ಬಿಹಾರದ ಸ್ಥಿತಿ ಕರ್ನಾಟಕಕ್ಕೂ ಬರಲಿದೆ: ಶಾಸಕ ಸಿ.ಸಿ. ಪಾಟೀಲ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಬಿಹಾರ ಜನತೆ ನರೇಂದ್ರ ಮೋದಿ, ಅಮಿತ್ ಶಾ, ನಿತೀಶ್ ಕುಮಾರ ನಾಯಕತ್ವ ಮೆಚ್ಚಿ ಆಶೀರ್ವಾದ ಮಾಡಿದ್ದಾರೆ. ರಾಷ್ಟ್ರೀಯ ಕಾಂಗ್ರೆಸ್ 4 ಸ್ಥಾನಕ್ಕೆ ಇಳಿದಿದ್ದು ದುರಂತದ ಸಂಗತಿಯಾಗಿದೆ. ಎನ್.ಡಿ.ಎ ಮೈತ್ರಿಕೂಟಕ್ಕೆ ಅಧಿಕಾರ ತಂದುಕೊಟ್ಟ ಬಿಹಾರ ಜನತೆಗೆ ಧನ್ಯವಾದಗಳು ಎಂದು ನರಗುಂದ ಮತಕ್ಷೇತ್ರದ ಶಾಸಕ ಸಿ.ಸಿ. ಪಾಟೀಲ ಹೇಳಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲೆಡೆ ಕಾಂಗ್ರೆಸ್ ಹಠಾವೋ ಅಭಿಯಾನ ಪ್ರಾರಂಭವಾಗಿದೆ. ಮುಂದೆ ಈ ವಾಕ್ಯ ಕರ್ನಾಟಕಕ್ಕೂ ಬರಲಿದೆ. ರಾಜ್ಯದಲ್ಲಿನ ಒಂದೇ ಒಂದು ರಸ್ತೆ ಗುಂಡಿ ಮುಚ್ಚಲು ಸಾಧ್ಯವಾಗದ ಸ್ಥಿತಿಯಲ್ಲಿ ರಾಜ್ಯ ಸರ್ಕಾರವಿದೆ. ಪಂಚಶೀಲಗಾರಾಂಟಿ ಪೈಕಿ ಶಕ್ತಿಯೋಜನೆ ಹೊರತುಪಡಿಸಿ ಯಾವುದೇ ಯೋಜನೆ ಸಮರ್ಪಕವಾಗಿ ಜನತೆಗೆ ತಲುಪಿಲ್ಲ. ಅಭಿವೃದ್ಧಿ ಹೊರತುಪಡಿಸಿ ಅಧಿಕಾರಕ್ಕಾಗಿ ಕುಸ್ತಿ ನಡೆಯುತ್ತಿದೆ. ಸಚಿವರು ತಮ್ಮ ಜವಾಬ್ದಾರಿ ನಿಭಾಯಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೆಳೆ ಪರಿಹಾರವನ್ನು ರಾಜ್ಯ ಸರ್ಕಾರ ಇದೂವರೆಗೂ ಬಿಡುಗಡೆ ಮಾಡುತ್ತಿಲ್ಲ. ಕೇಂದ್ರ ನೀಡಿದ ಅನುದಾನ ಮಾತ್ರ ರೈತರಿಗೆ ತಲುಪುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ರಾಜ್ಯದಲ್ಲಿ 50 ಕಬ್ಬು ತುಂಬಿದ ಲಾರಿಗಳಿಗೆ ಬೆಂಕಿ ಹಚ್ಚಲಾಗಿದೆ. ಗೃಹ ಸಚಿವರು ಮಾಹಿತಿ ಇಲ್ಲ ಎಂದು ಹೇಳುತ್ತಾರೆ. ಕೈಲಾಗದ ಸರ್ಕಾರ ನಡೆಸುವುದಕ್ಕಿಂತ ರಾಜೀನಾಮೆ ನೀಡಿ ಮತ್ತೊಮ್ಮೆ ಚುನಾವಣೆ ಎದುರಿಸುವುದು ಸೂಕ್ತ ಎಂದು ಹೇಳಿದರು.

ಹಿಂದೂತ್ವದ ಪರವಾಗಿ ದ್ವನಿ ಎತ್ತುವ ಮತ್ತು ಸಂಸ್ಕೃತಿ, ಸಂಸ್ಕಾರದ ಬಗ್ಗೆ ಭಕ್ತರಿಗೆ ಆಶೀರ್ವಚನ ನೀಡುತ್ತಿರುವ ಕನ್ಹೇರಿ ಮಠದ ಕಾಡಸಿದ್ದೇಶ್ವರ ಶ್ರೀಗಳ ವಿರುದ್ಧ ಹೇರಿರುವ ನಿರ್ಬಂಧದ ವಿರುದ್ಧ ನವೆಂಬರ್ 15ರಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಪ್ರಮುಖರಾದ ಅನಿಲ್ ಮುಳಗುಂದ, ಎಂ.ಎ. ಹಿರೇಮಠ ಸೇರಿದಂತೆ ಪಕ್ಷದ ಕಾರ್ಯಕರ್ತರಿದ್ದರು.

114 ವರ್ಷ ಬಾಳಿ-ಬದುಕಿ ಸಾಲು ಮರಗಳನ್ನು ನೆಟ್ಟ ಸಾಲುಮರದ ತಿಮ್ಮಕ್ಕನವರ ಅಗಲಿಕೆಯಿಂದ ನೋವು ಉಂಟಾಗಿದೆ. ಇದೂವರೆಗೂ 8 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಅವರು ಪೋಷಿಸಿದ್ದಾರೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ.

ಸಿ.ಸಿ. ಪಾಟೀಲ.
ಶಾಸಕರು, ನರಗುಂದ ಮತಕ್ಷೇತ್ರ.


Spread the love

LEAVE A REPLY

Please enter your comment!
Please enter your name here