ದೇಗುಲಗಳು ಶಾಶ್ವತವಾದ ನಂದಾದೀಪವಿದ್ದಂತೆ: ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ದೇವಸ್ಥಾನ, ಹಬ್ಬಹರಿದಿನ, ಸಂಪ್ರದಾಯ, ಆಚರಣೆಗಳು ನಮ್ಮ ಸಂಸ್ಕೃತಿಯ ಪ್ರತೀಕವಷ್ಟೇ ಅಲ್ಲದೇ ಪರಸ್ಪರ ಸಹೋದರತ್ವ, ಸೌಹಾರ್ದತೆ, ಮಾನವೀಯ ಮೌಲ್ಯಗಳನ್ನು ಬಿತ್ತುವದರೊಂದಿಗೆ ಸಮಾಜವನ್ನು ಸನ್ಮಾರ್ಗದತ್ತ ಸಾಗಿಸುವ ಚೈತನ್ಯ ಶಕ್ತಿಯಾಗಿವೆ ಎಂದು ಕನ್ನೇರಿಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.

Advertisement

ಪಟ್ಟಣದ ಐತಿಹಾಸಿಕ ಪ್ರಸಿದ್ಧ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಸೋಮವಾರ ಲಕ್ಷ ದೀಪೋತ್ಸವ ಸಮಾರಂಭ ಉದ್ಘಾಟಿಸಿ ಶ್ರೀಗಳು ಮಾತನಾಡಿದರು.

ದೇಗುಲಗಳು ಶಾಶ್ವತವಾದ ನಂದಾದೀಪವಿದ್ದಂತೆ. ಇಲ್ಲಿ ದೀಪ ದೀಪದಿಂದ ಬೆಳಗಿಸುವ ಜತೆಗೆ ಮನಸ್ಸಿಂದ ಮನಸ್ಸನ್ನು ಬೆಳಗುವ ಧರ್ಮ ಮತ್ತು ಆಧ್ಯಾತ್ಮದ ದೀಪ ಬೆಳಗಿಸಿಕೊಳ್ಳಬೇಕು. ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತ ದೇಶದಲ್ಲಿ ವೇಷ-ಭೂಷಣ, ಭಾಷೆ, ಆಹಾರ, ಪ್ರದೇಶ ಭಿನ್ನವಾಗಿದ್ದರೂ ನಮ್ಮಲ್ಲಿರುವ ಸಂಪ್ರದಾಯ, ಸಂಸ್ಕೃತಿಗಳು ಇಡಿ ಜಗತ್ತಿಗೆ ಶ್ರೇಷ್ಠವಾಗಿವೆ. ದೇವಸ್ಥಾನ, ಹಬ್ಬಹರಿದಿನಗಳು, ಜಾತ್ರೆಗಳು ಮನುಷ್ಯರಷ್ಟೇ ಅಲ್ಲದೇ ಪಶು-ಪಕ್ಷಿ, ನಿಸರ್ಗದೊಂದಿಗೆ ಬೆಸೆಯುತ್ತವೆ. ಹಬ್ಬಗಳು ಮನಸ್ಸುಗಳನ್ನು ಜೋಡಿಸುತ್ತವೆ. ಮನುಷ್ಯನಲ್ಲಿ ಪ್ರೀತಿ, ನಿಸ್ವಾರ್ಥ ಭಾವನೆ ಇದ್ದರೆ ನೀರು ತೀರ್ಥವಾಗುತ್ತದೆ, ಅನ್ನ ಪ್ರಸಾದವಾಗುತ್ತದೆ ಎಂದು ನುಡಿದರು.

