ವಿಜಯಸಾಕ್ಷಿ ಸುದ್ದಿ, ಗದಗ : ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಕಳೆದ ಬಾರಿ 30ನೇ ಸ್ಥಾನ ದಾಖಲಿಸಿದ್ದ ಗದಗ ಜಿಲ್ಲೆ, ಈ ಬಾರಿ 32ನೇ ಸ್ಥಾನಕ್ಕೆ ಕುಸಿಯುವ ಮೂಲಕ ರಾಜ್ಯಮಟ್ಟದಲ್ಲಿ ಕೊನೆಯ ಸ್ಥಾನದಲ್ಲಿದೆ. ತನ್ಮೂಲಕ ಸತತ ಮೂರು ವರ್ಷಗಳಿಂದಲೂ ಕಳಪೆ ಸಾಧನೆಯತ್ತ ಸಾಗುತ್ತಿದೆ.
ಈ ವರ್ಷದ ಫಲಿತಾಂಶದಲ್ಲಿ ಗದಗ ಜಿಲ್ಲೆ ಶೇ. 72.86 ಫಲಿತಾಂಶ ದಾಖಲಿಸಿದೆ. ಕಳೆದ ವರ್ಷದ ಫಲಿತಾಂಶ ಶೇ. 66.91 ಆಗಿತ್ತು. ಹೀಗಾಗಿ, ಒಟ್ಟಾರೆ ಫಲಿತಾಂಶದಲ್ಲಿ ಪ್ರಗತಿಯಾಗಿಲ್ಲ. ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ತಾಂಡಾದ ನಿವಾಸಿ, ಧಾರವಾಡ ಕೆಇ ಬೋರ್ಡ್ ಪಿಯು ಕಾಲೇಜಿನ ವಿದ್ಯಾರ್ಥಿನಿ ರವಿನಾ ಸೋಮಪ್ಪ ಲಮಾಣಿ ಕಲಾ ವಿಭಾಗದಲ್ಲಿ 600ಕ್ಕೆ 595 ಅಂಕ ಪಡೆಯುವ ಮೂಲಕ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
2023-24ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗೆ ಜಿಲ್ಲೆಯಲ್ಲಿ 4834 ಗಂಡು ಮಕ್ಕಳು, 5836 ಹೆಣ್ಣುಮಕ್ಕಳು ಸೇರಿದಂತೆ ಒಟ್ಟು 10670 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವುಗಳಲ್ಲಿ 3043 ಗಂಡು ಮಕ್ಕಳು, 4731 ಹೆಣ್ಣು ಮಕ್ಕಳು ಸೇರಿ ಒಟ್ಟು 7774 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಶೇ. 62.94ರಷ್ಟು ಗಂಡು ಮಕ್ಕಳು ಉತ್ತೀರ್ಣರಾಗಿದ್ದರೆ, ಶೇ. 81.06ರಷ್ಟು ಹೆಣ್ಣುಮಕ್ಕಳು ಉತ್ತೀರ್ಣರಾಗಿದ್ದಾರೆ.
ಜಿಲ್ಲೆಯ ದ್ವಿತೀಯ ಪಿಯು ಫಲಿತಾಂಶ ಮತ್ತೊಮ್ಮೆ ಕುಸಿತ ಕಂಡಿರುವುದು ಬೇಸರ ತಂದಿದೆ. ಫಲಿತಾಂಶ ಕುಸಿತಕ್ಕೆ ಅನೇಕ ಕಾರಣಗಳಿದ್ದು, ಆ ಬಗ್ಗೆ ಅವಲೋಕನ ನಡೆಸಿ, ಭವಿಷ್ಯದಲ್ಲಿ ಉತ್ತಮ ಫಲಿತಾಂಶ ಸಾಧಿಸಲು ಮತ್ತು ಸುಧಾರಣೆಗೆ ಇನ್ನಷ್ಟು ಕಠಿಣ ಪ್ರಯತ್ನ ಮಾಡಲಾಗುವುದು.
– ಜಿ.ಎಂ. ಕುರ್ತಕೋಟಿ.
ಉಪನಿರ್ದೇಶಕರು, ಪ.ಪೂ ಶಿಕ್ಷಣ ಇಲಾಖೆ, ಗದಗ.