ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ನಾಡಿನ ಅನ್ನದಾತ ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ಪೂರೈಸದ ರಾಜ್ಯ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡಿಸಿ ಬಿಜೆಪಿ ಶಿರಹಟ್ಟಿ ಮಂಡಳ ಹಾಗೂ ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ರೈತ ಮೋರ್ಚಾದಿಂದ ಶಾಸಕ ಡಾ. ಚಂದ್ರು ಲಮಾಣಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ. ಚಂದ್ರು ಲಮಾಣಿ, ರೈತರಿಗೆ ಸಮರ್ಪಕವಾಗಿ ಯೂರಿಯಾ ಗೊಬ್ಬರ ಸಿಗದೇ ಮಣ್ಣು ತಿನ್ನುವಂತಾಗಿದೆ. ಮಳೆ ಆರಂಭವಾದಂತೆ ಮೆಕ್ಕೆಜೋಳ ಬೆಳೆಗೆ ಮೇಲ್ಗೊಬ್ಬರವಾಗಿ ಯೂರಿಯಾ ಹೊಲದಲ್ಲಿ ಸಿಂಪಡಿಸಿದಾಗ ರೋಗ ಬಾಧೆಗೆ ತುತ್ತಾಗದೇ ಬೆಳೆ ಚೆನ್ನಾಗಿ ಬಂದರೆ ರೈತರ ಆರ್ಥಿಕ ಸಬಲತೆ ಸಾಧ್ಯ. ಪ್ರತಿವರ್ಷ ಸಮರ್ಪಕ ಯೂರಿಯಾ ಗೊಬ್ಬರ ಸಿಗದೇ ರೈತರು ಬೊಬ್ಬೆ ಹೊಡೆಯುವ ತಾಪತ್ರಯ ತಪ್ಪಿಲ್ಲ. ಇದಕ್ಕೆ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ಕಾರಣ. ತಮ್ಮ ಸರ್ಕಾರದ ತಪ್ಪು ಮುಚ್ಚಿಟ್ಟುಕೊಂಡು ರಸಗೊಬ್ಬರ ಪೂರೈಕೆಯ ದೋಷವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೃಷಿ ಸಚಿವರು ಕೇಂದ್ರ ಸರ್ಕಾರದ ಮೇಲೆ ಹೊರಿಸುವುದನ್ನು ಕೈಬಿಡಬೇಕು ಎಂದರು.
ರಾಜ್ಯಕ್ಕೆ ಪೂರೈಕೆಯಾದ ಯೂರಿಯಾ ರಸಗೊಬ್ಬರ ಕಾಳಸಂತೆಯಲ್ಲಿ ಕೇರಳಕ್ಕೆ ಸಾಗಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಒಟ್ಟಾರೆ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಕಾಂಗ್ರೆಸ್ ಅಧಿನಾಯಕ ರಾಹುಲ್ಗಾಂಧಿ ರಾಜ್ಯದಲ್ಲಿ ಕಳ್ಳಮತದಾನ ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ದೂರುವುದನ್ನು ಬಿಟ್ಟು ಹಿಂದೆ ಗಾಂಧಿ ಕುಟುಂಬದಿಂದ ನಡೆದಿದೆ ಎಂಬುದು ಮನಗಾಣಬೇಕು. ಅದು ನಡೆದ್ದದ್ದು ಸಾಬೀತಾಗಿದ್ದರೆ ಚುನಾವಣೆ ಆಯೋಗದ ವಿರುದ್ಧ ದೂರು ದಾಖಲಿಸಬಹುದ್ದಿತ್ತು. ಅದಕ್ಕೆ ಧೈರ್ಯ ಸಾಲದೇ ವಾಪಸ್ ಆಗಿದ್ದು ಅವರ ಹತಾಶತನದ ಧೋರಣೆ ತೋರಿಸುತ್ತದೆ ಎಂದು ಹೇಳಿದರು.
