ, ಸಂಗಮೇಶ ಕುರಡಗಿ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಎಸ್.ಎನ್. ಹೂಲಗೇರಿ ಸ್ವಾಗತಿಸಿದರು, ಪ್ರಿಯಾ ಹೊನ್ನಪ್ಪಗೌಡರ ಹಾಗೂ ಗೋದಾವರಿ ಕಮ್ಮಾರ ನಿರೂಪಿಸಿದರು, ಎ.ಟಿ. ಮಳ್ಳಳ್ಳಿ ವಂದಿಸಿದರು.



