ಪ್ರಭಾಸ್‌ ನಟನೆಯ “ದಿ ರಾಜಾಸಾಬ್‌” ಸಿನಿಮಾದ “ರೆಬೆಲ್‌ ಸಾಬ್‌” ಹಾಡು ರಿಲೀಸ್

0
Spread the love

ಟಾಲಿವುಡ್‌ ರೆಬಲ್‌ ಸ್ಟಾರ್ ಪ್ರಭಾಸ್‌ ನಾಯಕನಾಗಿ ನಟಿಸಿರುವ “ದಿ ರಾಜಾಸಾಬ್” ಸಿನಿಮಾ ಟ್ರೇಲರ್‌ ಮೂಲಕ ಕೌತುಕ ಸೃಷ್ಟಿಸಿದೆ. ಈ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ತೆರೆಗೆ ಬರುವುದರಿಂದ ಹಿಂದಿ ಬೆಲ್ಟ್‌ನಲ್ಲಿಯೂ ಈ ಚಿತ್ರಕ್ಕೆ ದೊಡ್ಡ ಡಿಮಾಂಡ್‌ ಸೃಷ್ಟಿಯಾಗಿದೆ. ಇದೀಗ ಸಿನಿಮಾದ ಪ್ರಚಾರ ಕೆಲಸದಲ್ಲಿಯೂ ಚಿತ್ರತಂಡ ಬಿಜಿಯಾಗಿದೆ. ಅದರಂತೆ ಇದೀಗ ಇದೇ ಚಿತ್ರದ “ರೆಬೆಲ್‌ ಸಾಬ್” ಹಾಡನ್ನು ಬಿಡುಗಡೆ ಮಾಡಿದೆ ಚಿತ್ರತಂಡ.

Advertisement

ಪಕ್ಕಾ ಟಪ್ಪಾಂಗುಚ್ಚಿ ಶೈಲಿಯಲ್ಲಿ ಮೂಡಿಬಂದಿರುವ “ರೆಬಲ್‌ ಸಾಬ್‌” ಹಾಡಿನಲ್ಲಿ ನಟ ಪ್ರಭಾಸ್‌ ಸಖತ್‌ ಸ್ಟೈಲಿಶ್‌ ಆಗಿ ಕಂಡಿದ್ದಾರೆ. ಕಲರ್‌ ಕಲರ್‌ ಶರ್ಟ್‌ ಧರಿಸಿ, ಹಾಡಿಗೆ ಮಸ್ತ್‌ ಮಸ್ತ್‌ ಡಾನ್ಸ್‌ ಮಾಡಿದ್ದಾರೆ. ಈ ಮೂಲಕ ಸಿನಿಮಾ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿದ್ದು, ಅಭಿಮಾನಿ ವಲಯದಲ್ಲಿ ಸಂಭ್ರಮ ಇಮ್ಮಡಿಯಾಗಿದೆ.

ಅಂದಹಾಗೆ, “ದಿ ರಾಜಾಸಾಬ್‌” ಸಿನಿಮಾಕ್ಕೆ ಸಂಗೀತ ನೀಡಿರುವುದು ಖ್ಯಾತ ಸಂಗೀತ ಸಂಯೋಜಕ ಥಮನ್‌ ಎಸ್. ಆದರೆ, ಈ ವರೆಗೂ ಇದೇ ಚಿತ್ರದ ಒಂದೇ ಒಂದು ಹಾಡಿನ ಝಲಕ್‌ ಹೊರಬಿದ್ದಿರಲಿಲ್ಲ.  ಇದೀಗ ಅವರ ಥಮನ್‌ ಮ್ಯೂಸಿಕ್‌ ಒದಗಿಸಿರೋ “ರೆಬೆಲ್‌ ಸಾಬ್‌” ಹಾಡು ಬಿಡುಗಡೆ ಆಗಿದೆ. ಟಿ ಸಿರೀಸ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ “ರೆಬೆಲ್‌ ಸಾಬ್‌” ಹಾಡು ಹಬ್ಬ ಮಾಡುತ್ತಿದೆ.

