ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ದಿನವೂ ಪ್ರಾಯೋಗಿಕ ತರಗತಿ, ಮೊಬೈಲ್, ಕಂಪ್ಯೂಟರ್, ಕ್ಲಾಸ್‌ರೂಂನಲ್ಲಿ ಇಂಗ್ಲೀಷ್ ಭಾಷೆಯೊಂದಿಗೆ ಸಂವಹನ-ಶಿಕ್ಷಣದಲ್ಲಿರುವ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಬಿಳಿ ಶರ್ಟ್, ಧೋತಿ, ಜುಬ್ಬಾ-ಪೈಜಾಮ್ ಮತ್ತು ಕೊರಳಲ್ಲಿ ಹಳದಿ-ಕೆಂಪು ಬಣ್ಣದ ಕನ್ನಡದ ಶಾಲು, ವಿದ್ಯಾರ್ಥಿನಿಯರು ಗ್ರಾಮೀಣ ಶೈಲಿಯ ಇಳಕಲ್, ಶಿಗ್ಲಿ ಸೀರೆ-ಕುಪ್ಪಸ ತೊಟ್ಟು ಕನ್ನಡದ ಜಾನಪದ ಹಾಡುಗಳಿಗೆ ಕುಣಿದು ಕುಪ್ಪಳಿಸಿ ಅಗಡಿ ಇಂಜಿನಿಯರಿಂಗ್ ಕಾಲೇಜಿನ ಕ್ಯಾಂಪಸ್‌ನಲ್ಲಿ ಸಂಭ್ರಮದಿಂದ ಕನ್ನಡದ ಹಬ್ಬ ಆಚರಿಸಿದರು.
ಕರ್ನಾಟಕ ರಾಜ್ಯೋತ್ಸವ ಹಾಗೂ ಅಗಡಿ ಕನ್ನಡ ಸಂಘದ 11ರ ಸಂಭ್ರಮದ ಅಂಗವಾಗಿ ಪಿಯುಸಿ ಮತ್ತು ಇಂಜಿನಿಯರಿಂಗ್ ಕಾಲೇಜಿನ ಎಲ್ಲ ವಿಭಾಗದಿಂದ ಕೈಗೊಂಡ `ಅಗಡಿ ಕನ್ನಡ ಹಬ್ಬ’ ವಿದ್ಯಾರ್ಥಿಗಳಲ್ಲಿ ಸಂಭ್ರಮವನ್ನುಂಟುಮಾಡಿತು. ಕಾಲೇಜಿನೆಲ್ಲೆಡೆ ಕನ್ನಡದ ಬಾವುಟಗಳು ರಾರಾಜಿಸಿ ಕನ್ನಡ ಕಂಪು ಮೇಳೈಸಿತ್ತು. ಕನ್ನಡ ಹಬ್ಬದ ನಿಮಿತ್ತ ಒಂದು ವಾರ ಮೊದಲೇ ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಂದ ಕನ್ನಡದ ಕುರಿತ ಪ್ರಬಂಧ, ಚರ್ಚಾ ಸ್ಪರ್ಧೆ, ನೃತ್ಯ, ಹಾಡು, ಸಂಗೀತ, ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿದ್ಯಾರ್ಥಿನಿಯರು ಪೂರ್ಣಕುಂಭ, ವಿವಿಧ ವೇಷಭೂಷಣ ಧರಿಸಿ ಭುವನೇಶ್ವರಿ ತಾಯಿಯ ಭಾವಚಿತ್ರ ಮೆರವಣಿಗೆ ಮಾಡಿದರು. ಕನ್ನಡ ಹಬ್ಬದ ಸಮಾರೋಪ ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ಪ್ರಾಚಾರ್ಯ ಡಾ. ಪರಶುರಾಮ ಬಾರಕಿ ಮಾತನಾಡಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಎಷ್ಟೇ ಉನ್ನತ ಹುದ್ದೆ, ಐಟಿಬಿಟಿಯಲ್ಲಿ ಉದ್ಯೋಗ ಹೊಂದಿದರೂ ಕನ್ನಡ ಭಾಷೆ, ನೆಲ, ಜಲದ ಬಗ್ಗೆ ಪ್ರೀತಿ, ಅಭಿಮಾನ, ಸ್ವಾಭಿಮಾನ ಕಡಿಮೆಯಾಗಬಾರದು ಎಂದರು.
ಅಗಡಿ ಸನ್‌ರೈಸ್ ಆಸ್ಪತ್ರೆಯ ಡಾ. ರಾಜಶೇಖರ ಮೂಲಿಮನಿ, ಡಾ. ಆರ್.ಎಂ. ಪಾಟೀಲ, ಪ್ರೊ. ವಿಕ್ರಮ ಶಿರೋಳ, ಡಾ. ಗಿರೀಶ ಯತ್ನಳ್ಳಿ, ಡಾ. ಸುಜಾತಾ ಸಂಗೂರ, ಪಿಯು ಕಾಲೇಜು ಪ್ರಾಚಾರ್ಯರಾದ ಶುಭಾ ಡಿ, ಕನ್ನಡ ಹಬ್ಬದ ಸಂಯೋಜಕರಾದ ಪ್ರೊ. ಸೋಮಶೇಖರ ಕೆರಿಮನಿ, ಪ್ರೊ. ಪ್ರತಿಮಾ ಮಹಾಪುರುಷ, ಪ್ರೊ. ರಾಜೇಶ್ವರಿ ಗಾಮನಗಟ್ಟಿ ಸೇರಿ ಕಾಲೇಜಿನ ಪ್ರಾಧ್ಯಾಪಕ ವೃಂದ, ಸಿಬ್ಬಂದಿ, ವಿದ್ಯಾರ್ಥಿಗಳಿದ್ದರು. ವಿದ್ಯಾರ್ಥಿನಿಯರಾದ ಸುಪ್ರಿಯಾ, ಸ್ಮೀತಾ, ವೈಷ್ಣವಿ, ಪ್ರತಿಮಾ ನಿರೂಪಿಸಿದರು.
ಜಾನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ ಮಾತನಾಡಿ, ಇಂದಿನ ಮಾಹಿತಿ-ತಂತ್ರಜ್ಞಾನ ಯುಗದಲ್ಲಿ ಇಂಗ್ಲಿಷ್ ಸೇರಿ ಇತರೇ ಭಾಷೆಗಳ ಜ್ಞಾನ ಅಗತ್ಯ. ಆದರೆ ಕನ್ನಡ ತಾಯಿಯ ಮಕ್ಕಳಾದ ನಾವೆಲ್ಲ ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ಕನ್ನಡದಲ್ಲೇ ಮಾತನಾಡುತ್ತೇನೆ, ಬರೆಯುತ್ತೇನೆ, ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆ, ಕನ್ನಡೇತರರಿಗೆ ಕನ್ನಡ ಕಲಿಸುತ್ತೇನೆ, ಕನ್ನಡ ನುಡಿ, ಸಂಸ್ಕೃತಿ, ಪರಂಪರೆ ಉಳಿಸಲು ಸದಾ ಕಟಿಬದ್ಧರಾಗೋಣ ಮತ್ತು ಕನ್ನಡದ ಅಂತಃಸತ್ವವನ್ನು ಹೆಚ್ಚಿಸುವ ಸಂಕಲ್ಪ ಮಾಡೋಣ ಎಂದರು.


