ಬಿಗ್ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಗಿಲ್ಲಿ ನಟ ಅಭಿಮಾನಿಗಳ ಅಪಾರ ಪ್ರೀತಿಯಿಂದ ತುಂಬಿ ಹೋಗಿದ್ದಾರೆ. ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು, ದೇಶದ ನಾನಾ ಭಾಗಗಳಿಂದ ಹಾಗೂ ವಿದೇಶಗಳಿಂದ ಬಂದ ಬೆಂಬಲಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ವಿಡಿಯೋದಲ್ಲಿ ಮಾತನಾಡಿದ ಅವರು, “ನಾನು ಬಿಗ್ಬಾಸ್ ಮನೆಯಲ್ಲಿದ್ದಾಗ ಹೊರಗೆ ಇಷ್ಟು ದೊಡ್ಡ ಮಟ್ಟದ ಸಪೋರ್ಟ್ ಸಿಗುತ್ತಿದೆ ಎಂಬುದನ್ನು ಕನಸಲ್ಲಿಯೂ ಅಂದುಕೊಂಡಿರಲಿಲ್ಲ. ಈಗ ಹೊರಗೆ ಬಂದು ನೋಡಿದ ಮೇಲೆ ಮನಸ್ಸು ತುಂಬಾ ಖುಷಿಯಾಗಿದೆ. ನಿಜಕ್ಕೂ ನಂಬೋದಕ್ಕೆ ಆಗುತ್ತಿಲ್ಲ” ಎಂದು ಹೇಳಿದ್ದಾರೆ.
ಅಭಿಮಾನಿಗಳ ಪ್ರೀತಿ ಯಾವ ಮಟ್ಟಕ್ಕೆ ಹೋಗಿದೆ ಎಂಬುದನ್ನು ವಿವರಿಸಿದ ಗಿಲ್ಲಿ ನಟ, ದೇಶ ಕಾಯುವ ಯೋಧರು ಕೂಡ ತಮ್ಮ ಪರವಾಗಿ ವಿಡಿಯೋ ಮಾಡಿ ಹರಸಿದ್ದಾರೆ. ಕನ್ನಡಿಗರು ಮಾತ್ರವಲ್ಲದೆ ತಮಿಳುನಾಡು, ಆಂಧ್ರ ಸೇರಿದಂತೆ ಇತರೆ ರಾಜ್ಯದವರು ಮತ್ತು ವಿದೇಶದಲ್ಲಿರುವವರು ಸಹ ಬೆಂಬಲಿಸಿದ್ದಾರೆ. ಸಂಕ್ರಾಂತಿ ಹಬ್ಬದಲ್ಲಿ ರೈತರು ಹಸುಗಳ ಮೇಲೆ ತಮ್ಮ ಚಿತ್ರ ಬಿಡಿಸಿ ಪೋಸ್ಟ್ ಮಾಡಿದ್ದಾರೆ. ಆಟೋ ಚಾಲಕರು ಸ್ಟಿಕ್ಕರ್ ಅಂಟಿಸಿದ್ದಾರೆ. ಕೆಲವರು ತಮಗೆ ಪರಿಚಯವೂ ಇಲ್ಲದೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ನೀಡಿದ ಪ್ರೀತಿ ಮತ್ತು ಪ್ರೋತ್ಸಾಹವನ್ನು ಮರೆಯಲಾರೆ ಎಂದು ಹೇಳಿದ ಅವರು, ಎಲ್ಲಾ ಮೀಡಿಯಾಗಳಿಗೂ ಧನ್ಯವಾದ ಹೇಳಿದ್ದಾರೆ. “ಸೋಶಿಯಲ್ ಮೀಡಿಯಾದಲ್ಲಿ ನನ್ನ ಬಗ್ಗೆ ಒಂದೇ ಒಂದು ನೆಗೆಟಿವ್ ಟ್ರೋಲ್ ವಿಡಿಯೋ ಕೂಡ ನೋಡಿಲ್ಲ. ನಿಮ್ಮ ಪ್ರೀತಿ ಸದಾ ಹೀಗೆಯೇ ಇರಲಿ, ಅದನ್ನು ನಾನು ಜೀವಮಾನಪೂರ್ತಿ ಉಳಿಸಿಕೊಳ್ಳುತ್ತೇನೆ” ಎಂದು ಭರವಸೆ ನೀಡಿದ್ದಾರೆ.



