ಶಿವನ ಅವತಾರಿಯಂತಿದ್ದ ಶ್ರೀಗಳು

0
Spread the love

ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶ ಕೊಟ್ಟ ರಂಭಾಪುರಿ ಪೀಠದ ಯುಗಪುರುಷ ಲಿಂ. ಶ್ರೀಮದ್ ರಂಭಾಪುರಿ ವೀರಸಿಂಹಾನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ವೀರಗಂಗಾಧರ ಭಗವತ್ಪಾದಗಳವರ 43ನೇ ಪುಣ್ಯಾರಾಧನೆ ಅ.9ರಂದು ಜರುಗಲಿದೆ. ಚಿಕ್ಕಂದಿನಿಂದಲೇ ಆಧ್ಯಾತ್ಮದ ಕಡೆಗೆ ಒಲವು. ಪ್ರಾಥಮಿಕ ಶಿಕ್ಷಣವನ್ನು ಅಲ್ಲಿಯೇ ಪೂರೈಸಿ ಹೆಚ್ಚಿನ ಅಭ್ಯಾಸಕ್ಕೆ ಸೋಲ್ಲಾಪೂರಕ್ಕೆ ದಯಮಾಡಿಸಿದರು. ಅಲ್ಲಿ ವೇದಾಗಮ ತರ್ಕಶಾಸ್ತ್ರ, ನ್ಯಾಯಶಾಸ್ತ್ರ ಅಭ್ಯಾಸಗೈಯುತ್ತಿರುವಾಗಲೇ ಇವರ ವಿಶಿಷ್ಟ ವ್ಯಕ್ತಿತ್ವ ಕಂಡು ಬೆಂಗಳೂರು ಮಹಾಂತರಮಠದ ಪಟ್ಟಾಧ್ಯಕ್ಷರಾಗಿ ಆಯ್ಕೆಯಾಗಿದ್ದು ನಾಡಿನ ಭಾಗ್ಯ.

Advertisement

ಅಂದಿನ ರಂಭಾಪುರಿ ಪೀಠದ 118ನೇ ಶ್ರೀ ಜಗದ್ಗುರು ಶಿವಾನಂದ ರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ಅವಿರತ ಸೇವೆಗೈದು ಅವರ ಹೃದಯ ಗೆದ್ದು ಶ್ರೀ ಗಂಗಾಧರ ಶಿವಾಚಾರ್ಯರರು 15/05/1947ರಂದು ವೀರಸಿಂಹಾಸನದ ಮೇಲೆ ಕುಳ್ಳಿರಿಸಿ ಸುವರ್ಣ ಕಿರಿಟವನ್ನು ಧರಿಸಿ ರಂಭಾಪುರಿ ಪೀಠದ 198ನೇ ಪೀಠಾಧ್ಯಕ್ಷರಾಗಿ ಶ್ರೀ ಜಗದ್ಗುರು ಪ್ರಸನ್ನ ರೇಣುಕವೀರಗಂಗಾಧರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರೆಂದು ನೂತನ ಅಭಿದಾನವನ್ನು ಹೊಂದಿದರು.

ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಭಗವತ್ಪಾದರು ಶಿವ ಅವತಾರಿಯಂತಿದ್ದರು. ಅವರ ನಡೆ ನುಡಿಗಳಲ್ಲಿ ಸಿಂಹಗರ್ಜನೆ ತುಂಬಕೊಡಿತ್ತು. ಪಂಚಪೀಠದ ಪರಂಪರೆಯಲ್ಲಿ ಅತ್ಯಂತ ವಿಲಕ್ಷಣವಾದ ಸಾಧನೆಯನ್ನು ಮಾಡುವ ಮೂಲಕ ನೇರವಾಗಿ ಜನಮನವನ್ನು ತಲುಪಿದ ಕೀರ್ತಿ ಅವರದು. ಶಿವಪೂಜೆಯ ಪರ್ಯಾಯ ನಾಮದಂತಿದ್ದ ಪರಮಪೂಜ್ಯರು ಶಿವಪೂಜೆಗೆ ಕುಳಿತುಕೊಂಡರೆ ಇಹಲೋಕವನ್ನೇ ಮರೆಯುತ್ತಿದ್ದರು. ಅವರು ಶಿವಪೂಜೆಗೆ ಕುಳಿತರೆ ಕೈಲಾಸವೇ ಕುತೂಹಲದಿಂದ ಕೆಳಗಿಳಿದು ಅವರನ್ನು ನೋಡಲು ಬರುತ್ತಿದೆ ಎಂದು ಭಾಸವಾಗುತ್ತಿತ್ತು. ಅಷ್ಟೊಂದು ವೈಭವದ ಮತ್ತು ಅಲಂಕಾರ ಪೂಜೆಯನ್ನು ಮಾಡುವವರು ಅಪರೂಪ. ಪೂಜಾವಿಧಾನದಲ್ಲಿ ಅವರದು ದಾಖಲಾತ್ಮಕ ಸಾಧನೆ. ಪೂರ್ಣಕುಂಭಗಳನ್ನು ಖುದ್ದಾಗಿ ಹೊತ್ತು ತರುತ್ತಿದ್ದ ಆ ವೈಭವವನ್ನು ನೋಡಿ ಸಂತೋಷಪಟ್ಟ ಜನ ಈಗಲೂ ಇದ್ದಾರೆ.

ಬದುಕಿನ ಎಲ್ಲ ಮುಖಗಳೊಂದಿಗೆ ತಮ್ಮನ್ನು ಗುರುತಿಸಿಕೊಳ್ಳಲು ಇಷ್ಟಪಡುತ್ತಿದ್ದ ಪರಮಪೂಜ್ಯರು ಒಮ್ಮೆ ರಾಜವೇಷಗಳನ್ನು ಧರಿಸಿಕೊಂಡರೆ ಇನ್ನೊಮ್ಮೆ ಗೋಣಿಚೀಲವನ್ನು ಸುತ್ತಿಕೊಂಡು ನಿಲ್ಲುತ್ತಿದ್ದರು. ತಮ್ಮ ಸಲಕ್ಷಣ ವ್ಯಕ್ತಿತ್ವವನ್ನು ವಿಲಕ್ಷಣ ವರ್ಚಸ್ಸಿನಿಂದ ತುಂಬಿ ನಾಡಿನ ಮೂಲೆ ಮೂಲೆಯಲ್ಲಿ ಜನರ ಆಭಿಮಾನ ಭಾಜನರಾಗಿದ್ದರು. ಪೂಜ್ಯರ ಹೆಸರು ಕೇಳಿದರೆ ಸಾಕು ಜನರ ಮೈಮನಗಳು ರೋಮಾಂಚನಗೊಳ್ಳುತ್ತಿತ್ತು. ಸದೃಢಕಾಯರಾದ ಪರಮಪೂಜ್ಯರದು ಸಿಂಹಮಣಿ, ಅವರ ತಪಃಶಕ್ತಿಯಲ್ಲಿ ಮತ್ತು ಸಂಕಲ್ಪಶಕ್ತಿಯಲ್ಲಿ ಸಿಂಹಬಲವಿತ್ತು. ತಮ್ಮ ತಪೋಬಲದಿಂದ ಪಂಚಭೂತಗಳನ್ನೇ ಅಲುಗಾಡಿಸಿದ ಖ್ಯಾತಿ ಅವರದು. ಅವರ ಕಣ್ಣುಗಳಲ್ಲಿ ಮಿಂಚಿನ ಬಳ್ಳಿಗಳಿದ್ದವು.

ಯಡೆಯೂರ ಕ್ಷೇತ್ರದಲ್ಲಿ 1947ರಲ್ಲಿ ಅವರ ಪ್ರಥಮ ದಸರಾ ದರ್ಬಾರ್ ನಡೆದಾಗ ಅಂದಿನ ಮೈಸೂರು ಮಹಾರಾಜರು ಹಾಗೂ ಪರಿವಾರವರು ಬಂದು ದರ್ಶನಾಶೀರ್ವಾದ ಪಡೆದರು. ಅರಮನೆಯ ಗೌರವ ಗುರುಕಾಣಿಕೆ ಸಲ್ಲಿಸಿದರು. 1958ರಲ್ಲಿ ತುಮಕೂರು ಮಹಾನಗರದಲ್ಲಿ ನಡೆದ ಜಗದ್ಗುರುಗಳವರ ಪೂಜಾನುಷ್ಠಾನದಲ್ಲಿ ಅಂದಿನ ಮೈಸೂರು ಅರಸರಾದ ಶ್ರೀ ಜಯಚಾಮರಾಜ ಒಡೆಯರು ದರ್ಶನಾಶೀರ್ವಾದ ಪಡೆದು, ಧರ್ಮದ ವಿಚಾರಗಳನ್ನು ಹಂಚಿಕೊಂಡರು.

