ಗದಗ: ರೈತನು ಭೂಮಿಯಲ್ಲಿ ಬೆಳೆಯನ್ನು ಬೆಳೆಯುವಂತೆ, ಬಳಗಾನೂರಿನ ಶರಣ ಬಳಗದವರು ಆತ್ಮದಲ್ಲಿ ಭಕ್ತಿಯನ್ನು ಬೆಳೆಸಿದ್ದಾರೆ ಎಂದು ಬಳಗಾನೂರಿನ ಚನ್ನವೀರ ಶರಣರ ಶ್ರೀಮಠದ ಪೂಜ್ಯ ಶ್ರೀ ಶಿವಶಾಂತವೀರ ಶರಣರು ಹೇಳಿದರು.
ಚಿಕೇನಕೊಪ್ಪದ ಚನ್ನವೀರ ಶರಣರ 31ನೇ ಪುಣ್ಯಸ್ಮರಣೋತ್ಸವ ಮತ್ತು ಶ್ರೀಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ನಡೆದ ಪಾದಯಾತ್ರೆಯಲ್ಲಿ ಅವರು ಮಾತನಾಡಿದರು. ಬಳಗಾನೂರು ಗ್ರಾಮವು ಗಾತ್ರದಲ್ಲಿ ಚಿಕ್ಕದಾದರೂ ಹೃದಯ ಶ್ರೀಮಂತಿಕೆಯಲ್ಲಿ ಬಹಳ ದೊಡ್ಡದು. ಭಕ್ತಿ, ಧರ್ಮ, ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಈ ಪಾದಯಾತ್ರೆಯ ಉದ್ದೇಶ ಎಂದು ಹೇಳಿದರು.
ಶರಣರ ದೃಷ್ಟಿಯಲ್ಲಿ ಸಂಸಾರ ಗಾಳಿಗೆ ಅಲುಗುವ ದೀಪದಂತಿದ್ದು, ಚಿನ್ನ, ಬೆಳ್ಳಿ, ಭೂಮಿ ಮತ್ತು ಭೌತಿಕ ಸಂಪತ್ತು ಶಾಶ್ವತವಲ್ಲ. ದೇವರ ಕೃಪೆ, ದಾನ-ಧರ್ಮ ಮತ್ತು ಸೇವೆಯೇ ನಿಜವಾದ ಸುಖವನ್ನು ನೀಡುತ್ತದೆ ಎಂದು ತಿಳಿಸಿದರು.
ಈ ಸಂದರ್ಭ ಸೊರಟೂರು–ಮಲ್ಲಗಿರಿಸಮುದ್ರದ ಓಂಕಾರೇಶ್ವರ ಶ್ರೀಮಠದ ಪೂಜ್ಯ ಶ್ರೀ ಪಕೀರೇಶ್ವರ ಶ್ರೀಗಳು ಮಾತನಾಡಿ, ಪಾದಯಾತ್ರೆಯಿಂದ ಮನಸ್ಸು ಮತ್ತು ದೇಹಕ್ಕೆ ಶಾಂತಿ ಸಿಗುತ್ತದೆ. ದಾಸೋಹ, ಸ್ವಚ್ಛತೆ, ಸೇವೆ ಮಾಡಿದರೆ ಶರಣರು ಜ್ಞಾನ ಬೆಳಕು ನೀಡುತ್ತಾರೆ ಎಂದರು.
ಪಾದಯಾತ್ರೆಯಲ್ಲಿ ವಚನಗಾನ, ಭಕ್ತಿ ಗೀತೆಗಳು ಭಕ್ತಿಮಯ ವಾತಾವರಣವನ್ನು ಸೃಷ್ಟಿಸಿತು. ಸೇವಾ ಭಜನಾ ಸಂಘದವರು ಸಾಥ್ ನೀಡಿದರು. ಮಾರ್ಗದ ತುಂಬಾ ರಂಗೋಲಿ, ದೀಪಾಲಂಕಾರ ಮತ್ತು ತೋರಣಗಳಿಂದ ಶ್ರೀಗಳನ್ನು ಭಕ್ತಿಯಿಂದ ಬರಮಾಡಿಕೊಳ್ಳಲಾಯಿತು.
ಶುಕ್ರವಾರ ಬೆಳಗ್ಗೆ 6 ಗಂಟೆಗೆ ಬಾವಿ ಬಸವಣ್ಣ ದೇವಸ್ಥಾನದಿಂದ ಎರಡನೇ ದಿನದ ಪಾದಯಾತ್ರೆ ಆರಂಭವಾಗಿ ವಿವಿಧ ಪ್ಲಾಟ್‌ಗಳ ಮೂಲಕ ಶ್ರೀಮಠಕ್ಕೆ ತಲುಪಲಿದೆ. ಬಳಿಕ ತುಲಾಭಾರ, ಆಶೀರ್ವಚನ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.