ಇದಕ್ಕೂ ಮೊದಲು ಪಟ್ಟಣದ ಮಾರುತಿ ದೇವಸ್ಥಾನದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ನೆಹರು ವೃತ್ತಕ್ಕಾಗಮಿಸಿ, ಅಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಬಿಜೆಪಿ ಶಿರಹಟ್ಟಿ ಮಂಡಳ ಅಧ್ಯಕ್ಷ ಸುನಿಲ ಮಹಾಂತಶೆಟ್ಟರ, ಮಂಡರಗಿ ಮಂಡಳ ಅಧ್ಯಕ್ಷ ಹೇಮಗಿರೀಶ ಹಾವಿನಾಳ, ಎಸ್.ಬಿ. ಮಹಾಜನಶೆಟ್ಟರ, ಬಿ.ಡಿ. ಪಲ್ಲೇದ ಮಾತನಾಡಿದರು.
ತಹಸೀಲ್ದಾರ ಕೆ. ರಾಘವೇಂದ್ರ ರಾವ್ ಮನವಿ ಸ್ವೀಕರಿಸಿದರು. ಈ ವೇಳೆ ಸಿ.ಸಿ. ನೂರಶೆಟ್ಟರ, ನಾಗರಾಜ ಲಕ್ಕುಂಡಿ, ವೀರಣ್ಣ ಅಂಗಡಿ, ಜೆ.ಆರ್. ಕುಲಕರ್ಣಿ, ಪಕ್ಕೀರೇಶ ರಟ್ಟಿಹಳ್ಳಿ, ತಿಮ್ಮರಡ್ಡಿ ಮರಡ್ಡಿ, ಸಂದೀಪ ಕಪ್ಪತ್ತನವರ, ಎಚ್.ಎಂ. ದೇವಗಿರಿ, ಶಿವಪ್ಪ ಲಮಾಣಿ, ಗಂಗಾಧರ ಮೆಣಸಿನಕಾಯಿ, ಉಳವೇಶ ಪಾಟೀಲ, ಪ್ರವೀಣ ಚಿಂಚಲಿ, ಶಂಕರ ಮರಾಠೆ, ಬಸವರಾಜ ವಡವಿ, ಪಕ್ಕೀರೇಶ ಕರಿಗಾರ, ರಾಜೀವರಡ್ಡಿ ಬಮ್ಮನಕಟ್ಟಿ, ಪ್ರವೀಣಗೌಡ ಪಾಟೀಲ, ಬಸವರಾಜ ನಾಯ್ಕರ, ಜಗದೀಶ ತೇಲಿ, ವಿಜಯ ಕುಂಬಾರ, ಅಕ್ಬರ ಯಾದಗಿರಿ ಮುಂತಾದವರು ಉಪಸ್ಥಿತರಿದ್ದರು.
2017ರಲ್ಲಿ ಮುಂಡರಗಿ, ಶಿರಹಟ್ಟಿ ಹಾಗೂ ಗದಗ ತಾಲೂಕಿನ ವ್ಯಾಪ್ತಿಯ 20 ಕೆರೆಗಳಿಗೆ ಜಾಲವಾಡಗಿ ಏತ ನೀರಾವರಿ ಯೋಜನೆಯಿಂದ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಇದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಮೌನ ವಹಿಸಿದ್ದು ಏಕೆ ಎಂದು ಪ್ರಶ್ನಿಸಿದರಲ್ಲದೆ, ತಿಂಗಳೊಳಗೆ ಕೆರೆ ತುಂಬಿಸುವ ಯೋಜನೆ ಆರಂಭಿಸದಿದ್ದರೆ ಎಲ್ಲ ತಾಲೂಕಿನ ರೈತರೊಡಗೂಡಿ ಪಾದಯಾತ್ರೆ ನಡೆಸುವ ಮೂಲಕ ಸರ್ಕಾರದ ಆಡಳಿತ ವೈಫಲ್ಯದ ವಿರುದ್ಧ ಹೋರಾಟ ಮಾಡಲಾಗುತ್ತದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಎಚ್ಚರಿಸಿದರು.