ಅಂದು ಜಗದ್ಗುರುಗಳು ಕೊಟ್ಟ ಸಂದೇಶ ಇಂದಿಗೂ ಪ್ರಸ್ತುತ. ಕೇದಾರ ಪೀಠದ ಪಟ್ಟಾಭಿಷೇಕಕ್ಕೆ (1966) ದಯಮಾಡಿಸುವಾಗ ಮಾರ್ಗ ಮಧ್ಯದ ರಾಜಧಾನಿ ದಿಲ್ಲಿಯಲ್ಲಿ ಇಂದಿನ ರಾಷ್ಟ್ರಪತಿ ಹಾಗೂ ತತ್ವಜ್ಞಾನಿ ಡಾ. ಎಸ್. ರಾಧಾಕೃಷ್ಣನ್‌ ಅವರು ಶ್ರೀಗಳನ್ನು ತಮ್ಮ ಭವನಕ್ಕೆ ಆಮಂತ್ರಿಸಿ ಪೂಜ್ಯ ಜಗದ್ಗುರುಗಳಿಂದ ತೀರ್ಥ-ಪ್ರಸಾದವನ್ನು ಸ್ವೀಕರಿಸಿದರು. ಅವರ ಜೊತೆ ಸಂಸ್ಕೃತದಲ್ಲಿ ಮಾತನಾಡಿದ್ದು ರಾಷ್ಟ್ರಪತಿಗೆ ಅತೀವ ಸಂತೋಷ ತಂದಿತು. 1971ರಲ್ಲಿ ಬೆಂಗಳೂರಿನಲ್ಲಿ ನಡೆದ ಧನುರ್ಮಾಸ ಪೂಜಾ ಸಮಾರಂಭದಲ್ಲಿ ಅಂದಿನ ರಾಜ್ಯದ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಪೂಜೆಯಲ್ಲಿ ಭಾಗವಹಿಸಿ ಆಶೀರ್ವಾದ ಪಡೆದರು. 1978ರಲ್ಲಿ ಪೂಜ್ಯ ಜಗದ್ಗುರುಗಳ ದಸರಾ ದರ್ಬಾರ್ ಹಾಗೂ ಶರನ್ನವರಾತ್ರಿ ಸಮಾರಂಭ ಮೈಸೂರು ನಗರದ ಜಗನ್ಮೋಹನ ಅರಮನೆಯಲ್ಲಿ ನಡೆದಿತ್ತು. ಅಂದಿನ ಉಪರಾಷ್ಟ್ರಪತಿಗಳು ಹಾಗೂ ಪ್ರಬಾರಿ ರಾಷ್ಟ್ರಪತಿಗಳ ಸ್ಥಾನದಲ್ಲಿದ್ದ ಬಿ.ಡಿ. ಜತ್ತಿಯವರು ಮುಂಜಾನೆ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಯಂಕಾಲದ ದಸರಾ ದರ್ಬಾರ್‌ನಲ್ಲಿ ಪಾಲ್ಗೊಂಡು ಜಗದ್ಗುರುಗಳವರ ದರ್ಶನಾಶೀರ್ವಾದ ಪಡೆದುಕೊಂಡದ್ದಲ್ಲದೇ ತಮ್ಮ ಭಾಷಣದಲ್ಲಿ ರಂಭಾಪುರೀ ಪೀಠ ಜಗದ್ಗುರುಗಳ ದರ್ಶನಕ್ಕಾಗಿ ಬಂದಿದ್ದೇನೆ ಎಂದು ಹೇಳಿದಾಗ ಅಲ್ಲಿದ್ದ ಜನರೆಲ್ಲ ಮೂಕವಿಸ್ಮಿತರಾದರು. ಇವೆಲ್ಲವೂ ಅವರ ತಪಸ್ಸಿನ ಶಕ್ತಿ ಪ್ರಭಾವವೇ ಸರಿ.