ಮಾರುತಿ ನಿರ್ದೇಶನದಲ್ಲಿ ಮೂಡಿಬಂದಿರುವ ಹಾರರ್‌ ಕಾಮಿಡಿ ಶೈಲಿಯ “ದಿ ರಾಜಾ ಸಾಬ್” ಸಿನಿಮಾವನ್ನು ಪೀಪಲ್‌ ಮೀಡಿಯಾ ಫ್ಯಾಕ್ಟರಿ ಸಂಸ್ಥೆ ನಿರ್ಮಾಣ ಮಾಡಿದ್ದು, ಟಿಜಿ ವಿಶ್ವಪ್ರಸಾದ್‌ ಮತ್ತು ಕೃತಿ ಪ್ರಸಾದ್‌ ಈ ಸಿನಿಮಾದ ನಿರ್ಮಾಪಕರು. ಪ್ರಭಾಸ್‌ ನಾಯಕನಾದರೆ, ಸಂಜತ್‌ ದತ್ ಖಳನಾಯಕನಾಗಿದ್ದಾರೆ. ಮಾಳವಿಕಾ ಮೋಹನನ್‌, ನಿಧಿ ಅಗರ್‌ವಾಲ್‌, ರಿದ್ಧಿ ಕುಮಾರ್‌ ಮತ್ತು ಝರೀನಾ ವಹಾಬ್‌ ನಟಿಯರು ಚಿತ್ರದಲ್ಲಿದ್ದಾರೆ.

ಕಥೆ ಬರೆದು ನಿರ್ದೇಶನದ ಜವಾಬ್ದಾರಿಯನ್ನು ಮಾರುತಿ ಹೊತ್ತರೆ, ಥಮನ್‌ ಸವರ ಸಂಗೀತ, ಕಾರ್ತಿಕ್‌ ಪಳನಿ ಅವರ ಛಾಯಾಗ್ರಹಣ, ಕೊಟಗಿರಿ ವೆಂಕಟೇಶ್ವರ್‌ ರಾವ್‌ ಅವರ ಸಂಕಲನ ಚಿತ್ರಕ್ಕಿದೆ. 2026ರ ಜನವರಿ 9ರಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಿನಿಮಾ ತೆರೆಗೆ ಬರಲಿದೆ. ತೆಲುಗು ಜತೆಗೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ವಿಶ್ವದಾದ್ಯಂತ ರಿಲೀಸ್‌ ಆಗಲಿದೆ.

ಭಾರತದ ಅತಿದೊಡ್ಡ ಹಾರರ್ ಫ್ಯಾಂಟಸಿ ಡ್ರಾಮಾ ಎಂದು ಬಿಂಬಿಸಲಾಗಿರುವ ‘ದಿ ರಾಜಾಸಾಬ್’, ಮೇಕಿಂಗ್‌, ದೊಡ್ಡ ಕ್ಯಾನ್ವಾಸ್‌ ಮೂಲಕವೇ ಎಲ್ಲರನ್ನು ನಿಬ್ಬೆರಗಾಗಿಸಿದೆ. ಈ ಚಿತ್ರವು ಭಾರತದಲ್ಲಿ ಇದುವರೆಗೆ ಕಾಣದ ಅತಿದೊಡ್ಡ ಹಾರರ್ ಸೆಟ್ ಹೊಂದಿದೆ. ನೋಡುಗರನ್ನು ಭಯಕ್ಕೆ ಕೆಡವುದರ ಜತೆಗೆ ಆ ದೃಶ್ಯ ವೈಭವವನ್ನು ಮೀರಿ, ಪ್ರೀತಿ, ಕುಟುಂಬ ಮತ್ತು ಪೂರ್ವಜರ ಪರಂಪರೆಯ ವಿಷಯಗಳನ್ನು ಈ ಸಿನಿಮಾದಲ್ಲಿ ಹೇಳಿದ್ದಾರೆ ನಿರ್ದೇಶಕರು. ಬ್ಲಾಕ್ಬಸ್ಟರ್ ಸಿನಿಮಾ ‘ಕಲ್ಕಿ 2898 ಎಡಿ’ ನಂತರ ಮತ್ತೆ ದೊಡ್ಡ ಪರದೆಗೆ ಮರಳುತ್ತಿದ್ದಾರೆ ಪ್ರಭಾಸ್ . ಅವರ ನಟನಾ ಮೋಡಿ, ಮೈನವಿರೇಳಿಸುವ ಆಕ್ಷನ್‌ ಮಿಶ್ರಣ, ಹೊಸ ಪ್ರಭಾಸ್‌ ಎದುರಾಗುವ ಸೂಚನೆ ನೀಡಿದಂತಿದೆ.


Spread the love

LEAVE A REPLY

Please enter your comment!
Please enter your name here