ದೀಪ ಬೆಳಗುವದು ಕಲ್ಯಾಣ, ಆರೋಗ್ಯ, ಸಂಪತ್ತು, ಶತ್ರುಬುದ್ಧಿ ವಿನಾಶ ಮಾಡುತ್ತದೆ. ದೀಪವೆಂದರೆ ಪ್ರಕಾಶ ಮತ್ತು ಜ್ಞಾನ. ಈ ಜ್ಞಾನದ ದೀಪ ನಮ್ಮಲ್ಲಿ ಬೆಳಗಿದರೆ ಯಾರನ್ನೂ ತಪ್ಪು ತಿಳಿಯುವದಿಲ್ಲ. ಅದಕ್ಕಾಗಿ ಇಂತಹ ದೀಪೋತ್ಸವ ಕಾರ್ಯಕ್ರಮಗಳು ನಡೆಯುತ್ತವೆ. ಪೂರ್ವದಲ್ಲಿ ಇರುವ ಶಿಕ್ಷಣ ಪದ್ಧತಿಗೂ ಈಗಿನ ಶಿಕ್ಷಣ ಪದ್ಧತಿಗೂ ಸಾಕಷ್ಟು ಬದಲಾವಣೆಗಳಾಗಿದ್ದು, ಸುಶಿಕ್ಷಿತ ಸಮಾಜದಿಂದಲೇ ಹಬ್ಬಗಳು ತೆರೆಮೆರೆಗೆ ಸರಿಯುತ್ತಿವೆ. ಲಕ್ಮೇಶ್ವರ ಒಂದು ಪವಿತ್ರವಾದ ಕ್ಷೇತ್ರವಾಗಿದ್ದು, ರಾಘವಾಂಕ ಕವಿ ಈ ಸೋಮೇಶ್ವರ ಚರಿತ್ರೆಯನ್ನು ಬರೆದ ಇತಿಹಾಸವಿದೆ. ಈ ಕ್ಷೇತ್ರದ ಮಹತ್ವ ಎಲ್ಲರಿಗೂ ತಿಳಿಯುವಂತಾಗಲಿ. ಇಂತಹ ಕಾರ್ಯಕ್ರಮಗಳು ಪ್ರತಿವರ್ಷ ನಡೆಯುತ್ತಿರಲಿ ಎಂದು ಸಲಹೆ ನೀಡಿದರು.

ಮಾಜಿ ಶಾಸಕರುಗಳಾದ ಡಿ.ಆರ್. ಪಾಟೀಲ ಮಾತನಾಡಿ, ಇತಿಹಾಸ ಪ್ರಸಿದ್ಧ ಪುಲಿಗೆರೆಯ ಶ್ರೀ ಸೋಮೇಶ್ವರ ದೇವಸ್ಥಾನವನ್ನು ಇನ್ಫೋಸಿಸ್ ಪೌಂಢೇಶನ್‌ನ ಡಾ. ಸುಧಾಮೂರ್ತಿ ಅವರು ೫ ಕೋಟಿ ರೂ ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಿ 5 ವರ್ಷಗಳ ಹಿಂದೆ ಲೋಕಾರ್ಪಣೆ ಮಾಡಿದ ಸಂದರ್ಭದಲ್ಲಿ ಲಕ್ಷದೀಪೋತ್ಸವ ಆಚರಿಸಲಾಗಿತ್ತು. ಅಂದು ಹಿರಿಯರೆಲ್ಲರೂ ತೆಗೆದುಕೊಂಡ ನಿರ್ಣಯದಂತೆ ಇದು 3ನೇ ಲಕ್ಷ ದೀಪೋತ್ಸವವಾಗಿದೆ. ಈ ಪುಣ್ಯ ಕಾರ್ಯ ನಿರಂತರ ನಡೆಯಲು ಭಕ್ತರೆಲ್ಲರ ಸಹಕಾರ ಅಗತ್ಯ ಎಂದರು.

ಹನುಮನಹಳ್ಳಿ ಶ್ರೀಗಳು ಮತ್ತು ಇಷ್ಟಲಿಂಗ ಶ್ರೀಗಳು ಉಪಸ್ಥಿತರಿದ್ದರು. ಐ್ರ‍್ರಸ್ಟ್ ಅಧ್ಯಕ್ಷ  ಚಂಬಣ್ಣ ಬಾಳಿಕಾಯಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಡಾ.ಚಂದ್ರು ಲಮಾಣಿ, ಜಿ.ಎಸ್. ಗಡ್ಡದೇವರಮಠ, ಜಿ.ಎಂ. ಮಹಾಂತಶೆಟ್ಟರ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರ್ಗಣ್ಣವರ ಮುಂತಾದವರಿದ್ದರು. ಶಂಕರ ಬಾಳಿಕಾಯಿ ಸ್ವಾಗತಿಸಿದರು, ಈಶ್ವರ ಮೆಡ್ಲೇರಿ ನಿರೂಪಿಸಿದರು.


Spread the love

LEAVE A REPLY

Please enter your comment!
Please enter your name here