ದೇವನಹಳ್ಳಿ:- ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ನಂದಗುಡಿ ಗ್ರಾಮದಲ್ಲಿ ಕಿಡಿಗೇಡಿಗಳ ಗುಂಪೊಂದು ಬಾರ್ ಮಾಡಲು ಅಡ್ಡಿಯಾದ ಕಾರಣಕ್ಕೆ ರಾತ್ರೋ ರಾತ್ರಿ ಆಂಜನೇಯ ಸ್ವಾಮಿಯ ದೇವಸ್ಥಾನವನ್ನೇ ಧ್ವಂಸ ಮಾಡಿದ್ದಾರೆ.
Advertisement
ಕಳೆದ ಕೆಲ ದಿನಗಳಿಂದ ಬಾರ್ಗೆ ಅನುಮತಿ ಕೋರಿ ಕೆಲವರು ಅರ್ಜಿ ಸಲ್ಲಿಸಿದ್ದರು. ಆದರೆ ಬಾರ್ ಮಾಡಲು ಉದ್ದೇಶಿಸಿರುವ ಜಾಗದ ಬಳಿಯೇ ದೇವಸ್ಥಾನವಿದೆ. ಹೀಗಾಗಿ ಅನುಮತಿ ನೀಡಬಾರದು ಎಂದು ಅಬಕಾರಿ ಇಲಾಖೆಗೆ ದೇವಸ್ಥಾನದ ಸಮಿತಿ ಅರ್ಜಿ ಹಾಕಿತ್ತು. ಇದೇ ಕಾರಣಕ್ಕೆ ದೇವಸ್ಥಾನ ಧ್ವಂಸ ಮಾಡಲಾಗಿದೆ.
ಬೆಳಿಗ್ಗೆ ವಾಕಿಂಗ್ ಬಂದಿದ್ದವರು ದೇಗುಲ ನೆಲಸಮ ಆಗಿದ್ದನ್ನು ಗಮನಿಸಿದ್ದಾರೆ. ಈ ಬಗ್ಗೆ ನಂದಗುಡಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಪೊಲೀಸರು ಮತ್ತು ದೇವಸ್ಥಾನದ ಭಕ್ತರು ದೌಡಾಯಿಸಿದ್ದಾರೆ. ಪೋಲೀಸರು ಘಟನೆ ಸಂಬಂಧ ತನಿಖೆ ಕೈಗೊಂಡಿದ್ದಾರೆ.