ಪರಮಪೂಜ್ಯ ವೀರಗಂಗಾಧರ ಜಗದ್ಗುರುಗಳು ಉಳಿದೆಲ್ಲ ಸಮಾನ ಪೀಠಗಳ ಪೀಠಾಚಾರ್ಯರರನ್ನು ಆತ್ಮೀಯವಾಗಿ ಗೌರವಿಸುತ್ತಿದ್ದರು. ಅದರಂತೆ ಅವರೂ ಕೂಡಾ ಗೌರವಾದಿಗಳಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಂಡು ಕೊಳ್ಳುತ್ತಿದ್ದರು. ಪರಮಪೂಜ್ಯ ಜಗದ್ಗುರುಗಳವರ ಜನಮನದಲ್ಲಿ ಪೀಠಾಭಿಮಾನವನ್ನು ಬೆಳೆಸಿ ಆ ಅಭಿಮಾನವನ್ನೇ ಶ್ರೀ ಪೀಠದ ಆಸ್ತಿಯನ್ನಾಗಿಸಿದರು. ವೈರಾಗ್ಯ ಮತ್ತು ವೈಭವ ಇವೆರಡೂ ಅವರಲ್ಲಿ ಸಮ್ಮಿತಗೊಂಡಿದ್ದವು. ಕಾಠಿಣ್ಯತೆ ಮತ್ತು ಕೋಮಲತೆ ಅವರಲ್ಲಿ ಕೂಡಿಕೊಂಡಿತ್ತು.

ರಂಭಾಪುರೀ ಶ್ರೀ ಪೀಠಕ್ಕೆ ವೀರಪೀಠವೆಂಬ ಹೆಸರು ಅವರಿಂದಾಗಿ ಅನ್ವರ್ಥಕಗೊಂಡಿಂತೆ ಭಾಸವಾಗುತ್ತಿತ್ತು. ಶ್ರೀ ಪೀಠದ ಇತಿಹಾಸವನ್ನು ಜನರು ಕಣ್ತೆರೆದು ನೋಡುವಂತೆ ಮಾಡಿದ ಪರಮಪೂಜ್ಯರು ಜನತಾ ಜನಾರ್ಧನನನ್ನು ಹೃದಯದ ಮಧ್ಯದಲ್ಲಿ ತುಂಬಿಕೊಂಡಿದ್ದರೂ ಅಚ್ಚಳಿಯದೆ ಹಾಗೆಯೇ ಉಳಿದಿದೆ.

ಈ ವರ್ಷ ಅಕ್ಟೋಬರ್ 10ರಂದು ಲಿಂ. ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ 43ನೇ ಪುಣ್ಯಸ್ಮರಣೋತ್ಸವವನ್ನು ಮುಕ್ತಿಮಂದಿರ ಧರ್ಮಕ್ಷೇತ್ರದ ಶ್ರೀ ಷ.ಬ್ರ. ವಿಮಲರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ನಿರ್ಧರಿಸಿದ್ದು, ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಶ್ರೀ ರಂಭಾಪುರಿ ಡಾ. ಶ್ರೀ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿದೆ. ಸಮಾರಂಭದ ನೇತೃತ್ವವನ್ನು ಮುಕ್ತಿಮಂದಿರ ಧರ್ಮಕ್ಷೇತ್ರದ ಶ್ರೀ ಷ.ಬ್ರ. ವಿಮಲರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ವಹಿಸಿಕೊಳ್ಳಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಮ.ನಿ.ಪ್ರ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗೇಶ್ವರ ಸ್ವಾಮಿಗಳು ಶ್ರೀ ಕಾಡಸಿದ್ದೇಶ್ವರಮಠ ನೊಣವಿನಕೆರೆ ವಹಿಸುವರು.

ವೀರೇಶ ಎಸ್. ಕೂಗು.
ವಕೀಲರು, ತೆರಿಗೆ ಸಲಹೆಗಾರರು – ಗದಗ.


Spread the love

LEAVE A REPLY

Please enter your comment!
Please enter your name here